ಜ್ಞಾನವಾಪಿ ಮಸೀದಿ ಕುರಿತ ಕೋರ್ಟ್ ಆದೇಶವನ್ನು ಖಂಡಿಸಿದ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್

Update: 2022-05-17 06:06 GMT

 ವಾಷಿಂಗ್ಟನ್: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಐತಿಹಾಸಿಕ ಜ್ಞಾನವಾಪಿ ಮಸೀದಿಯ ಒಂದು ಭಾಗವನ್ನು ಸೀಲ್ ಮಾಡುವಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಬಲವಾಗಿ ಖಂಡಿಸಿದೆ.

ಮಸೀದಿಯ  ಕೆರೆ (ವಝು ಖಾನ)ಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು  ಅರ್ಜಿದಾರ ಹಿಂದು ಮಹಿಳೆಯರ ಪರ ವಕೀಲರು ಸೋಮವಾರ  ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ ನಂತರ ಆ ಭಾಗವನ್ನು ಸೀಲ್ ಮಾಡಲು ನ್ಯಾಯಾಲಯ ಆದೇಶಿಸಿತ್ತು.

ಜ್ಞಾನವಾಪಿ ಮಸೀದಿಯ ಆಡಳಿತ ನಡೆಸುವ ಅಂಜುಮಾನ್ ಇಂತೆಝಾಮಿಯಾ ಮಸ್ಜಿದ್ ಸಮಿತಿಯು ಅರ್ಜಿದಾರರ ವಕೀಲರ ವಾದವನ್ನು ತಿರಸ್ಕರಿಸಿತ್ತಲ್ಲದೆ ಕೆರೆಯಲ್ಲಿ ಕಂಡು ಬಂದಿದ್ದು ಶಿವಲಿಂಗವಲ್ಲ ಬದಲು ಕಾರಂಜಿಯ ಒಂದು ಭಾಗವಾಗಿದೆ ಎಂದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್, ``ನ್ಯಾಯಾಲಯದ ಇತ್ತೀಚಿಗಿನ ಆದೇಶದಿಂದ  ಭಾರತೀಯ ಅಮೆರಿಕನ್ನರು ತೀವ್ರ ಆತಂಕಿತರಾಗಿದ್ದಾರೆ. ಇದು ಬಾಬ್ರಿ ಮಸೀದಿ ಪ್ರಕರಣದ ಹಾದಿಯನ್ನೇ ಹಿಡಿಯಬಹುದು. ಬಹುಸಂಖ್ಯಾತ ಅಜೆಂಡಾವನ್ನೇ ಬೆಂಬಲಿಸಿ ನ್ಯಾಯಾಲಯವು  ನ್ಯಾಯ ಒದಗಿಸಿಲ್ಲ ಬದಲು ಭಾರತದ 200 ಮಿಲಿಯನ್ ಮುಸ್ಲಿಮರ ಮೇಲೆ ಇದು ಇನ್ನೊಂದು ದಾಳಿಯಾಗಿದೆ,''ಎಂದಿದ್ದಾರೆ.

"ಜ್ಞಾನವಾಪಿ ಮಸೀದಿಯ ಬಹಳ ಸಮಯದಿಂದ ಹಿಂದು ಬಲಪಂಥೀಯರ ಹಿಟ್‍ ಲಿಸ್ಟ್ ನಲಿತ್ತು, ಪ್ರಮುಖವಾಗಿ ಸುಪ್ರೀಂ ಕೋರ್ಟ್ 2019ರಲ್ಲಿ ಅವರ ಪರ ತೀರ್ಪು ನೀಡಿದಂದಿನಿಂದ ಈ ಬೆಳವಣಿಗೆ ನಡೆದಿದೆ. ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಮೂಡಿಸಲು ಮತ್ತು ಮತೀಯ ಭಾವನೆಗಳನ್ನು ಕೆರಳಿಸಲು ಇದನ್ನು ಬಳಸುವ ಸಾಧ್ಯತೆಯಿದೆ,''ಎಂದು ಕೌನ್ಸಿಲ್ ಅಧ್ಯಕ್ಷ ಸಯೀದ್ ಆಲಿ ಹೇಳಿದ್ದಾರೆ.

ಇಂಡಿಯನ್‌ ಅಮೇರಿಕನ್‌ ಮುಸ್ಲಿಂ ಕೌನ್ಸಿಲ್‌ ಅಮೆರಿಕಾದಲ್ಲಿರುವ ಭಾರತೀಯ ಮುಸ್ಲಿಮರ ಅತೀದೊಡ್ಡ ವಕಾಲತ್ತು ಸಂಸ್ಥೆಯಾಗಿದೆ. ಇದು ರಾಷ್ಟ್ರಾದ್ಯಂತ ಹಲವು ಶಾಖೆಗಳನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಈ ವೆಬ್‌ ಸೈಟ್‌ ಅನ್ನು ಸಂಪರ್ಕಿಸಬಹುದಾಗಿದೆ.www.iamc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News