ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ಗರಿಷ್ಟ ಪ್ರಮಾಣದ ಉಷ್ಣಮಾರುತದ ಸಾಧ್ಯತೆ: ವರದಿ

Update: 2022-05-19 18:01 GMT

ಲಂಡನ್, ಮೇ 19: ಹವಾಮಾನ ಬದಲಾವಣೆಯಿಂದ ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ದಾಖಲೆ ಮಟ್ಟದ ಉಷ್ಣಮಾರುತ ಬೀಸುವ ಸಾಧ್ಯತೆ 100%ದಷ್ಟಿದೆ ಎಂದು ಬ್ರಿಟನ್‌ನ ಹವಾಮಾನಶಾಸ್ತ್ರ ಇಲಾಖೆಯ ಅಧ್ಯಯನ ವರದಿ ಹೇಳಿದೆ.2010ರ ಎಪ್ರಿಲ್ - ಮೇ ಅವಧಿಯಲ್ಲಿ ಈ ವಲಯದಲ್ಲಿ ದಾಖಲೆ ಮೀರಿದ ತಾಪಮಾನ ವರದಿಯಾಗಿತ್ತು. ಇದನ್ನೂ ಮೀರಿದ ತಾಪಮಾನದಿಂದ ಕೂಡಿದ ಉಷ್ಣಮಾರುತ ಬೀಸಲಿದೆ ಎಂದು ಈ ವಾರ ಪ್ರಕಟವಾದ ಬ್ರಿಟನ್ ಹವಾಮಾನ ಶಾಸ್ತ್ರ ಇಲಾಖೆ ಗುಣಲಕ್ಷಣ ಅಧ್ಯಯನ ವರದಿ ಹೇಳಿದೆ.

2010ರಲ್ಲಿ ಸರಾಸರಿ ತಾಪಮಾನ ಮೀರಿದ ಉಷ್ಣಮಾರುತ ಬೀಸಿರುವುದು 312 ವರ್ಷಕ್ಕೊಮ್ಮೆ ಜರಗುವ ಸಹಜ ವಿದ್ಯಮಾನವಾಗಿದೆ. ಆದರೆ, ಈಗಿನ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಈ ಸಾಧ್ಯತೆ ಪ್ರತೀ 3.1 ವರ್ಷಕ್ಕೆ ಇಳಿದಿದೆ ಮತ್ತು ಶತಮಾನದ ಅಂತ್ಯದ ವೇಳೆಗೆ ಇದು ಪ್ರತೀ 1.15 ವರ್ಷಕ್ಕೊಮ್ಮೆ ಸಂಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ತಾಪಮಾನ 50.0 ಡಿಗ್ರಿ ಸೆಲ್ಶಿಯಸ್‌ಗೆ ಏರಿರುವುದರಿಂದ ಪ್ರಸ್ತುತ ಉಷ್ಣಮಾರುತ ಸಮುದಾಯ ಮತ್ತು ಜೀವನೋಪಾಯಗಳ ಮೇಲೆ ಪರಿಣಾಮ ಬೀರುವ ಹವಾಮಾನ ವೈಪರೀತ್ಯವಾಗಿರುವುದು ಸ್ಪಷ್ಟವಾಗಿದೆ ಎಂದು ಹವಾಮಾನ ಇಲಾಖೆಯ ಪ್ರೊಫೆಸರ್ ಪೀಟರ್ ಸ್ಟಾಟ್ ಹೇಳಿದ್ದಾರೆ.  ಹೊಸ ದಾಖಲೆಯ ಉಷ್ಣಮಾರುತದ ಸಾಧ್ಯತೆಯಿದೆ ಎಂದು ಹೇಳಲಾಗಿದ್ದರೂ ಹವಾಮಾನ ವಿಜ್ಞಾನಿಗಳು ಈ ತಿಂಗಳಾಂತ್ಯದವರೆಗೆ ಕಾಯಬೇಕಿದೆ. ತಿಂಗಳಾಂತ್ಯಕ್ಕೆ ಎಪ್ರಿಲ್-ಮೇ ತಿಂಗಳ ಎಲ್ಲಾ ತಾಪಮಾನಗಳ ದಾಖಲೆಗಳನ್ನು ಒಟ್ಟುಗೂಡಿಸಿದಾಗ ಪ್ರಸ್ತುತ ಶಾಖದ ಅಲೆಯು 2010ರ ಮಟ್ಟವನ್ನು ಮೀರುತ್ತದೆಯೇ ಎಂಬುದು ಖಚಿತವಾಗುತ್ತದೆ.

 ಈ ಅಧ್ಯಯನ ವರದಿಯನ್ನು ಡಾ. ನಿಕೋಸ್ ಕ್ರಿಸ್ಟಿಡೀಸ್ ಸಿದ್ಧಪಡಿಸಿದ್ದಾರೆ. ಯಾವಾಗಲೂ ಎಪ್ರಿಲ್ ಮತ್ತು ಮೇ ಸಮಯದಲ್ಲಿ ಉಷ್ಣತೆಯ ಸ್ಥಿತಿಯು ಆ ಪ್ರದೇಶದಲ್ಲಿ ಮುಂಗಾರು ಪೂರ್ವ ಹವಾಮಾನದ ಲಕ್ಷಣವಾಗಿದೆ. ಆದರೂ ಹವಾಮಾನ ಬದಲಾವಣೆ ಶಾಖದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ನಮ್ಮ ಅಧ್ಯಯನವು ತೋರಿಸುತ್ತದೆ. ಇದು ದಾಖಲೆ ಮುರಿಯುವ ತಾಪಮಾನ ಉಂಟಾಗುವ 100% ಸಾಧ್ಯತೆಯನ್ನು ತೋರಿಸುತ್ತದೆ . ಶತಮಾನದ ಅಂತ್ಯದ ವೇಳೆಗೆ ಹವಾಮಾನ ಬದಲಾವಣೆಯಲ್ಲಿನ ಹೆಚ್ಚಳವು ಈ ರೀತಿಯ ದಾಖಲೆ ಮಟ್ಟದ ತಾಪಮಾನದ ಸರಾಸರಿಯನ್ನು ಪ್ರತೀ ವರ್ಷಕ್ಕೆ ಇಳಿಸಬಹುದು(ಈ ಹಿಂದೆ 312 ವರ್ಷಕ್ಕೆ ಒಮ್ಮೆ) ಎಂದವರು ಹೇಳಿದ್ದಾರೆ.

 ಈ ಮಧ್ಯೆ, ಪಾಕಿಸ್ತಾನದಲ್ಲಿ ರವಿವಾರ 51 ಡಿಗ್ರಿ ಸೆಲ್ಶಿಯಸ್‌ಗೆ ಏರಿದ್ದ ಉಷ್ಣಮಾರುತ ಸೋಮವಾರ ತುಸು ಇಳಿಕೆಯಾಗಿದೆ ಎಂದು ವರದಿಯಾಗಿದೆ. ಆದರೆ, ವಾರದ ಮಧ್ಯಾವಧಿಯಲ್ಲಿ ಮತ್ತೆ ಉಷ್ಣತೆ ಹೆಚ್ಚುವ ನಿರೀಕ್ಷೆಯಿದ್ದು ಪಾಕಿಸ್ತಾನದ ಕೆಲವೆಡೆ ತಾಪಮಾನ ಮತ್ತೆ 50 ಡಿಗ್ರಿ ಮೀರಬಹುದು. ವಾರಾಂತ್ಯದ ವೇಳೆ ಮತ್ತೆ ಸರಾಸರಿ ಮಟ್ಟಕ್ಕೆ ಕುಸಿಯಬಹುದು. ದೇಶದ ಕೆಲವೆಡೆ ಕೃಷಿ ಕಾಯಕದ ಪೂರ್ವಭಾವಿಯಾಗಿ ಯೋಜಿತ ಕೃಷಿ ದಹನ(ತರಗೆಲೆ, ಮಣ್ಣು, ಕಸಕಡ್ಡಿ ಒಟ್ಟುಸೇರಿಸಿ ಸುಡುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು) ಕಾರ್ಯ ನಡೆಯುತ್ತಿರುವುದರಿಂದ ವಾಯು ಗುಣಮಟ್ಟ ಕುಸಿಯಲಿದೆ ಎಂದು ಬ್ರಿಟನ್ ಹವಾಮಾನ ಇಲಾಖೆಯ ಜಾಗತಿಕ ಮಾರ್ಗದರ್ಶನ ಘಟಕದ ಅಧಿಕಾರಿ ಪೌಲ್ ಹಚಿಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News