ಆಶಾ ಕಾರ್ಯಕರ್ತರಿಗೆ ವೇತನ ನೀಡದೆ, ಕೆಲಸ ಮಾಡಿಸಿದ್ದು ಸಂವಿಧಾನ ವಿರೋಧಿ: ಸಂತೋಷ್ ಹೆಗ್ಡೆ

Update: 2022-05-17 15:34 GMT

ಬೆಂಗಳೂರು, ಮೇ 17: ಆಶಾ ಕಾರ್ಯಕರ್ತರಿಗೆ ರಾಜ್ಯ ಸರಕಾರವು ವೇತನ ನೀಡದೆ, ಕೆಲಸ ಮಾಡಿಸಿಕೊಂಡಿರುವುದು ಸಂವಿಧಾನ ವಿರೋಧಿ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಆಶಾ ಕಾರ್ಯಕರ್ತರ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಹೇಳುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ನಿಮ್ಮ ಕೆಲಸವನ್ನು ಪಡೆಯಲಾಗುತ್ತಿದೆ. ಪರಿಹಾರ ತಕ್ಷಣವೇ ಸಿಗದು. ಅದಕ್ಕಾಗಿ ನೀವು ತಾಳ್ಮೆಯೊಂದಿಗೆ ಹೋರಾಟವನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ಹೊಸದಿಲ್ಲಿಯ ಗಡಿಗಳಲ್ಲಿ ಒಂದು ವರ್ಷ ರೈತರು ಹೋರಾಡುತ್ತಿದ್ದರೂ ಸ್ಪಂದಿಸದಿದ್ದ ಸರಕಾರ ಅಂತಿಮವಾಗಿ ಮಣಿಯಬೇಕಾಯಿತು. ನೀವೂ ಸಹ ಪದೇ ಪದೇ ಬಂದರೂ ಪರಿಹಾರ ದೊರೆಯದಿರುವುದು ನೋಡಿದರೆ ನೀವೂ ಸಹ ಸುಧೀರ್ಘ ಹೋರಾಟಕ್ಕೆ ನಿಲ್ಲಬೇಕಾಗುತ್ತದೆ. ನಿಮ್ಮ ಬೇಡಿಕೆ ನ್ಯಾಯೋಚಿತವಾಗಿದೆ. ನಿಮ್ಮ ಹೋರಾಟದೊಂದಿಗೆ ಸದಾ ನಿಲ್ಲುತ್ತೇನೆ ಎಂದರು.

ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕೆ.ರಾಧಾಕೃಷ್ಣ “ಆಶಾ ಹೋರಾಟ ದೇಶದಲ್ಲಿ ಮಾದರಿಯಾಗಿದೆ. ದುಡಿಯುವ ಜನರ ಹೋರಾಟಕ್ಕೆ ಸ್ಪೂರ್ತಿಯುತವಾಗಿದೆ. ಆಳುವ ಸರಕಾರಗಳ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಇತರ ದುಡಿಯುವ ಜನರೊಂದಿಗೆ ಸೇರಿ ಬಲಿಷ್ಠ ಚಳುವಳಿ ಬೆಳೆಸಬೇಕು ಎಂದರು.

ಎಸ್‍ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಇಂದು ರಾಜ್ಯ ಸರಕಾರವು ಭ್ರಷ್ಟಾಚಾರದ ವಿವಿಧ ಪ್ರಕರಣಗಳಿಂದ ಕುಖ್ಯಾತವಾಗಿದೆ. ಜೊತೆಗೆ ಜನರ ನಡುವೆ ಸಾಮರಸ್ಯ ಕದಡುವಂತಹ ಕೋಮು ನಿಲುವು ತಳೆಯುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇಂತಹ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್, ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ರಾಜ್ಯಾಧ್ಯಕ್ಷ ಅಪರ್ಣಾ ಬಿ.ಆರ್, ಡಾ.ಸುನೀತ್‍ಕುಮಾರ್ ಶೆಟ್ಟಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News