‘‘ಬಾರ್‌ಕೋಲ್ ನನ್ನ ರೂಲ್ ಆಫ್ ಲಾ!’’

Update: 2022-04-20 18:32 GMT

ಪಲ್ಲವ ಪ್ರಕಾಶನ ಪ್ರಕಟಿಸಿರುವ ರೈತನಾಯಕ ಎಂ.ಡಿ.ನಂಜುಂಡಸ್ವಾಮಿಯವರ ಚಿಂತನೆಗಳ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬಿಡುಗಡೆ ಮಾಡಲಿದ್ದಾರೆ.



‘‘ಬಾರ್‌ಕೋಲ್ ನನ್ನ ರೂಲ್ ಆಫ್ ಲಾ!’’ ಇದು ಇಂಡಿಯಾದ ಬಹುದೊಡ್ಡ ರೈತ ನಾಯಕರೂ ಸಮಾಜವಾದಿ ಚಿಂತಕರೂ ಆದ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ರೈತಸಭೆಗಳಲ್ಲಿ ಬಳಸುತ್ತಿದ್ದ ಒಂದು ಚುರುಕು ಮಾತಾಗಿತ್ತು; ನಮ್ಮ ರೈತರ ಬಾಯಲ್ಲಿ ಬರುವ ‘‘ಬಾರ್‌ಕೋಲ್ ತಗೋಬೇಕಾಗುತ್ತೆ’’ ಎಂಬ ಎಚ್ಚರಿಕೆ ಕೂಡ ಎಂಡಿಎನ್‌ಗೆ ಪ್ರಿಯವಾಗಿತ್ತು! ಹೀಗಾಗಿ ಅವರ ಮಾತು, ಚಿಂತನೆ, ಕ್ರಿಯೆಗಳ ಹರಿತ ಹಾಗೂ ತೀಕ್ಷ್ಣತೆಯನ್ನು ಬಿಂಬಿಸುವ ಈ ಪ್ರಾತಿನಿಧಿಕ ಸಂಕಲನಕ್ಕೆ ‘ಬಾರುಕೋಲು’ ಎಂದೇ ಹೆಸರಿಟ್ಟಿದ್ದೇವೆ.

ಎಂಡಿಎನ್ ಅವರ ಎಲ್ಲ ಬಗೆಯ ಪ್ರಾತಿನಿಧಿಕ ಚಿಂತನೆಗಳ ಈ ಪುಸ್ತಕಕ್ಕೆ ‘ಬಾರುಕೋಲು’ ಎಂದು ಹೆಸರಿಡುತ್ತಿರುವಾಗ, ಸಮಾಜವಾದಿ ಚಿಂತಕರಾದ ಪ್ರೊ. ರವಿವರ್ಮಕುಮಾರ್ ಅವರು ‘ಬಾರ್‌ಕೋಲ್ ನನ್ನ ರೂಲ್ ಆಫ್ ಲಾ’ ಎಂದು ಪ್ರೊಫೆಸರ್ ಘೋಷಿಸಿದ ಗಳಿಗೆಯನ್ನು ನೆನಪಿಸಿದರು: ಅದು ಎಂಬತ್ತರ ದಶಕ. ರೈತ ಚಳವಳಿ ನೋವಿನಲ್ಲಿತ್ತು; ಆದರೆ ಸಿಟ್ಟಿಗೆದ್ದಿತ್ತು. ಅಷ್ಟೊತ್ತಿಗಾಗಲೇ 139 ಜನ ರೈತರು ಪೊಲೀಸರ ಹಿಂಸೆಗೆ ಬಲಿಯಾಗಿದ್ದರು. ಶಿವಮೊಗ್ಗದಲ್ಲಿ ರೈತ ಸಮಾವೇಶ ನಡೆಯುತ್ತಿತ್ತು. ದಿನಾ ಕುದುರೆಯ ಮೇಲೆ ಅಡ್ಡಾಡುತ್ತಾ ಬೀದಿಬದಿಯ ವ್ಯಾಪಾರಿಗಳನ್ನು ಚಾವಟಿಯಿಂದ ಹೊಡೆದು ಓಡಿಸುತ್ತಾ ಪೀಡಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ಶಿವಮೊಗ್ಗದ ರೈತ ಸಮಾವೇಶದಲ್ಲೂ ಅಡ್ಡಾಡುತ್ತಿದ್ದುದನ್ನು ಕಂಡು ಎಂಡಿಎನ್ ಖಡಕ್ಕಾಗಿ ಹೇಳಿದರು: ‘‘ಡೆಪ್ಯುಟಿ ಕಮಿಷನರ್ ಅವರೇ! ಯಾರ್ರೀ ಇವನ ಕೈಲಿ ಚಾವಟಿ ಕೊಟ್ಟೋರು? ಇವನಿಗೆ ಸಂಬಳ ಕೊಡೋರು ನಾವು. ಇವನಿಗೆ ಬಟ್ಟೆ ಕೊಡೋರು ನಾವು. ಇನ್ನು ಐದು ನಿಮಿಷ ಕೊಡ್ತೀನಿ, ಇವನ ಚಾವಟೀನ ನೀವು ಕಿತ್ತುಕೊಳ್ಳದಿದ್ರೆ ನಮ್ಮ ರೈತರು ಅದನ್ನು ಕಿತ್ತುಕೊಳ್ತಾರೆ. ಬಾರ್‌ಕೋಲ್ ನನ್ನ ರೂಲ್ ಆಫ್ ಲಾ!’’ ಮುಂದಿನ ಐದು ನಿಮಿಷದಲ್ಲಿ ಪೊಲೀಸ್ ಅಧಿಕಾರಿ ಅಲ್ಲಿಂದ ಮಾಯವಾಗಿದ್ದ!

ಎಂಡಿಎನ್ ಪ್ರಕಾರ, ಅಧಿಕಾರಿಗಳ ಕೈಯಲ್ಲಿದ್ದ ಚಾವಟಿಯನ್ನು, ಬಾರುಕೋಲನ್ನು ಕಿತ್ತುಕೊಳ್ಳುವುದು ಕೂಡ ರೈತ ಚಳವಳಿಯ ‘ಡೈರೆಕ್ಟ್ ಆ್ಯಕ್ಷನ್’ ಅಥವಾ ನೇರ ಕ್ರಿಯೆಯ ಭಾಗವೇ ಆಗಿತ್ತು! ಕ್ರಿಯೆಯ ಜೊತೆಗೆ ಬೆರೆಯದ ಚಿಂತನೆಗಳನ್ನು ಅಷ್ಟಾಗಿ ಒಲ್ಲದ ರಾಮಮನೋಹರ ಲೋಹಿಯಾ ‘ಚಿಂತನೆಗಳನ್ನು ಬರಿದೆ ಚೆಲ್ಲಿ ಫಲವೇನು?’ ಎಂದು ಪ್ರಶ್ನಿಸುತ್ತಿದ್ದರು. ಲೋಹಿಯಾ ಹಾದಿಯಲ್ಲೇ ನಡೆದಿದ್ದ ಎಂಡಿಎನ್ ಕೂಡ ತಮ್ಮ ಚಿಂತನೆಗಳನ್ನು ‘ಡೈರೆಕ್ಟ್ ಆ್ಯಕ್ಷನ್’ ಜೊತೆಗೆ ಬೆಸೆಯುತ್ತಿದ್ದರು. ಈ ನೇರ ಕ್ರಿಯೆಗೆ ತಳಹದಿಯಾಗಿ ಆಳವಾದ ಬೌದ್ಧಿಕ ತಿಳುವಳಿಕೆ ಹಾಗೂ ಇಂಡಿಯಾದ ಸಂವಿಧಾನದ ಗ್ರಹಿಕೆಯೂ ಮುಖ್ಯವೆಂಬುದನ್ನು ಅವರು ಅರಿತಿದ್ದರು. ತಾವು ಪಾಠ ಮಾಡುತ್ತಿದ್ದ ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಲೇಖಕರಿಗೆ, ಸಾರ್ವಜನಿಕರಿಗೆ, ಚಳವಳಿಗಳಿಗೆ ಹಾಗೂ ಮುಖ್ಯವಾಗಿ ರೈತಾಪಿ ಮಹಿಳೆಯರೂ ಸೇರಿದಂತೆ ಒಟ್ಟು ರೈತವರ್ಗಕ್ಕೆ ಸಂವಿಧಾನದತ್ತ ಹಕ್ಕುಗಳನ್ನು, ಸಂವಿಧಾನದ ಆಶಯಗಳನ್ನು, ತಾತ್ವಿಕತೆಯನ್ನು ಅವರಂತೆ ತಲುಪಿಸಿದವರು ಕರ್ನಾಟಕದಲ್ಲಿ ಇನ್ನೊಬ್ಬರಿಲ್ಲ.

ಹಲವು ದಶಕಗಳ ಕಾಲ ಶಾಸನಸಭೆಯ ಹೊರಗೆ ಗಂಭೀರ ಚಿಂತನೆಗಳನ್ನು ಚಳವಳಿಗಳ ಜೊತೆಗೆ ಬೆಸೆದಿದ್ದ ಎಂಡಿಎನ್ ಶಾಸಕರಾದ ಕಾಲದಲ್ಲಿ ತಮ್ಮ ಚಿಂತನೆಗಳನ್ನೆಲ್ಲ ವಿಧಾನಸಭೆಯಲ್ಲಿ ಶಾಸನವಾಗಲು ತಕ್ಕ ಚೌಕಟ್ಟಿನಲ್ಲಿ ಮಂಡಿಸಿದ್ದರು. ಮೀಸಲಾತಿಯ ಪ್ರಮಾಣ ಹೆಚ್ಚಿಸುವುದು, ರೈತರ ಬೆಳೆಯ ಬೆಲೆ ನಿಗದಿ ಮಾಡುವುದು, ಜಲ ವಿವಾದ ಕುರಿತು ನಿಲುವು... ಇವೆಲ್ಲ ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲೇ ಇರುವುದನ್ನು ಅವರು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ದಿಟ್ಟ ನಿಲುವುಗಳನ್ನು ತಾಳಲಾರದ ಸರಕಾರವನ್ನು ‘‘ನಿಮ್ಮದು ಮುನಿಸಿಪಾಲಿಟಿಯೋ? ರಾಜ್ಯ ಸರಕಾರವೋ?’’ ಎಂದು ಛೇಡಿಸಿದರು. ಸಾಮ್ರಾಜ್ಯಶಾಹಿ ಯೋಜನೆಗಳನ್ನು ಮುಂದುವರಿಸಿಕೊಂಡೇ ಬಂದಿರುವ ನಮ್ಮ ಸರಕಾರಗಳ ಮೂರ್ಖತನವನ್ನು ಎಂಡಿಎನ್ ಎತ್ತಿ ತೋರಿಸಿದರು: ‘‘ಬ್ರಿಟಿಷರು ಬಂದಾಗ, ನಮ್ಮ ದೇಶದಲ್ಲಿ ಕೆಲವರು ಒಳ್ಳೆಯ ಮಸ್ಲಿನ್ ಬಟ್ಟೆಯನ್ನು ನೇಯುತ್ತಿದ್ದರು.

ಉಗುರನ್ನು ಬೆಳೆಸಿ, ಉಗುರಿನ ರಂಧ್ರದಿಂದ ನೂಲು ತೆಗೆದು ಬಟ್ಟೆ ತಯಾರು ಮಾಡುತ್ತಿದ್ದರು. ಅವರು ತಯಾರಿಸಿದ ನೂರಾರು ಮೀಟರ್ ಬಟ್ಟೆಯನ್ನು ಒಂದು ಬೆಂಕಿಪೊಟ್ಟಣದೊಳಗೆ ಇಡಬಹುದಾಗಿತ್ತು ಎಂದು ಚರಿತ್ರೆಯಲ್ಲಿ ಓದಿದ್ದೇವೆ. ಆ ಬಟ್ಟೆ ತಯಾರಿಸುವವರ ಬೆರಳುಗಳನ್ನು ಯಾರು ಕತ್ತರಿಸಿದರು ಎಂದು ಗೊತ್ತಿದೆಯಲ್ಲಾ ತಮಗೆ? ನಿಮ್ಮ ಕೈಗಾರಿಕಾ ನೀತಿಗೂ ಬ್ರಿಟಿಷರ ಕೈಗಾರಿಕಾ ನೀತಿಗೂ ಏನೂ ವ್ಯತ್ಯಾಸವಿಲ್ಲ.’’ ಅಂದಿನ ವಿಧಾನಸಭೆಯ ಕೆಲವು ಶಾಸಕರಾದರೂ ಎಂಡಿಎನ್ ಅವರ ಮಾತುಗಳನ್ನು ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದರು. ಎಂಡಿಎನ್ ಮಾತಿನ ಮೊನಚು, ವ್ಯವಸ್ಥೆಯನ್ನು ಎಚ್ಚರಿಸುವ ವ್ಯಂಗ್ಯ, ವಿದ್ವತ್ತು, ಜವಾಬ್ದಾರಿಯುತ ನೋಟ ಶಾಸಕರಿಗೆ ನಿತ್ಯ ಪಾಠದಂತಿತ್ತು; ಶಾಸಕರು, ಮಂತ್ರಿಗಳು ಹೇಗೆ ಯೋಚಿಸಬೇಕೆಂಬುದನ್ನೂ ಕಲಿಸುವಂತಿತ್ತು. ಪೂರ್ಣಚಂದ್ರ ತೇಜಸ್ವಿ ಒಮ್ಮೆ ಲೋಹಿಯಾ ಅವರನ್ನು ‘ಇಂಡಿಯಾದ ಒರಿಜಿನಲ್ ಥಿಂಕರ್’ ಎಂದು ಕರೆದಿದ್ದರು.

ಇವತ್ತು ಎಂಡಿಎನ್ ಬರಹಗಳನ್ನು ನೋಡುತ್ತಿದ್ದರೆ, ಅವರು ನಿಜಕ್ಕೂ ಕರ್ನಾಟಕದ ಹಾಗೂ ಕನ್ನಡ ಭಾಷೆಯ ಅತ್ಯಂತ ಒರಿಜಿನಲ್ ಥಿಂಕರ್ ಎಂಬುದು ಸ್ಪಷ್ಟವಾಗುತ್ತದೆ. ಸರಕಾರಿ ಯೋಜನೆಗಳನ್ನು ನಿಯಂತ್ರಿಸುವ ಸಾಮ್ರಾಜ್ಯಶಾಹಿ ಚಿಂತನೆಗಳು, ಡಂಕಲ್ ಪ್ರಸ್ತಾವನೆಯ ಭಯಾನಕ ಪರಿಣಾಮಗಳು, ಅಂಕಿ-ಅಂಶಗಳ ಜಾಲದಲ್ಲಿ ಸರಕಾರಗಳು ಮುಚ್ಚಿಡುವ ಸತ್ಯಗಳು, ಮೂಲಭೂತವಾದದ ಅಪಾಯಗಳು, ಖಾಸಗೀಕರಣ, ವಿಕೇಂದ್ರೀಕರಣ, ಬರಗಾಲ ನಿರ್ವಹಣೆ ಮತ್ತು ಬರಗಾಲಕ್ಕೆ ಶಾಶ್ವತ ಪರಿಹಾರ, ಬೆಳೆಗಳಿಗೆ ಅವೈಜ್ಞಾನಿಕ ಬೆಲೆ ನಿಗದಿಯ ಹುನ್ನಾರ, ‘ರೈತರಿಗೆ ಸಬ್ಸಿಡಿ ಬೇಡ; ವೈಜ್ಞಾನಿಕ ಬೆಲೆ ನಿಗದಿ ಮಾಡಿ’ ಎಂಬ ಒತ್ತಾಯ, ಸಾಮಾಜಿಕ ನ್ಯಾಯ, ಜಾತಿವಿನಾಶ, ಬೀಜ ಸತ್ಯಾಗ್ರಹ, ವೈಜ್ಞಾನಿಕ ಶಿಕ್ಷಣ, ಬಗರ್ ಹುಕುಂ ಸಮಸ್ಯೆ, ಮೀಸಲಾತಿಯ ಪ್ರಮಾಣ, ಮೀಸಲಾತಿಯ ಮರುವ್ಯಾಖ್ಯಾನ, ಕಾವೇರಿ ನೀರಿನ ಹಂಚಿಕೆ- ಹೀಗೆ ಹಲವು ವಲಯಗಳ ಬಗ್ಗೆ ಆಳವಾದ ವಿಶ್ಲೇಷಣೆಗಳು ಹಾಗೂ ಸಮಸ್ಯೆಗಳಿಗೆ ಖಚಿತ ಪರಿಹಾರಗಳು ಅವರ ಚಿಂತನೆಗಳಲ್ಲಿವೆ.

ಈ ಪುಸ್ತಕದ ಮೊದಲ ಭಾಗದಲ್ಲಿ ಸಮಾಜವಾದಿ ‘ತಾತ್ವಿಕ ಚಿಂತನೆ’ಯ ಬರಹಗಳಿವೆ. ಭಾಗ-2ರಲ್ಲಿ ಗ್ರಾಮ ಸಮಾಜ, ರೈತರು ಮತ್ತು ಹೋರಾಟ ಕುರಿತ ಚಿಂತನೆಗಳಿವೆ. ಭಾಗ-3ರಲ್ಲಿ ಸಂಸ್ಕೃತಿ ಚಿಂತನೆಯ ಬರಹಗಳಿವೆ. ಈ ಬರಹಗಳನ್ನು ಓದುಗರು ವ್ಯವಧಾನದಿಂದ ಆಳವಾಗಿ ಅಧ್ಯಯನ ಮಾಡಿ, ಎಂಡಿಎನ್ ಅವರ ಸಮಾಜವಾದಿ ತಾತ್ವಿಕ ಚೌಕಟ್ಟುಗಳನ್ನು ಹಾಗೂ ಹೋರಾಟದ ಚಿಂತನೆಗಳನ್ನು ಅರ್ಥ ಮಾಡಿಕೊಂಡರೆ ಕನ್ನಡ ನೆಲದಲ್ಲಿ ಹುಟ್ಟಿದ ಸಮಾಜವಾದಿ ಚಿಂತನೆಯ ಸ್ವರೂಪ, ಆಳ ಹಾಗೂ ನಿತ್ಯದ ವಿದ್ಯಮಾನಗಳಿಗೆ ಸಮಾಜವಾದಿ ಚಿಂತನೆಗಳನ್ನು ಅನ್ವಯಿಸುವ ಕ್ರಮದ ಅರಿವಾಗುತ್ತದೆ.

ಎಂಡಿಎನ್ ಅವರ ಹಲವು ದಿಕ್ಕಿನ ಖಡಕ್ ಚಿಂತನೆಗಳ ಬಾರುಕೋಲು ಸಂಕಲನದಲ್ಲಿ ಅವರ ಚಾಟಿಯೇಟಿನಂಥ ಮಾತು, ಡೈರೆಕ್ಟ್ ಆ್ಯಕ್ಷನ್‌ನ ಖದರ್ ಜೊತೆಗೇ ಲೋಹಿಯಾವಾದ, ಗಾಂಧಿವಾದ, ಧರ್ಮ, ಸಂಸ್ಕೃತಿ, ಕುವೆಂಪು ಮಾರ್ಗಗಳ ವಿಶ್ಲೇಷಣೆಗಳೂ ಇವೆ. ಕನ್ನಡನಾಡಿನಲ್ಲಿ ನಡೆಯುತ್ತಾ ಬಂದಿರುವ ಜನತಾ ಹೋರಾಟಗಳ ನಡುವೆ ಮೂಡಿದ ಇಲ್ಲಿನ ಅಪ್ಪಟ ಕನ್ನಡ ಸಮಾಜವಾದಿ ಚಿಂತನೆಗಳು ಎಲ್ಲ ಕಾಲದ ಚಳವಳಿಗಳ ನಾಯಕರು, ರಾಜಕಾರಣಿಗಳು, ಹೋರಾಟಗಾರರು ಹಾಗೂ ಚಿಂತಕ, ಚಿಂತಕಿಯರಿಗೆ ಹೊಸ ಹಾದಿ ತೋರಬಲ್ಲವು.

Writer - ನಟರಾಜ್ ಹುಳಿಯಾರ್

contributor

Editor - ನಟರಾಜ್ ಹುಳಿಯಾರ್

contributor

Similar News

ಸಲ್ಮಾತು