ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡುವಂತೆ ಮೇ 20ಕ್ಕೆ ಪ್ರತಿಭಟನೆಗೆ ಕರೆ

Update: 2022-05-17 16:34 GMT

ಬೆಂಗಳೂರು, ಮೇ 17: ಪರಿಶಿಷ್ಟ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸುವ ನ್ಯಾ. ನಾಗಮೋಹನ್‍ದಾಸ್ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿಗಳು ಧರಣಿ ಕೈಗೊಂಡಿದ್ದು, ಮೇ 20ರಂದು ರಾಜ್ಯದ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ಮುಖಂಡ ಡಾ. ವೆಂಕಟಸ್ವಾಮಿ ಕರೆ ನೀಡಿದ್ದಾರೆ. 

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಕಳೆದ 97 ದಿನಗಳಿಂದ ನ್ಯಾ. ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟ ಜಾತಿಗೆ ಶೇ.17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7.5ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಅಹೋರಾತ್ರಿ ಧರಣಿಯನ್ನು ಕೈಗೊಂಡಿದ್ದಾರೆ. ದಲಿತ ಸಂಘಟನೆಗಳು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿವೆ. ಇದೇ ಮೇ 20ಕ್ಕೆ ಧರಣಿಯು 100 ದಿನಗಳನ್ನು ಪೂರೈಸಲಿದ್ದು, ಪ್ರತಿಭಟನೆಯನ್ನು ಮಾಡಿ, ತಹಶೀಲ್ದಾರ್ ಹಾಗೂ ಶಾಸಕರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು. 


ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಮಾತನಾಡಿ, ಸ್ವಾಮೀಜಿಗಳ ಹೋರಾಟ ವೈಯಕ್ತಿಕ ಹೋರಾಟವಲ್ಲ, ಅದು 153 ಸಮುದಾಯಗಳ ಅಭಿವೃದ್ಧಿಯ ಹೋರಾಟವಾಗಿದೆ. ಮೀಸಲಾತಿಯನ್ನು ಹೆಚ್ಚಿಸಿ ಆದೇಶದ ಪ್ರತಿ ಕೈಗೆ ಬರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ಚುನಾವಣಾ ಸಂದರ್ಭದಲ್ಲಿ ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು ಗೆದ್ದವರು, ಸ್ವಾಮೀಜಿಗಳು ಅಹೋರಾತ್ರಿ ಧರಣಿಯನ್ನು ಮಾಡುತ್ತಿದ್ದಾಗ ಅವರ ಬೇಡಿಕೆಯನ್ನು ಈಡೇರಿಸಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. 

ಮೀಸಲಾತಿ ಹೆಚ್ಚಳ ಹೋರಾಟ ಸಮಿತಿಯ ಸಂಚಾಲಕ ಹರ್ತಿಕೋಟೆ ವೀರೇಂದ್ರಸಿಂಹ ಮಾತನಾಡಿ, ಮಾ.30ರಂದು ವಿಧಾನಸಭೆಯಲ್ಲಿ ಪರಿಶಿಷ್ಟ ಸಮುದಾಯಗಳ ಬೇಡಿಕೆಯನ್ನು ಹೆಚ್ಚಿಸುವಂತೆ ಚರ್ಚೆಯಾಗಿದ್ದು, ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ರಾಜ್ಯ ಸರಕಾರ ಸಚಿವರ ಹಾಗೂ ಶಾಸಕರ ನಿಯೋಗವು ಫ್ರೀಡಂ ಪಾರ್ಕ್‍ನ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ 15 ದಿನದೊಳಗೆ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೇ ನೀಡಿದೆ. ಆದರೆ ಆಶ್ವಾಸನೆ ನೀಡಿ 24 ದಿನ ಕಳೆದರೂ, ಯಾವುದೇ ತೀರ್ಮಾನ ಆಗದೇ ಇರುವುದು ಬೇಸರ ತಂದಿದೆ ಎಂದರು.

ಉಗ್ರ ಹೋರಾಟಕ್ಕೆ ಕರೆ

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟವನ್ನು ಹತ್ತಿಕ್ಕಲು ರಾಜಕಾರಣಿಗಳು ಫ್ರೀಡಂ ಪಾರ್ಕ್‍ಗೆ ಬರುತ್ತಿದ್ದರೆ ಹೊರತು, ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಿಲ್ಲ. ಪರಿಶಿಷ್ಟ ಸಮುದಾಯಗಳ ಒಬ್ಬ ಸ್ವಾಮೀಜಿ ಧರಣಿ ಕೂತಿದ್ದರೆ, ಸರಕಾರಕ್ಕೆ ಯಾವ ನಷ್ಟವು ಇಲ್ಲದಂತೆ ಪರಿಶಿಷ್ಟ ಸಮುದಾಯಗಳ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತಿದ್ದಾರೆ. ಅದೇ ಮೇಲ್ವರ್ಗ ಸಮುದಾಯಗಳ ಸ್ವಾಮೀಜಿಗಳು ಧರಣಿ ಕುಳಿತಿದ್ದರೆ, ಆ ಸಮುದಾಯಗಳ ಜನಪ್ರತಿನಿಧಿಗಳು ಸದನದಲ್ಲಿ ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡುತ್ತಿರಲಿಲ್ಲವೇ? ದಲಿತರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದ ಪ್ರತಿ ಬಾರಿಯು ಬಿಜೆಪಿ ಸರಕಾರವು ದಲಿತ ಮುಖಂಡರನ್ನು ಸಭೆಗೆ ಕರೆದು ಹೋರಾಟವನ್ನು ಹತ್ತಿಕ್ಕುತಿದೆ. ಆದರೆ ಮೀಸಲಾತಿ ಹೆಚ್ಚಳದ ಹೋರಾಟವನ್ನು ಹತ್ತಿಕ್ಕಲು ಬಿಡುವುದಿಲ್ಲ. ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಲಾಗುತ್ತದೆ. ಮೀಸಲಾತಿ ಹೆಚ್ಚಿಸದಿದ್ದರೆ ರಾಜ್ಯ ಸರಕಾರವು ಇದಕ್ಕೆ ಸಿದ್ಧವಾಗಿರಬೇಕು. 

-ಪಿ. ಮೂರ್ತಿ, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News