ಅಲ್ಪಸಂಖ್ಯಾತರನ್ನು ಗುರುತಿಸಲು ರಾಜ್ಯಗಳ ಜೊತೆ ಸಮಾಲೋಚನೆ : ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2022-05-10 15:16 GMT

  ಹೊಸದಿಲ್ಲಿ,ಮೇ 10: ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ಗುರುತಿಸುವ ವಿಚಾರದಲ್ಲಿ ಕೇಂದ್ರ ಸರಕಾರವು ರಾಜ್ಯ ಮಟ್ಟದಲ್ಲಿ ವಿಭಿನ್ನವಾದ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಮಂಗಳವಾರ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಈ ವಿಷಯದ ಬಗ್ಗೆ ಮೂರು ತಿಂಗಳುಗಳೊಳಗೆ ರಾಜ್ಯ ಸರಕಾರಗಳ ಜೊತೆ ಸಮಾಲೋಚನೆಯನ್ನು ನಡೆಸುವಂತೆ ಅದು ನಿರ್ದೇಶಿಸಿದೆ.

 ತನ್ನ ಈ ಹಿಂದಿನ ನಿಲುವಿನಿಂದ ಹಿಂದೆ ಸರಿದಿರುವ ಕೇಂದ್ರ ಸರಕಾರವು ಸೋಮವಾರ ಸುಪ್ರೀಂಕೋರ್ಟ್ ಮುಂದೆ ನೀಡಿದ ಹೇಳಿಕೆಯಲ್ಲಿ ಅಲ್ಪಸಂಖ್ಯಾತರನ್ನು ಅಧಿಸೂಚಿಸುವ ಅಧಿಕಾರವು ಕೇಂದ್ರ ಸರಕಾರದ್ದಾಗಿದೆ ಹಾಗೂ ರಾಜ್ಯಗಳು ಹಾಗೂ ಸಂಬಂಧಪಟ್ಟ ಇತರ ಪಾಲುದಾರರ ಜೊತೆ ಮಾತುಕತೆಗಳನ್ನು ನಡೆಸಿದ ಬಳಿಕಷ್ಟೇ ಈ ವಿಷಯವಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
 ಕೇಂದ್ರ ಸರಕಾರವು ಈ ಹಿಂದೆ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ಗೆ ನೀಡಿದ ಹೇಳಿಕೆಯಲ್ಲಿ ಹಿಂದೂಗಳು ಹಾಗೂ ಇತರ ಸಮುದಾಯಗಳು ಯಾವ್ಯಾವ ರಾಜ್ಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಿರುವರೋ ಅಲ್ಲಿ ಅವರಿಗೆ ಅಲ್ಪಸಂಖ್ಯಾತ ಸ್ಥಾನವನ್ನು ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವುದು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದಾಗಿದೆ ಎಂದು ಹೇಳಿಕೊಂಡಿತ್ತು.


 ‘‘ ಅಲ್ಪಸಂಖ್ಯಾತರನ್ನು ಗುರುತಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇರುವುದಾಗಿ ಈಗ ನೀವು ಹೇಳುತ್ತಿರುವಿರಿ. ಅಪಾರವಾದ ವೈವಿಧ್ಯತೆಯಿರುವ ನಮ್ಮಂತಹ ದೇಶದಲ್ಲಿ ಸರಕಾರವು ಅತ್ಯಂತ ಜಾಗರೂಕತೆಯ ನಿಲುವನ್ನು ವಹಿಸಬೇಕು. ಇಂತಹ ಅಫಿಡವಿಟ್ ಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದರಿಂದ ಅದರದ್ದೇ ಅದ ಪರಿಣಾಮಗಳುಂಟಾಗಲಿವೆ. ಹೀಗಾಗಿ ನೀವು ಏನನ್ನಾದರೂ ಹೇಳುವಾಗ ಅತ್ಯಂತ ಜಾಗರೂಕತೆಯಿಂದ ವರ್ತಿಸಬೇಕು’’ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರಕ್ಕೆ ಕಿವಿಮಾತು ಹೇಳಿತು.

 ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು ಸಲ್ಲಿಸಿರುವ ಹೊಸ ಅಫಿಡವಿಟ್, ಅದು ತನ್ನ ಈ ಹಿಂದಿನ ಅಫಿಡವಿಟ್ ನಲ್ಲಿ ಏನನ್ನು ಹೇಳಿದೆಯೋ ಅದರಿಂದ ಹಿಂದೆ ಸರಿದಂತೆ ಭಾಸವಾಗುತ್ತದೆ. ಇದನ್ನು ನಾವು ಶ್ಲಾಘಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

‘‘ ಅಲ್ಪಸಂಖ್ಯಾತರನ್ನು ಗುರುತಿಸುವ ವಿಚಾರದಲ್ಲಿ ಕೇಂದ್ರ ಸರಕಾರವು ಮೊದಲ ಅಫಿಡವಿಟ್ ನಲ್ಲಿ ಅದು ಈಗಾಗಲೇ ನಿಲುವೊಂದನ್ನು ಕೈಗೊಂಡಿತ್ತು. ಆದರೆ ಈಗ ಅದು ಸಲ್ಲಿಸಿರುವ ಹೊಸ ಅಫಿಡವಿಟ್ ನಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸುವ ಅಧಿಕಾರ ಕೇಂದ್ರ ಸರಕಾರದ ಬಳಿಯಿರುತ್ತದೆಯೆಂದು ಹೇಳಿದೆ. ಮುಂದಿನ ವಿಚಾರಣೆಯನ್ನು ಅಗಸ್ಟ್ 30ಕ್ಕೆ ನಿಗದಿಪಡಿಸಿರುವ ನ್ಯಾಯಾಲಯವು ಅದಕ್ಕಿಂತ ಮೂರು ದಿನಗಳ ಮೊದಲು ಕೇಂದ್ರ ಸರಕಾರವು ಈ ಬಗ್ಗೆ ಸ್ಥಿತಿಗತಿ ವರದಿಯನ್ನು ತನಗೆ ಸಲ್ಲಿಬೇಕೆಂದು ನ್ಯಾಯಪೀಠ ತಿಳಿಸಿತು.

 ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು ರಾಜ್ಯಗಳ ಜೊತೆ ಸಮಾಲೋಚನೆ ನಡೆಸಲು ಮೂರು ತಿಂಗಳುಗಳ ಕಾಲಾವಕಾಶವನ್ನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News