ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

Update: 2022-05-12 16:41 GMT

ಹೊಸದಿಲ್ಲಿ, ಮೇ 12: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅತ್ಯಂತ ಹಿರಿಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮುಂದಿನ ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಗುರುವಾರ ನಿಯೋಜಿಸಿದ್ದಾರೆ. 

ಮೇ 14ರಂದು ಅಧಿಕಾರಾವಧಿ ಅಂತ್ಯಗೊಳ್ಳಲಿರುವ ಸುಶೀಲ್ ಚಂದ್ರ ಅವರ ಸ್ಥಾನವನ್ನು ರಾಜೀವ್ ಕುಮಾರ್ ಅವರು ತುಂಬಲಿದ್ದಾರೆ. ಮಾಜಿ ಹಣಕಾಸು ಕಾರ್ಯದರ್ಶಿ ಕುಮಾರ್ ಅವರು ಮೇ 15ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಚುನಾವಣಾ ಆಯೋಗದ ಆಯುಕ್ತರಾಗಿ ಕುಮಾರ್ ಅವರು 2020 ಸೆಪ್ಟಂಬರ್ 1ರಂದು ಅಧಿಕಾರ ಸ್ವೀಕರಿಸಿದ್ದರು. 1984 ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಕುಮಾರ್ ಅವರು ಬಿಎಸ್ಸಿ ಹಾಗೂ ಎಲ್ಎಲ್ ಬಿ ಪದವೀಧರರು. 

ಇದರೊಂದಿಗೆ ಅವರು ಸಾರ್ವಜನಿಕ ನೀತಿ ಹಾಗೂ ಸುಸ್ಥಿರತೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ. 1960 ಫೆಬ್ರವರಿ 19ರಂದು ಜನಿಸಿದ ಕುಮಾರ್ ಅವರು 2017 ಸೆಪ್ಟಂಬರ್ನಿಂದ 2020 ಫೆಬ್ರವರಿ ವರೆಗೆ ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅನಂತರ ಅವರನ್ನು ಸಿಬ್ಬಂದಿ ಹಾಗೂ ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿಯ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News