ಮೂರಂಕಿಗಿಂತ ಕೆಳಗಿಳಿದ ಬಿಜೆಪಿ ರಾಜ್ಯಸಭಾ ಸದಸ್ಯರ ಸಂಖ್ಯೆ

Update: 2022-05-05 01:53 GMT

ಹೊಸದಿಲ್ಲಿ: ಮೊಟ್ಟಮೊದಲ ಬಾರಿಗೆ ರಾಜ್ಯಸಭೆಯಲ್ಲಿ 100 ಸ್ಥಾನಗಳನ್ನು ದಾಟಿದ ಒಂದು ತಿಂಗಳ ಬಳಿಕ ಮೇಲ್ಮನೆಯಲ್ಲಿ ಮತ್ತೆ ಬಿಜೆಪಿ ಸದಸ್ಯ ಬಲ 95ಕ್ಕೆ ಕುಸಿದಿದೆ. ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದ ಐದು ಮಂದಿ ಸದಸ್ಯರು ಕಳೆದ ಹತ್ತು ದಿನಗಳಲ್ಲಿ ನಿವೃತ್ತರಾಗಿರುವುದು ಇದಕ್ಕೆ ಕಾರಣ.

ಆದರೆ ಈ ವರ್ಗದಲ್ಲಿ ಒಟ್ಟು ಏಳು ಮಂದಿಯನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆಡಳಿತಾರೂಢ ಪಕ್ಷದ ಸದಸ್ಯಬಲ ಮೂರಂಕಿ ತಲುಪಲಿದೆ. ಆದರೆ ಹೊಸ ಸದಸ್ಯರು ಬಿಜೆಪಿ ಸದಸ್ಯತ್ವ ಪಡೆಯತ್ತಾರೆಯೇ ಅಥವಾ ನಾಮಕರಣಗೊಂಡ ಬಳಿಕವೂ ತಟಸ್ಥವಾಗಿರುತ್ತಾರೆಯೇ ಎಂಬ ನಿರ್ಧಾರದ ಮೇಲೆ ಬಿಜೆಪಿಯ ಸದಸ್ಯರ ಸಂಖ್ಯೆ ಸ್ಪಷ್ಟವಾಗಲಿದೆ. ಆದರೆ ಆಡಳಿತ ಪಕ್ಷ/ ಮೈತ್ರಿಕೂಟಕ್ಕೆ ಈ ಸದಸ್ಯರ ನೇರ ಅಥವಾ ಪರೋಕ್ಷ ಬೆಂಬಲ ಸದನದಲ್ಲಿ ಲಭ್ಯವಾಗಲಿದೆ.

ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮುನ್ನ ಸರ್ಕಾರ ನಾಮಕರಣ ಮಾಡಲಿರುವ ಏಳು ಸದಸ್ಯರ ಜತೆಗೆ ಇತರ ಹೊಸ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ 53 ಸ್ಥಾನಗಳಿಗೆ ಜೂನ್- ಜುಲೈ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಜೂನ್ ಮತ್ತು ಜುಲೈನಲ್ಲಿ 33 ಸದಸ್ಯರು ನಿವೃತ್ತರಾಗಲಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸದಸ್ಯಬಲವನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಖಾಲಿಯಾಗಲಿರುವ 53 ಸ್ಥಾನಗಳ ಪೈಕಿ 11 ಉತ್ತರ ಪ್ರದೇಶದಲ್ಲಿವೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಸಲೀಸಾಗಿ ಗೆಲ್ಲಿಸಲು ಆಡಳಿತ ಪಕ್ಷಕ್ಕೆ ಯಾವ ಅಡಚಣೆಯೂ ಇಲ್ಲ. ಲೋಕಸಭೆ ಮತ್ತು ಹಲವು ವಿಧಾನಸಭೆಗಳಲ್ಲಿ ಭಾರಿ ಬಹುಮತ ಹೊಂದಿದ್ದು, ಎನ್‍ಡಿಎ ಅಭ್ಯರ್ಥಿ, ಬಿಜೆಡಿ ಹಾಗೂ ವೈಎಸ್‍ಆರ್ ಕಾಂಗ್ರೆಸ್‍ನಂಥ ಒಂದು ಅಥವಾ ಹೆಚ್ಚು ಎನ್‍ಡಿಎ ಮತ್ತು ಯುಪಿಎ ಕೂಟದ ಸದಸ್ಯರಲ್ಲದ ಪಕ್ಷಗಳಿಂದಲೂ ಬೆಂಬಲ ಪಡೆಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News