ನಾಡಿನ ಗೃಹ ಇಲಾಖೆಗೇ ಸವಾಲು ಹಾಕುತ್ತಿರುವ ಭಯೋತ್ಪಾದನಾ ತರಬೇತಿ

Update: 2022-05-18 04:00 GMT

ರಾಜ್ಯಾದ್ಯಂತ ಶಾಲೆಗಳು ತೆರೆಯುವ ಸಂಭ್ರಮದ ಸಮಯವಿದು. ಕೊರೋನ ಅಲೆಗಳ ಭೀತಿಗೆ ಮುಚ್ಚಿದ ಶಾಲೆ, ಕಾಲೇಜುಗಳ ಬಾಗಿಲು ಇದೇ ಮೊದಲ ಬಾರಿಗೆ ಆತ್ಮವಿಶ್ವಾಸದಿಂದ ತೆರೆಯುತ್ತಿವೆ. ಶಾಲೆಗೆ ಹೊರಟ ಮಕ್ಕಳ ಪುಸ್ತಕ, ಯುನಿಫಾರ್ಮ್ ಸೇರಿದಂತೆ ಹಲವು ಮೂಲಭೂತ ಅಗತ್ಯಗಳನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಬೇಕು. ವಿಪರ್ಯಾಸವೆಂದರೆ, ನಮ್ಮ ರಾಜಕೀಯ ನಾಯಕರು ನಮ್ಮ ವಿದ್ಯಾರ್ಥಿಗಳ ಕೈಗೆ ತ್ರಿಶೂಲ, ಬಂದೂಕು ಕೊಟ್ಟು ಅವರನ್ನು ತರಬೇತಿಗೊಳಿಸುವುದಕ್ಕೆ ಹೊರಟಿದ್ದಾರೆ. ಕೊಡಗಿನ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೋವಿ, ತ್ರಿಶೂಲಗಳನ್ನು ಕೊಟ್ಟು ಶಸ್ತ್ರಾಸ್ತ ತರಬೇತಿ ನೀಡಿ ಶಾಲೆಯ ಪಾವಿತ್ರತೆಯನ್ನೇ ಕಳಂಕಗೊಳಿಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಆದರೆ ಅದಕ್ಕಿಂತಲೂ ಆತಂಕಕಾರಿ ಅಂಶವೆಂದರೆ, ಈ ಶಸ್ತ್ರಾಸ್ತ್ರ ತರಬೇತಿಯನ್ನು ನಮ್ಮ ಕೆಲವು ರಾಜಕೀಯ ನಾಯಕರು ಸಮರ್ಥಿಸುತ್ತಿರುವುದು.

ರಾಜ್ಯದಲ್ಲಿ ಸಂಘಪರಿವಾರವು ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ನಡೆಸುತ್ತಿರುವುದು ಇದೇ ಮೊದಲೇನೂ ಅಲ್ಲ. ಬೆಳಗಾವಿಯಲ್ಲಿ ರಾಮಸೇನೆಯ ಕಾರ್ಯಕರ್ತರು ಈ ಶಸ್ತ್ರಾಸ್ತ್ರ ತರಬೇತಿಯನ್ನು ನಡೆಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಈ ತರಬೇತಿ ರಾಜ್ಯದಲ್ಲಿ ಏನೇನು ಅನಾಹುತಗಳನ್ನು ಮಾಡಿತು ಎನ್ನುವುದನ್ನು ನಾವು ಕಂಡಿದ್ದೇವೆ. ಈ ತರಬೇತಿಯ ಬಳಿಕ, ಹುಬ್ಬಳ್ಳಿ ನ್ಯಾಯಾಲಯದ ಆವರಣಕ್ಕೆ ಸ್ಫೋಟಕಗಳನ್ನು ಎಸೆಯುವ ಮೂಲಕ ಇದೇ ರಾಮಸೇನೆಯ ಕಾರ್ಯಕರ್ತರು ಆರೋಪಿಗಳಾಗಿ ಗುರುತಿಸಿಕೊಂಡರು. ರಾಮಸೇನೆಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಜಂಬಗಿ ಮತ್ತು ಆತನ ಸಹಚರರು ಹೆದ್ದಾರಿ ದರೋಡೆ, ಕೊಲೆಪ್ರಕರಣಗಳಲ್ಲಿ ಗುರುತಿಸಿಕೊಂಡು ಜೈಲು ಪಾಲಾದರು. ಜೈಲಿನಲ್ಲಿ ತನ್ನ ಸಹವರ್ತಿಯಿಂದಲೇ ಜಂಬಗಿ ಕೊಲೆಗೀಡಾದ. ಇದೇ ರಾಮಸೇನೆಯ ಕಾರ್ಯಕರ್ತರು ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ ಭಾರೀ ಕೋಮುಗಲಭೆಯನ್ನು ಹುಟ್ಟು ಹಾಕುವ ಸಂಚು ನಡೆಸಿ ವಿಫಲರಾದರು. ಎಂ.ಎಂ. ಕಲಬುರ್ಗಿ ಮತ್ತು ಗೌರಿಲಂಕೇಶ್ ಕೊಲೆಯಲ್ಲಿ ಸಂಘಪರಿವಾರದ ಉಗ್ರರು ಭಾಗವಹಿಸಿರುವುದು ಈಗಾಗಲೇ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ. ಹಲವರ ಬಂಧನವೂ ನಡೆದಿದೆ. ರಾಮಸೇನೆಯ ಮುಖಂಡನಾದ ಪ್ರಮೋದ್ ಮುತಾಲಿಕ್‌ನಿಗೆ ಗೋವಾ ಸರಕಾರ ನಿಷೇಧವನ್ನು ಹೇರಿರುವುದು, ರಾಮಸೇನೆ ಎಂತಹ ಸಂಘಟನೆ ಎನ್ನುವುದನ್ನು ಬಹಿರಂಗ ಪಡಿಸುತ್ತದೆ.

ಇದೀಗ ಪೊನ್ನಂಪೇಟೆಯಲ್ಲಿ ನಡೆದಿದೆ ಎನ್ನಲಾದ ಶಸ್ತ್ರಾಸ್ತ್ರ ತರಬೇತಿಯನ್ನು ಈ ಕಾರಣಕ್ಕಾಗಿ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಬಜರಂಗದಳ ಎನ್ನುವ ಸಂಘಟನೆ ಯಾವುದೇ ಸರಕಾರಿ ಸಂಸ್ಥೆಯಲ್ಲ. ಜನರ ಆತ್ಮರಕ್ಷಣೆಗಾಗಿ ತರಬೇತಿಯನ್ನು ನೀಡುವುದಕ್ಕಾಗಿ ಅದು ಸರಕಾರದಿಂದ ಪರವಾನಿಗೆಯನ್ನೂ ಪಡೆದಿಲ್ಲ. ಇಷ್ಟಕ್ಕೂ ಬಜರಂಗದಳದ ಮುಖಂಡರು, ಕಾರ್ಯಕರ್ತರ ಹಿನ್ನೆಲೆಯನ್ನು ಪರಿಶೀಲಿಸಿದರೆ ಸಾಕು, ಈ ತರಬೇತಿಯ ದುಷ್ಪರಿಣಾಮಗಳನ್ನು ಅರಿಯಲು. ಬಜರಂಗದಳದೊಳಗಿರುವ ಬಹುತೇಕ ಕಾರ್ಯಕರ್ತರು ಸಮಾಜ ವಿದ್ರೋಹಿ ಕಾರಣಗಳಿಗೆ ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡವರು. ಸಮಾಜದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವುದಕ್ಕಾಗಿಯೇ ಕುಖ್ಯಾತಿಯನ್ನು ಪಡೆದವರು. ಅವರಲ್ಲಿ ರೌಡಿ ಶೀಟರ್‌ಗಳು ಕೂಡ ಸೇರಿದ್ದಾರೆ. ಇಂದು ಈ ದುಷ್ಕರ್ಮಿಗಳಿಂದ ಸಮಾಜಕ್ಕೆ ರಕ್ಷಣೆ ಬೇಕಾಗಿದೆ. ಆದರೆ, ಈ ದುಷ್ಕರ್ಮಿಗಳೇ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಾರೆ ಎಂದಾದರೆ ಇದರ ಅಂತಿಮ ಪರಿಣಾಮ ಏನಾಗಬಹುದು?

ಸಿ.ಟಿ.ರವಿ, ಕೆ.ಜೆ.ಬೋಪಯ್ಯ, ಈಶ್ವರಪ್ಪರಂತಹ ಬಿಜೆಪಿಯ ನಾಯಕರು ಈ ಶಸ್ತ್ರಾಸ್ತ್ರ ತರಬೇತಿ ಮತ್ತು ತ್ರಿಶೂಲ ಹಂಚುವಿಕೆಯನ್ನು ಸಮರ್ಥಿಸಿದ್ದಾರೆ. ಏರ್ ಗನ್‌ಗಳನ್ನು ಯಾರು ಬಳಸಬೇಕು, ಯಾರು ಬಳಸಬಾರದು ಎನ್ನುವ ಸಾಮಾನ್ಯ ಪ್ರಜ್ಞೆ ಕೂಡ ಇವರಿಗಿಲ್ಲ. 'ಆತ್ಮರಕ್ಷಣೆಗಾಗಿ ಈ ತರಬೇತಿ ನೀಡಲಾಗುತ್ತದೆ' ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಈ ರಾಜ್ಯದಲ್ಲಿ ಪೊಲೀಸ್ ಇಲಾಖೆಗಳು ಇರುವುದೇ ಜನಸಾಮಾನ್ಯರ ರಕ್ಷಣೆಗಾಗಿ. ಇಂದು ಜನರು ತಮ್ಮ ರಕ್ಷಣೆಗಾಗಿ ತಾವೇ ತರಬೇತಿಗಳನ್ನು ಪಡೆಯಬೇಕು ಎನ್ನುವುದರ ಅರ್ಥ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ, ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದಲ್ಲವೆ? ಈ ಮೂಲಕ ಜನರು ಕಾನೂನನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಕರೆ ನೀಡುತ್ತಿದ್ದಾರೆಯೆ? ತ್ರೀಶೂಲ, ಚಾಕು, ಚೂರಿಗಳನ್ನು ನೀಡುವುದು ಇನ್ನೊಬ್ಬರನ್ನು ಇರಿಯುವುದಕ್ಕೆ ಪ್ರೇರಣೆ ನೀಡಿದಂತೆ ಅಲ್ಲವೆ? ಪುಸ್ತಕ, ಪೆನ್ನು ಹಿಡಿದು ವಿದ್ಯಾವಂತರಾಗಿ ಸಾಧನೆ ಮಾಡಬೇಕಾದ ವಿದ್ಯಾರ್ಥಿಗಳನ್ನು ಈ ಮೂಲಕ ಕ್ರಿಮಿನಲ್‌ಗಳಾಗಿ ಪರಿವರ್ತಿಸಲು ಸರಕಾರವೇ ಪ್ರೇರಣೆ ನೀಡಿದಂತಾಗಲಿಲ್ಲವೆ?

ಎಲ್ಲಕ್ಕೂ ಮುಖ್ಯವಾಗಿ ಈ ಶಸ್ತ್ರಾಸ್ತ್ರ ತರಬೇತಿಯಲ್ಲಿ ಭಾಗವಹಿಸಿದವರೆಲ್ಲ ಮೇಲ್ ಜಾತಿಯ ತರುಣರಲ್ಲ. ಮೇಲ್ ಜಾತಿ ತರುಣರೆಲ್ಲ ಶಾಲೆ, ಕಾಲೇಜು ಎಂದು ಸಿದ್ಧತೆ ನಡೆಸುತ್ತಿದ್ದಾರೆ. ಇದರಲ್ಲಿ ಭಾಗವಹಿಸಿದವರೆಲ್ಲ ಕೆಳಜಾತಿಯ ತರುಣರು. ಕೆಳಜಾತಿಯ ಯುವಕರನ್ನು ಶಿಕ್ಷಣದಿಂದ ವಿಮುಖಗೊಳಿಸಿ ಅವರನ್ನು ಕ್ರಿಮಿನಲ್‌ಗಳನ್ನಾಗಿಸುವುದು ಈ ತರಬೇತಿಯ ಇನ್ನೊಂದು ಉದ್ದೇಶ. 'ಈ ಚಾಕು ಚೂರಿಯಿಂದ ಯಾರಿಗೆ ಇರಿಯಬೇಕು, ಯಾವಾಗ ಇರಿಯಬೇಕು' ಎಂದು ಹೇಳಿಕೊಡುವುದು ಆತ್ಮರಕ್ಷಣೆಯ ತರಬೇತಿಯಲ್ಲ, ಭಯೋತ್ಪಾದನಾ ತರಬೇತಿ. ಈ ಯುವಕರ ಕೈಗೆ ನೀಡಿರುವ ಚಾಕು, ತ್ರಿಶೂಲಗಳಿಂದ ಅವರು ಅನೇಕ ಸಂದರ್ಭದಲ್ಲಿ ತಮ್ಮವರನ್ನೇ ಇರಿಯಬಹುದು ಅಥವಾ ಅವುಗಳನ್ನು ಬಳಸಿಕೊಂಡು ದರೋಡೆ ಮಾಡಬಹುದು.

ಯಾಕೆಂದರೆ ಅವರಿಗೆ ತರಬೇತಿ ಕೊಡುವವರು ಕೂಡ ಈ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಳಗಿದವರು. ಆತ್ಮನಿರ್ಭರತೆಯ ಹೆಸರಿನಲ್ಲಿ ದೇಶದ ತರುಣರಿಗೆ ಸ್ವಉದ್ಯೋಗ ನೀಡಿ ಅವರನ್ನು ಸದೃಢರಾಗಿಸಬೇಕಾದ ಸರಕಾರ ಇದೀಗ 'ಆತ್ಮನಿರ್ಭರ'ತೆಯ ಹೆಸರಿನಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಲು ಹೊರಟಿದೆಯೆ ಎಂದು ಜನರು ಪ್ರಶ್ನಿಸುವಂತಾಗಿದೆ. ಪಾಕಿಸ್ತಾನದಲ್ಲಿ ಉಗ್ರರಿಗೆ ತರಬೇತಿ, ಪಶ್ಚಿಮ ಘಟ್ಟದಲ್ಲಿ ನಕ್ಸಲ್ ತರಬೇತಿ ಎಂದು ಆತಂಕ ಪಡುವ ನಾವು, ನಮ್ಮದೇ ಊರಿನ ಶಾಲೆಯ ಅವರಣದಲ್ಲಿ ನಮ್ಮದೇ ಮಕ್ಕಳ ಕೈಗೆ ಉಗ್ರರಾಗಲು ತರಬೇತಿ ನೀಡುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳದೇ ಇದ್ದರೆ, ಮುಂದೊಂದು ದಿನ ಪೊಲೀಸ್ ಇಲಾಖೆಯೇ ಈ ದುಷ್ಕರ್ಮಿಗಳಿಗೆ ಭಯಪಡುತ್ತಾ ಕಾರ್ಯ ನಿರ್ವಹಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News