ಜಾತಿಗಣತಿಗೆ ಬಿಜೆಪಿ ಆಕ್ಷೇಪ; ಸರ್ವಪಕ್ಷ ಸಭೆಗೆ ಮುಂದಾದ ಬಿಹಾರ ಸಿಎಂ ನಿತೀಶ್‌ ಕುಮಾರ್

Update: 2022-05-17 02:36 GMT
ನಿತೀಶ್‌ ಕುಮಾರ್ (Photo - PTI)

ಪಾಟ್ನಾ: ಮಿತ್ರ ಪಕ್ಷ ಬಿಜೆಪಿಯ ಆಕ್ಷೇಪವನ್ನು ಬದಿಗೊತ್ತಿ, ರಾಜ್ಯದಲ್ಲಿ ಜಾತಿ ಗಣತಿ ಕೈಗೊಳ್ಳುವ ಸಂಬಂಧ ಚರ್ಚಿಸಲು ಸರ್ವಪಕ್ಷ ಸಭೆಯನ್ನು ಶೀಘ್ರದಲ್ಲೇ ಕರೆಯುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಸೋಮವಾರ ಪ್ರಕಟಿಸಿದ್ದಾರೆ.

ಈ ಪ್ರಕ್ರಿಯೆ ಆರಂಭಿಸಲು ವಿಳಂಬ ಆಗುವುದಿಲ್ಲ ಎಂದು ಬಿಜೆಪಿ ಮುಖಂಡ ಮತ್ತು ಉಪ ಮುಖ್ಯಮಂತ್ರಿ ತಾರ್‍ಕಿಶೋರ್ ಪ್ರಸಾದ್ ಅವರ ಸಮ್ಮುಖದಲ್ಲೇ ಸ್ಪಷ್ಟಪಡಿಸಿದರು.

"ಇದು ತಡವಾಗುವುದಿಲ್ಲ. ಆದರೆ ರಾಜ್ಯದಲ್ಲಿ ಜಾತಿಗಣತಿ ಕೈಗೊಳ್ಳುವ ಮುನ್ನ ಎಲ್ಲ ಪಕ್ಷಗಳ ಅಭಿಪ್ರಾಯವನ್ನು ಕೇಳಲಾಗುತ್ತದೆ. ರಾಜ್ಯ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಪ್ರಸ್ತುತಪಡಿಸುವ ಮುನ್ನ ಸರ್ಕಾರ ಈ ಸಲಹೆಗಳನ್ನು ಪರಿಗಣಿಸಲಿದೆ. ವಿರೋಧ ಪಕ್ಷದ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಅವರಿಗೆ ಈ ಸಂಬಂಧ ಈಗಾಗಲೇ ಮಾಹಿತಿ ನೀಡಿದ್ದೇನೆ" ಎಂದು ಪಾಟ್ನಾದಲ್ಲಿ ನಡೆದ ಬುದ್ಧ ಜಯಂತಿ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಸಂಪುಟದ ಒಪ್ಪಿಗೆ ಪಡೆದು ಜಾತಿಗಣತಿ ಆರಂಭಿಸಲಾಗುವುದು. ಸೂಕ್ತ ವಿಧಾನದಲ್ಲಿ ಜಾತಿಗಣತಿ ಕೈಗೊಳ್ಳಲಾಗುತ್ತದೆ. ಈ ಉದ್ದೇಶಕ್ಕೆ ಅಧಿಕಾರಿಗಳನ್ನು ನಿಯೋಜಿಸುವ ಕಾರ್ಯದ ಪರಿಶೀಲನೆ ನಡೆದಿದೆ" ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಮತ್ತು ಉಪಚುನಾವಣೆಗಳ ಹಿನ್ನೆಲೆಯಲ್ಲಿ ಜಾತಿಗಣತಿಯನ್ನು ಶೀಘ್ರವಾಗಿ ಕೈಗೊಳ್ಳಲು ಸದ್ಯವೇ ಸರ್ವಪಕ್ಷ ಸಭೆ ಕರೆಯುವುದಾಗಿ ಪ್ರಕಟಿಸಿದರು.

ಕಳೆದ ವರ್ಷ ಆಗಸ್ಟ್ 23ರಂದು ಬಿಹಾರದಿಂದ ಸರ್ವಪಕ್ಷಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ದೇಶಾದ್ಯಂತ ಜಾತಿಗಣತಿ ಕೈಗೊಳ್ಳಲು ಆಗ್ರಹಿಸಿತ್ತು. ಆದರೆ ಗೃಹಖಾತೆ ರಾಜ್ಯ ಸಚಿವ ಮತ್ತು ರಾಜ್ಯದ ಬಿಜೆಪಿ ಮುಖಂಡ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಈ ಸಾಧ್ಯತೆಯನ್ನು ಬಲವಾಗಿ ಅಲ್ಲಗಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News