ತೈಲ ಸಬ್ಸಿಡಿಗೆ 1,500 ಕೋ.ರೂ. ವೆಚ್ಚ: ಮಮತಾ ಬ್ಯಾನರ್ಜಿ

Update: 2022-04-27 17:26 GMT

ಕೋಲ್ಕತಾ, ಎ 27: ತನ್ನ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಬ್ಸಿಡಿಗೆ ಕಳೆದ ಮೂರು ವರ್ಷ 1,500 ಕೋಟಿ ರೂಪಾಯಿಗಳನ್ನು ಸರಕಾರ ವೆಚ್ಚ ಮಾಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ. 

ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸುವ ಸಂದರ್ಭ ಪ್ರಧಾನ ಮೋದಿ ಅವರು, ಮಹಾರಾಷ್ಟ್ರ, ಕೇರಳ ಹಾಗೂ ಪಶ್ಚಿಮಬಂಗಾಳದಂತಹ ಬಿಜೆಪಿಯೇತರ ಪಕ್ಷದ ಸರಕಾರ ಇರುವ ರಾಜ್ಯಗಳಲ್ಲಿ ತೈಲ ಬೆಲೆ ಏರಿಕೆಯ ಬಗ್ಗೆ ಗಮನ ಸೆಳೆದಿದ್ದರು. ಅಲ್ಲದೆ, ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ವ್ಯಾಟ್ ಅನ್ನು ಕಡಿತಗೊಳಿಸುವಂತೆ ರಾಜ್ಯ ಸರಕಾರಗಳಲ್ಲಿ ಮನವಿ ಮಾಡಿದ್ದರು. ಇದಾದ ಗಂಟೆಗಳ ಬಳಿಕ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆ ನೀಡಿದ್ದಾರೆ. 

‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇಂದಿನ ಸಂವಹನ ಸಂಪೂರ್ಣವಾಗಿ ಏಕಪಕ್ಷೀಯ ಹಾಗೂ ದಾರಿತಪ್ಪಿಸುವ ರೀತಿಯಲ್ಲಿತ್ತು. ಅವರು ಹಂಚಿಕೊಂಡ ವಿಷಯಗಳು ತಪ್ಪಾಗಿದ್ದವು. ನಾವು ಕಳೆದ ಮೂರು ವರ್ಷಗಳಿಂದ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‌ಗೆ 1 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ಇದಕ್ಕಾಗಿ ನಾವು 1,500 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ’ಎಂದು ಮಮತಾ ಬ್ಯಾನರ್ಜಿ ಅವರು ಸೆಕ್ರೇಟರಿಯೇಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ ಹೇಳಿದರು. 

ಈ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಇರಲಿಲ್ಲ. ಆದುದರಿಂದ ಪ್ರಧಾನಿ ಅವರ ಹೇಳಿಕೆಗೆ ಯಾರೂ ಪ್ರತ್ಯುತ್ತರ ನೀಡಿಲ್ಲ ಎಂದು ಅವರು ತಿಳಿಸಿದರು. ಕೋವಿಡ್ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಅವರು ತೈಲ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದು ಉತ್ತಮವಲ್ಲ. ಇದು ಅಜೆಂಡಾ ಎಂದು ಮಮತಾ ಬ್ಯಾನರ್ಜಿ ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News