PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಡಿವೈಎಸ್‌ಪಿ ಶಾಂತಕುಮಾರ್‌ ಬಂಧನ

Update: 2022-05-12 13:49 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಮೇ12: ಪಿಎಸ್‌ಐ  ನೇಮಕಾತಿ ಅಕ್ರಮದ ಕಿಂಗ್ ಪಿನ್  ಡಿವೈಎಸ್‌ಪಿ ಶಾಂತಕುಮಾರ್‌ ಅವರನ್ನು ಸಿಐಡಿ‌ ಅಧಿಕಾರಿಗಳು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

ನೇಮಕಾತಿ ವಿಭಾಗದ ಡಿವೈಎಸ್‌ಪಿಯಾಗಿದ್ದ ಶಾಂತ್‌ಕುಮಾರ್‌ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. 

ಎರಡು ದಿನಗಳ ಹಿಂದಷ್ಟೆ ನೇಮಕಾತಿ ವಿಭಾಗದಲ್ಲಿ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿತ್ತು ಅವರು ನೀಡದ ಮಾಹಿತಿಯನ್ನು ಆಧರಿಸಿ ನಿನ್ನೆ ರಾತ್ರಿಯಷ್ಟೇ ಓಎಂಆರ್ ಪ್ರತಿ ತಿದ್ದುಪಡಿ ಮಾಡಿದ ಆರ್‌ಎಸ್‌ಐ ಲೋಕೇಶಪ್ಪರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಲೋಕೇಶಪ್ಪ ವಿಚಾರಣೆ ವೇಳೆ ನೀಡಿದ ಅಕ್ರಮದ ಮಾಹಿತಿಯನ್ನು ಆಧರಿಸಿ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಂತಕುಮಾರ್‌ ರನ್ನು ವಿಚಾರಣೆಗೆ ಕರೆಸಿಕೊಂಡಿದ್ದ ಸಿಐಡಿ  ಅಧಿಕಾರಿಗಳು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಶಾಂತಕುಮಾರ್ 1996ರ ಬ್ಯಾಚ್‌ನ ಸಿಎಆರ್ನ ಕಾನ್ಸ್‌ಟೇಬಲ್ ಆಗಿದ್ದರು. ಆಗಲೇ ತಾಂತ್ರಿಕವಾಗಿ ತುಂಬಾ ಚುರುಕಾಗಿದ್ದರು. ಹೀಗಿದ್ದ ಶಾಂತಕುಮಾರ್ 2006 ರಲ್ಲಿ ಆರ್‌ಎಸ್‌ಐ ಪರೀಕ್ಷೆ ಬರೆದು ಆರ್‌ಎಸ್‌ಐ ಆಗಿ ನೇಮಕಗೊಂಡು ಗುಲ್ಬರ್ಗದಲ್ಲಿ ಒಂದು ವರ್ಷ  ತರಬೇತಿ ಮುಗಿಸಿ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಇದ್ದರು. 

ಅಷ್ಟರಲ್ಲಾಗಲೇ ಪಿಎಸ್‌ಐ ನೇಮಕಾತಿ ವಿಭಾಗಕ್ಕೆ ಹಿರಿಯ ಅಧಿಕಾರಿಗಳು ಈ ಶಾಂತಕುಮಾರ್‌ರನ್ನು ಸೇರಿಸಿಕೊಳ್ಳುತ್ತಾರೆ. 2007-08 ರಿಂದ ನೇಮಕಾತಿ ವಿಭಾಗದಲ್ಲೇ ಶಾಂತಕುಮಾರ್‌ ಠಿಕಾಣಿ ಹೊಡೆದಿದ್ದರು. ನೇಮಕಾತಿಯಲ್ಲಿ ಏನೇನಾಗುತ್ತೆ ಅನ್ನೋದನ್ನು ತಿಳಿದುಕೊಂಡಿದ್ದರು. ಕಳೆದ 2 ವರ್ಷದ ಹಿಂದೆ ಇನ್ಸ್‌ಪೆಕ್ಟರ್‌ನಿಂದ ಡಿವೈಎಸ್ಪಿ ಆಗಿ ಮುಂಬಡ್ತಿ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್‌ ಹಿಡಿತದಲ್ಲಿತ್ತು.

ಒಎಂಆರ್ ತಿದ್ದಲು ಶಾಂತಕುಮಾರ್‌ ನೆರವಾಗಿದ್ದರು. ಶಾಂತಕುಮಾರ್ ಅಕ್ರಮಕ್ಕೆ ಕೈಜೋಡಿಸಿ ಒಎಂಆರ್ ತಿದ್ದಿಸಿದ್ದಾರೆ. ಈ ಬಗ್ಗೆ ಪುರಾವೆ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News