ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಕರ್ನಾಟಕ ಆರ್ ಟಿಐ ಕಾರ್ಯಕರ್ತರ ರಾಜ್ಯ ಸಮಿತಿ ಆಗ್ರಹ

Update: 2022-04-24 09:56 GMT
ಎಚ್.ಎಂ.ವೆಂಕಟೇಶ್

ಬೆಂಗಳೂರು: ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆದಿದ್ದು, ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಆರ್‌ಟಿಐ ಕಾರ್ಯಕರ್ತರ ರಾಜ್ಯ ಸಮಿತಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ  ರಾಜ್ಯದ ಇತರ ಉನ್ನತ ಅಧಿಕಾರಿಗಳಿಗೆ ರವಿವಾರ ಪತ್ರ ಬರೆದಿದೆ.

ಎಪ್ರಿಲ್ 21 ರಂದು ನಡೆದ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಬಂಧಿಸಿ ಕೊಲೆ ಯತ್ನದ ಬಗ್ಗೆ ವಿವರವಾಗಿ ವಿಚಾರಿಸದೆ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದು ಸಮಿತಿಯು ಪತ್ರದಲ್ಲಿ ಮುಖ್ಯಮಂತ್ರಿಯ ಗಮನಕ್ಕೆ ತಂದಿದೆ.

"ಅಂದಿನಿಂದ ಪದೇ ಪದೇ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದರಿಂದ ತನ್ನ ಜೀವಕ್ಕೆ ಅಪಾಯವಿರುವುದರಿಂದ ತಕ್ಷಣ ರಕ್ಷಣೆ ನೀಡಬೇಕೆಂದು ವೆಂಕಟೇಶ್ ಒತ್ತಾಯಿಸಿದ್ದಾರೆ. ಈಗಾಗಲೇ ಎರಡು ವರ್ಷಗಳಿಂದ ಪೊಲೀಸ್ ರಕ್ಷಣೆ ಕೋರಿ ಅಧಿಕಾರಿಗಳ ಮುಂದೆ ಹಲವಾರು ಮನವಿ ಸಲ್ಲಿಸಿದ್ದಾರೆ. ಆದರೆ, ಇಂದಿನವರೆಗೂ ಪೊಲೀಸ್ ರಕ್ಷಣೆ ಒದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆದಷ್ಟು ಬೇಗ ಸೂಕ್ತ ಪೊಲೀಸ್ ರಕ್ಷಣೆಯನ್ನು ಒದಗಿಸಲು ನಾವು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇವೆ ”ಎಂದು ಪತ್ರದಲ್ಲಿ ಬರೆಯಲಾಗಿದೆ.

"ಎಚ್.ಎಂ. ವೆಂಕಟೇಶ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಹಾಗೂ  ಸಾರ್ವಜನಿಕ ಹಿತಾಸಕ್ತಿಯಲ್ಲಿ ನ್ಯಾಯದ ಅನ್ವೇಷಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರು ಗೌರವಾನ್ವಿತ ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಪ್ರಮುಖ ವ್ಯಕ್ತಿಗಳ ಸಾರ್ವಜನಿಕ ಆಡಳಿತದಲ್ಲಿನ ವಿವಿಧ ಅಕ್ರಮಗಳನ್ನು ಬಹಿರಂಗಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಎಪ್ರಿಲ್ 21 ರ ಘಟನೆಯನ್ನು ವಿವರವಾಗಿ ತನಿಖೆ ಮಾಡುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News