10 ದಿನಗಳಲ್ಲಿ ಐದನೇ ಸಲ ಸಾರ್ವಕಾಲಿಕ ಕುಸಿತ ದಾಖಲಿಸಿದ ರೂಪಾಯಿ

Update: 2022-05-19 18:44 GMT

ಹೊಸದಿಲ್ಲಿ,ಮೇ 19: ಡಾಲರ್ನೆದುರು ರೂಪಾಯಿ ಗುರುವಾರ ಸಾರ್ವಕಾಲಿಕ ಕನಿಷ್ಠವಾದ 77.33ರಲ್ಲಿ ಮುಕ್ತಾಯಗೊಂಡಿದ್ದು,ಇದು ಕಳೆದ ಹತ್ತು ವಹಿವಾಟು ಅವಧಿಗಳಲ್ಲಿ ಐದನೇ ಸಾರ್ವಕಾಲಿಕ ಕುಸಿತವಾಗಿದೆ. ಇದೇ ವೇಳೆ ಡಾಲರ್ ಹೆಚ್ಚಿನ ಬೇಡಿಕೆಯಿಂದಾಗಿ ಚೇತರಿಸಿಕೊಂಡಿದೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಜಾಗತಿಕ ಸೆಂಟ್ರಲ್ ಬ್ಯಾಂಕುಗಳ ಕಠಿಣ ಕ್ರಮಗಳು ಬೆಳವಣಿಗೆಯನ್ನು ತಡೆಯಬಹುದು ಎಂಬ ಹೆಚ್ಚುತ್ತಿರುವ ಕಳವಳಗಳಿಂದಾಗಿ ಜಾಗತಿಕ ಮಾರುಕಟ್ಟೆಗಳೂ ಕುಸಿತವನ್ನು ಕಂಡಿವೆ.


ಭಾಗಶಃ ಪರಿವರ್ತನೀಯ ರೂಪಾಯಿ ಡಾಲರ್ನೆದುರು ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.73ಕ್ಕೆ ಮುಕ್ತಾಯಗೊಂಡಿದೆ ಎಂದು ಬ್ಲೂಮ್ಬರ್ಗ್ ತಿಳಿಸಿದ್ದರೆ,ಭಾರತೀಯ ಕರೆನ್ಸಿಯು ಪ್ರತಿ ಡಾಲರ್ಗೆ ತಾತ್ಕಾಲಿಕವಾಗಿ 77.72ರಲ್ಲಿ ಮುಕ್ತಾಯಗೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಬೆಳಿಗ್ಗೆ ಅಂತರ್ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ನೆದುರು 77.72ರ ಕೆಳಮಟ್ಟದಲ್ಲಿ ಆರಂಭಗೊಂಡಿದ್ದ ರೂಪಾಯಿ ಮೌಲ್ಯವು ದಿನದ ವಹಿವಾಟಿನಲ್ಲಿ 77.76 ಮತ್ತು 77.63ರ ನಡುವೆ ಹೊಯ್ಡೆಡುತ್ತಿತ್ತು.ಬುಧವಾರ ಡಾಲರ್ನೆದುರು ರೂಪಾಯಿ 77.61ರಲ್ಲಿ ಮುಕ್ತಾಯಗೊಂಡಿತ್ತು.
               

ಹೂಡಿಕೆದಾರರಿಗೆ 6.72 ಲ.ಕೋ.ರೂ.ನಷ್ಟಗುರುವಾರ ಭಾರತೀಯ ಹೂಡಿಕೆದಾರರ ಪಾಲಿಗೆ ಕರಾಳವಾಗಿದ್ದು, ಒಂದೇ ದಿನದಲ್ಲಿ 6.72 ಲ.ಕೋ.ರೂ.ಗಳ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬುಧವಾರ ಅಮೆರಿಕದ ಡೋ ಜೋನ್ಸ್ ಮತ್ತು ನಾಸ್ಡಾಕ್ ಅನುಕ್ರಮವಾಗಿ ಶೇ.3.57 ಮತ್ತು ಸುಮಾರು ಶೇ.5ರಷ್ಟು ಕುಸಿತವನ್ನು ಕಂಡಿದ್ದು,ಇದಕ್ಕನುಗುಣವಾಗಿ ಜಾಗತಿಕ ಮಾರುಕಟ್ಟೆಗಳೂ ಗುರುವಾರ ಕುಸಿತಕ್ಕೆ ಸಾಕ್ಷಿಯಾಗಿದ್ದವು. ಈ ಪ್ರವೃತ್ತಿ ಭಾರತೀಯ ಶೇರು ಮಾರುಕಟ್ಟೆಗಳಲ್ಲೂ ಮುಂದುವರಿದಿತ್ತು.

 ಎನ್ಎಸ್ಇ ಸೂಚ್ಯಂಕ ನಿಫ್ಟಿ 431 ಅಂಕಗಳನ್ನು ಕಳೆದುಕೊಂಡು 15809.4ರಲ್ಲಿ ಮತ್ತು ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 1416.30 ಅಂಕಗಳನ್ನು ಕಳೆದುಕೊಂಡು 52792.23ರಲ್ಲಿ ಮುಕ್ತಾಯಗೊಂಡಿವೆ.

ಇವೆರಡೂ ಸೂಚ್ಯಂಕಗಳು ತಲಾ ಶೇ.2.6 ಕುಸಿತವನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News