ಆ್ಯಸಿಡ್ ದಾಳಿ ಮಾಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ಖಚಿತ: ಆರೋಗ್ಯ ಸಚಿವ ಡಾ.ಸುಧಾಕರ್

Update: 2022-04-30 11:58 GMT

ಬೆಂಗಳೂರು, ಎ. 30: ‘ಇಲ್ಲಿನ ಸುಂಕದಕಟ್ಟೆ ಬಳಿ ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ಥ ಯುವತಿಗೆ 5ಲಕ್ಷ ರೂ.ಗಳ ವೈಯಕ್ತಿಕ ಧನಸಹಾಯ ನೀಡಿದ್ದು, ಆಸಿಡ್ ದಾಳಿ ನಡೆಸಿದ ವ್ಯಕ್ತಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ಕೊಡಿಸಲಾಗುವುದು' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಭರವಸೆ ನೀಡಿದ್ದಾರೆ. 

ಶನಿವಾರ ಇಲ್ಲಿನ ಸೈಂಟ್‍ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆಯನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ‘ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಕುಟುಂಬಸ್ಥರು ಮಾನಸಿಕ ಧೈರ್ಯ ತಂದುಕೊಳ್ಳಬೇಕು. ಸರಕಾರ ಸಂತ್ರಸ್ಥೆಯ ಜೊತೆ ಇರಲಿದೆ. ಎಲ್ಲ ರೀತಿಯ ಚಿಕಿತ್ಸೆಗಳನ್ನು ಸರಕಾರ ನೀಡಲಿದೆ' ಎಂದು ಹೇಳಿದರು.  

‘ಸಂತ್ರಸ್ಥೆಯ ಜೊತೆ ಸರಕಾರ, ಆರೋಗ್ಯ ಇಲಾಖೆ ಇರಲಿದೆ. ಯುವತಿಯ ಪೋಷಕರ ನೋವು ಸರಕಾರಕ್ಕೆ ಅರ್ಥವಾಗುತ್ತದೆ. ಘಟನೆಯ ವಿಷಯ ತಿಳಿದು ಅತೀವ ದುಃಖವಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಮಹಾ ಕ್ರೌರ್ಯವನ್ನು ಒಬ್ಬ ವ್ಯಕ್ತಿ ಹೇಗೆ ಮಾಡುತ್ತಾನೆ ಅನ್ನುವುದು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಅಗತ್ಯವಿದೆ' ಎಂದು ಹೇಳಿದರು.

‘ಸೈಂಟ್ ಜಾನ್ಸ್ ಆಸ್ಪತ್ರೆಯ ಜೊತೆ ಬೆಂಗಳೂರು ಮೆಡಿಕಲ್ ಕಾಲೇಜು ಯುವತಿಯ ಶಸ್ತ್ರ ಚಿಕಿತ್ಸೆಗೆ ನೆರವು ನೀಡಲಿದೆ. ಸಂತ್ರಸ್ತ ಯುವತಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಯುವತಿಗೆ ಅಗತ್ಯವಿರುವ ಚರ್ಮ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದೇನೆ' ಎಂದು ಪ್ರಕಟಿಸಿದರು.

‘ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೆ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರಕಾರ ಬದ್ಧ. ಈ ರೀತಿಯ ಅಮಾನವೀಯ ದುಷ್ಕøತ್ಯಗಳು ಮರುಕಳಿಸದಂತೆ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ, ಯುವತಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸುವತ್ತ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ' ಎಂದು ಸುಧಾಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News