ಮಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರಕ್ಕೆ ಚಾಲನೆ

Update: 2022-05-01 15:37 GMT

ಬಜ್ಪೆ : ಮಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರಕ್ಕೆ ರವಿವಾರ ಸಂಜೆ ಚಾಲನೆ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ನಡೆದ ಬಳಿಕ 48 ಮಂದಿ ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ರವಿವಾರ ಸಂಜೆ 6.50ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಮಂಗಳೂರು-ಹುಬ್ಬಳ್ಳಿ ಮಧ್ಯೆ ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಸಹಿತ ವಾರದಲ್ಲಿ 4 ದಿನ ಇಂಡಿಗೋ ವಿಮಾನವು ಸಂಚಾರ ನಡೆಸಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ಟೇಕಾಫ್ ಆಗುವ ವಿಮಾನವು ಸಂಜೆ 6.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.

ಮಂಗಳೂರಿನಿಂದ ಸಂಜೆ 6.35ಕ್ಕೆ ಟೇಕಾಫ್ ಆಗಲಿರುವ ವಿಮಾನವು ರಾತ್ರಿ 7.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.

ರವಿವಾರ ಮೊದಲ ವಿಮಾನ ಲ್ಯಾಂಡ್ ಆಗಿ ಪಾರ್ಕಿಂಗ್ ಜಾಗಕ್ಕೆ ಬರುತ್ತಿದ್ದಂತೆ ವಾಟರ್ ಸೆಲ್ಯೂಟ್ ಸ್ವಾಗತ ನೀಡಲಾಯಿತು. ಹಿರಿಯ ಅಧಿಕಾರಿ ವಿನೋದ್ ರಂಗನಾಥ್ ಮತ್ತು ಕ್ಯಾಬಿನ್ ಸಿಬ್ಬಂದಿ ಆನಂದಿತಾ ದಾಸ್ ಹಾಗೂ ಸಂಗಮಿ ಮಂಡ, ಕ್ಯಾಪ್ಟನ್ ಗುರುಪ್ರೀತ್ ಸಿಂಗ್ ಸುಡಾನ್ ಪಾಲ್ಗೊಂಡರು.

ಟರ್ಮಿನಲ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಸಂಭ್ರಮಿಸಿದರು. ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿರನ್ನು ಹೂ ಹಾಗೂ ಕೇಕ್ ನೀಡಿ ಸ್ವಾಗತಿಸಲಾಯಿತು. ಅಲ್ಲದೆ ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಸಿದ್ಧರಾಗಿದ್ದ 36 ಮಂದಿ ಪ್ರಯಾಣಿಕರನ್ನು ಬೀಳ್ಕೊಟ್ಟು ಶುಭ ಹಾರೈಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News