ನ್ಯಾಯ ನಿರಾಕರಣೆ ಅರಾಜಕತೆಗೆ ನಾಂದಿ

Update: 2022-05-17 04:32 GMT

ಕಳೆದ ವಾರ ದಿಲ್ಲಿಯಲ್ಲಿ ನಡೆದ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳ ಸಮ್ಮೇಳನದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ ಇದೇ ಕಿವಿ ಮಾತನ್ನು ಹೇಳಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಆಗ ಮಾತನಾಡಿದ ಅವರು ‘‘ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿಯೇ ಇರುವ ಪ್ರಕರಣಗಳ ಸಂಖ್ಯೆ ದೊಡ್ಡದಿದೆ. ಇದಕ್ಕೆ ಕಾರಣ ನ್ಯಾಯಾಂಗದ ನೇಮಕಾತಿಗಳಲ್ಲಿ ವಿಳಂಬ ಆಗಿರುವುದು ಹಾಗೂ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು’’ ಎಂದು ಹೇಳಿ ಒಕ್ಕೂಟ ಸರಕಾರದ ಗಮನವನ್ನು ಸೆಳೆದಿದ್ದರು. ಶಾಸಕಾಂಗ ಮತ್ತು ಕಾರ್ಯಾಂಗಗಳ ಹೊಣೆಗಾರಿಕೆ ಕುರಿತು ಕೆಲವು ಸಲಹೆ ನೀಡಿದ್ದರು.

ಮುಖ್ಯ ನ್ಯಾಯಮೂರ್ತಿ ರಮಣ ಅವರ ಹೇಳಿಕೆ ಗಮನಾರ್ಹ ವಾಗಿದೆ. ನಮ್ಮ ದೇಶದ ನ್ಯಾಯಾಲಯಗಳಲ್ಲಿ ಸುಮಾರು ಶತಮಾನದಷ್ಟು ಹಳೆಯದಾದ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ನ್ಯಾಯಕ್ಕಾಗಿ ಹಂಬಲಿಸಿ ಕೋರ್ಟಿನ ಮೆಟ್ಟಿಲು ಏರಿದ ಅನೇಕ ಕಕ್ಷಿದಾರರು ಬದುಕಿರುವಾಗ ನ್ಯಾಯ ಸಿಗದೆ ಕೊನೆಯುಸಿರೆಳೆದ ಉದಾಹರಣೆಗಳು ಸಾಕಷ್ಟಿವೆ. ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆ ಸಾಕಷ್ಟಿದೆ. ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳು ಇತ್ಯರ್ಥವಾಗದಿರಲು ಖಾಲಿ ಉಳಿದ ನ್ಯಾಯಾಧೀಶರ ಹುದ್ದೆಗಳು ಮತ್ತು ಇತರ ಸಿಬ್ಬಂದಿಯ ನೇಮಕಾತಿಯಲ್ಲಿ ಉಂಟಾಗಿರುವ ವಿಳಂಬ ಬಹುಮುಖ್ಯ ಕಾರಣವಾಗಿದೆ. ಇದರರ್ಥ ವಿಳಂಬ ನ್ಯಾಯವೆಂದರೆ ನ್ಯಾಯ ನಿರಾಕರಣೆ ಎಂದೇ ವ್ಯಾಖ್ಯಾನಿಸಬಹುದಾಗಿದೆ.

ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಉಳಿದಿರುವ ಒಟ್ಟು ಪ್ರಕರಣಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಾದಿ ಅಥವಾ ಪ್ರತಿವಾದಿ ಆಗಿರುವ ಪ್ರಕರಣಗಳು ಶೇ. 50ರಷ್ಟು ಇದೆ ಎಂಬ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮಾತು ಗಮನಾರ್ಹವಾಗಿದೆ.

ಸರಕಾರದ ವಿವಿಧ ಇಲಾಖೆಗಳು ತಮ್ಮ ಪಾಲಿನ ಕೆಲಸಗಳನ್ನು ಸರಿಯಾಗಿ ಮಾಡಿದಿದ್ದರೆ ನ್ಯಾಯಾಲಯಗಳ ಮೇಲೆ ಈ ಒತ್ತಡ ಬೀಳುತ್ತಿರಲಿಲ್ಲ. ಸರಕಾರದಲ್ಲಿ ಸರಿಯಾಗಿ ಕೆಲಸ ನಡೆಯದಿರುವುದರಿಂದ ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ತಮ್ಮ ಕೆಲಸವಾಗದಿದ್ದಾಗ ಜನರು ನ್ಯಾಯಾಲಯಗಳ ಮೊರೆ ಹೋಗುತ್ತಾರೆ. ಜಮೀನು ಹಾಗೂ ಕಂದಾಯಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ ಅಸಮಾಧಾನ ಸರಕಾರದ ಆಡಳಿತ ವ್ಯವಸ್ಥೆಯ ಲೋಪಗಳ ಮೇಲೆ ಬೆಳಕು ಚೆಲ್ಲುತ್ತದೆ.
ಸರಕಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದವರ ಅಕ್ರಮ ಬಂಧನಗಳು, ಪೊಲೀಸರ ವಶದಲ್ಲಿರುವಾಗ ಆರೋಪಿಗಳಿಗೆ ಚಿತ್ರಹಿಂಸೆ ನೀಡುವುದು, ತನಿಖೆಯಲ್ಲಿ ಪೊಲೀಸರ ಪಕ್ಷಪಾತ ಧೋರಣೆ, ಸರಕಾರಿ ನೌಕರಿಗಳಲ್ಲಿ ಸೇವಾ ಹಿರಿತನವನ್ನು ಕಡೆಗಣಿಸುವುದು, ಪಿಂಚಣಿ ನೀಡುವಲ್ಲಿ ವಿಳಂಬ ಇಂತಹ ಹಲವಾರು ಪ್ರಕರಣಗಳಲ್ಲಿ ಸರಕಾರದಿಂದ ಸಕಾಲದಲ್ಲಿ ನ್ಯಾಯ ಸಿಗದಿದ್ದಾಗ ಜನರು ಕೋರ್ಟಿನ ಮೆಟ್ಟಿಲು ಹತ್ತುತ್ತಾರೆ. ಕಾರಣ ಸರಕಾರ ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಗಳು ನೀಡಿರುವ ಸಲಹೆ ಸೂಕ್ತವಾಗಿದೆ.

ಸರಕಾರ ಶಾಸನಗಳನ್ನು ರೂಪಿಸುವಾಗ ಸಂಸತ್ತಿನ ಒಳಗೆ ಹಾಗೂ ಹೊರಗೆ ಸಾರ್ವಜನಿಕರ ಜೊತೆಗೆ ಚರ್ಚಿಸಿ ಅವರ ಅಭಿಪ್ರಾಯ ಪಡೆಯುವ ಸಂಪ್ರದಾಯ ಇಲ್ಲದಿರುವುದರಿಂದ ಅನೇಕ ವಿವಾದಗಳು ನ್ಯಾಯಾಲಯಕ್ಕೆ ಬರುತ್ತವೆ ಎಂಬುದರ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಗಮನವನ್ನು ಸೆಳೆದಿದ್ದಾರೆ. ಶಾಸನಸಭೆಗಳಲ್ಲಿ ಚರ್ಚೆಯಿಲ್ಲದೆ ಉದ್ದೇಶಪೂರ್ವಕವಾಗಿಯೇ ಅನೇಕ ವಿಧೇಯಕಗಳಿಗೆ ಸದನದ ಒಪ್ಪಿಗೆ ಪಡೆಯಲಾಗುತ್ತದೆ. ಇಂತಹ ವಿಧೇಯಕಗಳು ಕಾನೂನುಗಳಾಗಿ ಜಾರಿಗೆ ಬಂದಾಗ ಅವುಗಳಲ್ಲಿ ಸಹಜವಾಗಿ ಕೆಲ ಲೋಪಗಳು ಉಳಿದುಕೊಳ್ಳುತ್ತವೆ.ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ಅನಿವಾರ್ಯ ವಾಗುತ್ತದೆ ಎಂಬ ಅವರ ಅಭಿಪ್ರಾಯ ಕೂಡ ಗಮನಾರ್ಹವಾಗಿದೆ

ಜನಸಾಮಾನ್ಯರಿಗೆ ನ್ಯಾಯ ನೀಡಿಕೆಯಲ್ಲಿ ವಿಳಂಬವಾಗಬಾರದು. ನ್ಯಾಯಾಲಯಗಳಲ್ಲಿ ತ್ವರಿತವಾಗಿ ಪ್ರಕರಣಗಳ ಇತ್ಯರ್ಥವಾಗಬೇಕು. ದೇಶದ ಜನಸಾಮಾನ್ಯರು ನ್ಯಾಯಕ್ಕಾಗಿ ಕೋರ್ಟಿಗೆ ಅಲೆದಾಡುವಂತಾಗಬಾರದು. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಇದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News