ಸಗಟು ಬೆಲೆ ಸೂಚ್ಯಂಕ ಹಣದುಬ್ಬರ 9 ವರ್ಷದಲ್ಲೇ ಗರಿಷ್ಠ

Update: 2022-05-18 01:55 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದೇಶದಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರ ದಾಖಲೆ ಮಟ್ಟ ತಲುಪಿದ್ದು, ಒಂಬತ್ತು ವರ್ಷಗಳಲ್ಲೇ ಗರಿಷ್ಠ ಅಂದರೆ ಶೇಕಡ 15.1 ಆಗಿದೆ. ಅಗತ್ಯವಸ್ತುಗಳು, ಆಹಾರ ಮತ್ತು ಇಂಧನ ಬೆಲೆ ಏರಿಕೆಯನ್ನು ತಡೆಯುವುದು ದೇಶಕ್ಕೆ ಸವಾಲಾಗಿ ಪರಿಣಮಿಸಿದೆ. ಉಕ್ರೇನ್ ಯುದ್ಧ ಹಾಗೂ ಚೀನಾದಲ್ಲಿ ಲಾಕ್‍ಡೌನ್ ಕಾರಣದಿಂದ ಜಾಗತಿಕ ಪೂರೈಕೆ ಸರಣಿ ಕುಸಿದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಡಬ್ಲ್ಯುಪಿಐ ಹಣದುಬ್ಬರ ಮಾರ್ಚ್‍ನಲ್ಲಿ ಶೇಕಡ 14.6 ಆಗಿತ್ತು. ಕಳೆದ ಎಪ್ರಿಲ್‍ನಲ್ಲಿ ಇದು 10.7% ಆಗಿತ್ತು ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಖನಿಜಯುಕ್ತ ತೈಲ, ಮೂಲ ಲೋಹಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ವಸ್ತುಗಳು, ಆಹಾರೇತರ ವಸ್ತುಗಳು, ಆಹಾರ ತಯಾರಿಕಾ ಸಾಧನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳ ದರ ಗಗನಕ್ಕೇರುತ್ತಿರುವುದು ಹಣದುಬ್ಬರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಡಬ್ಲ್ಯುಪಿಐ ಆಹಾರ ಸೂಚ್ಯಂಕ ಆಧರಿತ ಹಣದುಬ್ಬರ ಎಪ್ರಿಲ್‍ನಲ್ಲಿ ಶೇಕಡ 8.9ಕ್ಕೆ ಹೆಚ್ಚಿದೆ.

ಡಬ್ಲ್ಯುಪಿಐ ಆಧರಿತ ಹಣದುಬ್ಬರ ಎರಡಂಕೆಯಲ್ಲಿ ಮುಂದುವರಿಯುತ್ತಿರುವುದು ಇದು ಸತತ ಹದಿಮೂರನೇ ತಿಂಗಳು. ಪ್ರಸ್ತುತ ಹಣದುಬ್ಬರ ಸರಣಿ ಇಷ್ಟು ಸುಧೀರ್ಘ ಅವಧಿಗೆ ಮುಂದುವರಿದಿರುವುದು ಒಂಬತ್ತು ವರ್ಷಗಳಲ್ಲಿ ಇದೇ ಮೊದಲು. 1981-82ರ ಸರಣಿಯಲ್ಲಿ 1991ರ ಅವಧಿಯಲ್ಲಿ ಶೇಕಡ 16.3ನ್ನು ತಲುಪಿರುವುದು ಇದುವರೆಗಿನ ಗರಿಷ್ಠ ದಾಖಲೆ.

ಚಿಲ್ಲರೆ ಹಣದುಬ್ಬರ ಕೂಡಾ ಕಳೆದ ತಿಂಗಳು ಶೇಕಡ 7.8ನ್ನು ತಲುಪಿತ್ತು. ಹಣದುಬ್ಬರದ ಓಟಕ್ಕೆ ತಡೆ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ನಿರೀಕ್ಷೆ ಅರ್ಥಶಾಸ್ತ್ರಜ್ಞರದ್ದು. ಇತ್ತೀಚೆಗೆ ಕೇಂದ್ರೀಯ ಬ್ಯಾಂಕ್, ಮೂಲದರವನ್ನು 40 ಅಂಶಗಳಷ್ಟು ಹೆಚ್ಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News