ರಾಜ್ಯದಲ್ಲಿ ಅಭಿವೃದ್ದಿ ಆಗಿದ್ದು ಭ್ರಷ್ಟಾಚಾರ ಮಾತ್ರ: ಸಲೀಂ ಅಹ್ಮದ್ ಆರೋಪ

Update: 2022-05-20 08:59 GMT

ಮಂಗಳೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಸಾಧನೆ ಶೂನ್ಯವಾಗಿದ್ದು, ಅಪರೇಶನ್ ಕಮಲದೊಂದಿಗೆ ಉದಯವಾದ ಭ್ರಷ್ಟಾಚಾರದಲ್ಲೇ ಮುಳುಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಆಗಿದ್ದು ಭ್ರಷ್ಟಾಚಾರ ಮಾತ್ರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸರಕಾರದ ಶೇ. 40 ಕಮಿಷನ್‌ನಿಂದಾಗಿ ಈಗಾಗಲೇ ರಾಜ್ಯದ ಜನ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.

ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ಮಿತಿ ಮೀರಿದ್ದು, ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಮಾಧ್ಯಮ, ಜನ ಆಡಿಕೊಳ್ಳುತ್ತಿರುವಂತೆ ಸಿಎಂ ಸ್ಥಾನಕ್ಕೆ 500 ಕೋಟಿ, ಮಂತ್ರಿಗೆ 100 ಕೋಟಿ ರೂ., ಪೊಲೀಸ್ ನೇಮಕಾತಿ ಸೇರಿದಂತೆ ಹೊಟೇಲ್ ಮೆನುಕಾರ್ಡ್ ರೀತಿಯಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರ ಸಾಗಿದ್ದು, ಲೂಟಿಕೋರರ ಸರಕಾರವಾಗಿ  ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.

ಜನತೆ ಬದಲಾವಣೆ ಬಯಸಿದ್ದು, ಆ ನಿಟ್ಟಿನಲ್ಲಿ  ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಾಗೂ ಹೋರಾಟದ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಕೆಲಸವನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ೭೬ ಲಕ್ಷ ಹೊಸ ಸದಸ್ಯತ್ವ ನೋಂದಣಿ ಮಾಡಲಾಗಿದ್ದು, ಕರ್ನಾಟಕದಲ್ಲಿ ಅತೀ ಹೆಚ್ಚು ಸದಸ್ಯತ್ವ ನೋಂದಣಿಯ ಮೂಲಕ ದಾಖಲೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ೧೧೪೯೭೫ ಸದಸ್ಯತ್ವ ನೋಂದಣಿಯಾಗಿದೆ. ಮೇ ೨೮ಕ್ಕೆ ಬೂತ್ ಮಟ್ಟಗಳಲ್ಲಿ ನೋಂದಣಿ ಅಭಿಯಾನ ಪೂರ್ಣಗೊಳ್ಳುವ ಭರವಸೆ ಇದೆ ಎಂದು ಅವರು ಹೇಳಿದರು.

ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬರುವ ಧೈರ್ಯ ಇಲ್ಲದಿರುವುದರಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಪ್ರಮೋದ್ ಮಧ್ವರಾದ್, ಬಸವರಾಜ ಹೊರಟ್ಟಿಗೆ ಅಧಿಕಾರದ ಆಸೆ

ಪ್ರಮೋದ್ ಮಧ್ವರಾಜ್ ಅವರಿಗೆ ಪಕ್ಷದಿಂದ ಮಂತ್ರಿ ಸ್ಥಾನ, ಪಕ್ಷದ ಉನ್ನತ ಹುದ್ದೆ ನೀಡಲಾಗಿದ್ದರೂ ಅವರು ಪಕ್ಷ ತೊರೆದಿರುವುದು ಅಧಿಕಾರದ ಆಸೆಯೇ ಕಾರಣ. ಚುನಾವಣೆಯ ಬಳಿಕ ಅವರು ಪಶ್ಚಾತ್ತಾಪ ಪಡಬಹುದು. ಬಸವರಾಜ ಹೊರಟ್ಟಿಯವರದ್ದು ಅದೇ ಚಿಂತನೆ. ಜನ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಚಿಂತನೆಗಳನ್ನು ಪರಿಗಣಿಸಿ ಮತ ಚಲಾಯಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ವಿಧಾನಸಭೆಯ ಉಪನಾಯಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್ ಲೋಬೋ, ಮುಖಂಡರಾದ ಟಿ.ಕೆ. ಸುಧೀರ್, ನೀರಜ್ ಪಾಲ್, ಶಾಹುಲ್ ಹಮೀದ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

ಜೂನ್ ೨ನೆ ವಾರದಲ್ಲಿ ಕೆಪಿಸಿಸಿಯಿಂದ ಚಿಂತನ ಮಂಥನ

ಪಕ್ಷ ಸಂಘಟನೆ, ಚುನಾವಣೆ ಕುರಿತಂತೆ ಚರ್ಚಿಸುವ ಸಲುವಾಗಿ ಜೂನ್ ೨ನೆ ವಾರದಲ್ಲಿ ಕೆಪಿಸಿಸಿ ವತಿಯಿಂದ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿಯೂ ಶಾಸಕರು, ಪದಾಧಿಕಾರಿ ಗಳನ್ನು ಒಳಗೊಂಡ ಈ ಚಿಂತನ ಮಂಥನ ನಡೆಯಲಿದೆ. ಅಕ್ಟೋಬರ್ ೨ರಿಂದ ರಾಹುಲ್ ಗಾಂಧಿ ನಾಯಕತ್ವದಲ್ಲಿ ದೇಶದಲ್ಲಿ ಭಾರತ್ ಯಾತ್ರಾದ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

ಶಾಂತಿ ಸಾಮರಸ್ಯದ ಜಿಲ್ಲೆಯಲ್ಲಿ ಶಾಂತಿಗೆ ಭಂಗ ತರುವ ಪ್ರಯತ್ನಗಳು ಆಗಾಗ್ಗೆ ನಡೆಯುತ್ತಿದ್ದು, ಶಾಂತಿ ಕದಡುವ ಯಾವುದೇ ಸಂಘಟನೆಯೇ ಆಗಿರಲಿ ಅದನ್ನು ನಿಷೇಧಿಸಬೇಕು. ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು ಎಂದು ಸಲೀಂ ಅಹ್ಮದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News