ಬೆಂಗಳೂರು: ಕಪಿಲ್ ಕ್ರಿಕೆಟ್ ಕ್ಲಬ್ ವತಿಯಿಂದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

Update: 2022-05-17 05:03 GMT

ಬೆಂಗಳೂರು: ಪ್ರತಿಷ್ಠಿತ ಕಪಿಲ್ ಕ್ರಿಕೆಟ್ ಕ್ಲಬ್ ಈ ಬಾರಿ ಆಯೋಜಿಸಿದ್ದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಿತು.

ಎಪ್ರಿಲ್ 1 ರಿಂದ ಮೇ 14 ರವರೆಗೆ  ಬಸವೇಶ್ವರನಗರದ ಕಾರ್ಮೆಲ್ ಶಾಲಾ ಮೈದಾನದಲ್ಲಿ ನಡೆದ ಶಿಬಿರದಲ್ಲಿ 150ಕ್ಕೂ ಹೆಚ್ಚು ಬಾಲಕರು ತರಬೇತಿ ಪಡೆದರು. ನಂತರ ಶಿಬಿರದ ಸಮಾರೋಪ ಮತ್ತು ಪ್ರಮಾಣಪತ್ರ ವಿತರಣೆ ಸಮಾರಂಭ ನಡೆಯಿತು.

ಉದ್ಯಮಿ, ಸಮಾಜ ಸೇವಕ ಶ್ರೀಧರ್, ಮಾಕ್ಸ್ ಮುಲ್ಲರ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಸುರೇಶ್, ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆ ವಿತರಿಸಿದರು.

ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಕಪಿಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ, 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕ್ಲಬ್ ಕಳೆದ 14 ವರ್ಷಗಳಿಂದ ಸತತವಾಗಿ ಶಿಬಿರಗಳನ್ನು ಆಯೋಜಿಸಿ ಪ್ರತಿಭಾವಂತ ಕ್ರಿಕೆಟ್ ಪಟುಗಳ ಶೋಧಕಾರ್ಯದಲ್ಲಿ ನಿರತವಾಗಿದೆ ಎಂದರು.

5 ವರ್ಷದಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಬೇಸಿಗೆ ತರಬೇತಿ ಆಯೋಜಿಸಲಾಗುತ್ತಿದೆ. ಸರಾಸರಿ ಪ್ರತಿವರ್ಷ 150ಕ್ಕೂ ಹೆಚ್ಚು ಮಕ್ಕಳು ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ನರಸಿಂಹಮೂರ್ತಿ ಹೇಳಿದರು.

ನಮ್ಮಲ್ಲಿ ತರಬೇತಿ ಪಡೆಯುವವರ ಪೈಕಿ ಕನಿಷ್ಠ ಶೇಕಡಾ 10ರಷ್ಟು ಮಕ್ಕಳು ವೃತ್ತಿಪರ ಕ್ರಿಕೆಟ್ ನಲ್ಲಿ ಭಾಗವಹಿಸುತ್ತಾರೆ. ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲೂ ಭಾಗವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಸಮಾಜ ಸೇವಕ ಶ್ರೀಧರ್ ಮಾತನಾಡಿ, ಕಪಿಲ್ ಕ್ರಿಕೆಟ್ ಕ್ಲಬ್ ನ ಸೇವೆಯನ್ನು ಶ್ಲಾಘಿಸಿ, ನಾಡಿಗೆ ಒಳ್ಳೆಯ ಪ್ರತಿಭಾವಂತ ಕ್ರಿಕೆಟ್ ಪಟುಗಳನ್ನು ಕೊಡುಗೆಯಾಗಿ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿ ಎಂದು ಹಾರೈಸಿದರು. ಭವಿಷ್ಯದಲ್ಲೂ ಕ್ಲಬ್ ನ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಜೂನ್ ಮೊದಲ ವಾರದಲ್ಲಿ ವಾರ್ಷಿಕ ತರಬೇತಿ ಶಿಬಿರ ಕೂಡ ಆರಂಭವಾಗಲಿದ್ದು, 100 ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮಕ್ಕಳ ದೈಹಿಕ ಸಾಮರ್ಥ್ಯ ವೃದ್ಧಿ, ಮಾನಸಿಕ ಸ್ಥೈರ್ಯ ತುಂಬಿ ಮನೋಬಲ ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಕ್ರಿಕೆಟ್ ಗೆ ಪೂರಕವಾಗಿ ತಯಾರಿ ಮಾಡಲಾಗುವುದು ಎಂದು ಕಪಿಲ್ ಕ್ರಿಕೆಟ್ ಕ್ಲಬ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News