ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಳೆಯಲ್ಲಿಯೇ ಆಶಾ ಕಾರ್ಯಕರ್ತರ ಪ್ರತಿಭಟನೆ

Update: 2022-05-17 15:29 GMT

ಬೆಂಗಳೂರು, ಮೇ 17: ಜೀವನ ಯೋಗ್ಯ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ಆಶಾ ಕಾರ್ಯಕರ್ತೆಯರು, ಮಳೆಯಲ್ಲಿಯೇ ಪ್ರತಿಭಟನೆ ಮುಂದುವರೆಸಿದರಲ್ಲದೆ, ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿನ ಕಳೆದ 3 ವರ್ಷಗಳಲ್ಲಿ ಆಶಾ ಕಾರ್ಯಕರ್ತೆಯರು ಜೀವ ಪಣಕ್ಕಿಟ್ಟು ಕೋವಿಡ್ ವಿರುದ್ಧ ನಡೆಸಿದ ಹೋರಾಟ ನಿಜಕ್ಕೂ ಅವಿಸ್ಮರಣೀಯ. ಆಶಾ ಕಾರ್ಯಕರ್ತೆ ದಿನಕ್ಕೆ 2-3ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ನಮ್ಮ ಕೆಲಸವಿಂದು ದಿನವಿಡೀ ಮಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
 
ಕೆಲಸದ ಒತ್ತಡಗಳೂ ಹೆಚ್ಚಿವೆ. ಹೀಗಾಗಿ ಇವರ ದುಡಿತಕ್ಕೆ ತಕ್ಕಂತೆ ಗೌರವಧನವೂ ನಿಗದಿಯಾಗಬೇಕಿದೆ. ಸರಕಾರದಿಂದ ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿರುವ 2022-23ನೇ ಸಾಲಿನ ಬಜೆಟ್‍ನಲ್ಲಿ ರಾಜ್ಯದ 42,000 ಆಶಾ ಕಾರ್ಯಕರ್ತೆಯರಿಗೆ ನಿಗದಿತ ಮಾಸಿಕ ಗೌರವಧನ 1 ಸಾವಿರ ರೂ. ಹೆಚ್ಚಳ ಮಾಡಿರುವುದಕ್ಕೆ ಸ್ವಾಗತಿಸುತ್ತಾ, ಕಳೆದ 3 ವರ್ಷದಿಂದ ಇವರಿಗೆ ಗೌರವಧನ ಏರಿಕೆ ಮಾಡಿರುವುದಿಲ್ಲ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ನಿಗದಿತ ಮಾಸಿಕ ಗೌರವಧನವನ್ನು ಇದೇ ಬಜೆಟ್‍ನಲ್ಲಿ 3 ಸಾವಿರ ರೂ. ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಅತ್ಯುತ್ತಮ ಸೇವೆ ಮಾಡಿರುವರೆಂದು ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೆ ಪ್ರಶಂಸನೀಯ ಪತ್ರ ನೀಡಿದೆ. ಇದು ನಿಜಕ್ಕೂ ಹೆಮ್ಮೆಯ ವಿಷಯ. 

ಜೊತೆಗೆ ಇವರ ಸೇವೆಗೆ ತಕ್ಕ ಗೌರವಧನವನ್ನು ಸರಕಾರ ನೀಡಿದಲ್ಲಿ ಮತ್ತಷ್ಟು ಉತ್ಸಾಹದಿಂದ ಜನತೆಗೆ ಆರೋಗ್ಯ ಸೇವೆಯನ್ನು ತಲುಪಿಸುವರು. ಈಗಾಗಲೇ ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹಧನ ಮತ್ತು ಗೌರವಧನ ಸೇರಿಸಿ, ಕನಿಷ್ಟ 12 ಸಾವಿರ ರೂ. ಆದರೂ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ನಿಗದಿಯಾಗಬೇಕು ಎಂದು ಒತ್ತಾಯಿಸಿದರು.

ಮೇ 27ರಂದು ಸಭೆ

ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತ, ಮೇ 27 ರಂದು ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ನಿಗದಿ ಮಾಡಲಾಗಿದೆ. ಕೆಲಸ ಹೊರೆ ತಗ್ಗಿಸಲು ಸುತ್ತೋಲೆಯನ್ನು ಪರಿಷ್ಕರಿಸಬಹುದು. ಮೂರು ವರ್ಷಗಳ ವೇತನ ನಷ್ಟ ಭರ್ತಿ ಮಾಡುವ ತಾತ್ವಿಕ ಬೇಡಿಕೆಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಚಿವರೊಂದಿಗೆ ಚರ್ಚಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಚಾರ ದಟ್ಟಣೆ

ಸಾವಿರಾರು ಆಶಾ ಕಾರ್ಯಕರ್ತೆಯರು ಇಲ್ಲಿನ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ್ದ ಹಿನ್ನೆಲೆ ಕೆಆರ್ ವೃತ್ತ, ಆನಂದರಾವ್ ಸರ್ಕಲ್, ಮೈಸೂರು ವೃತ್ತದ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News