15 ವರ್ಷಗಳಿಂದ ಬೆಂಗಳೂರಿಗೆ ಕೊಟ್ಟ ಅನುದಾನದ ಬಗ್ಗೆ ಸಮಗ್ರ ತನಿಖೆಯಾಗಬೇಕು: ಕುಮಾರಸ್ವಾಮಿ

Update: 2022-05-20 09:32 GMT

ಬೆಂಗಳೂರು: ಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ, ಯಶವಂತಪುರ ಸೇರಿದಂತೆ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣವನ್ನು ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಭೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ ಎಂದು ಹೇಳಿದರು.

ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ದಾಸರಳ್ಳಿ ವಿಧಾನಸಭಾ ವಿಧಾನಸಭಾ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರ, ಸಿದ್ಧಾರ್ಥ ನಗರ ಕೊಳಗೇರಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಮುಂತಾದ ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ನಂತರ ಅವರು  ಮಾಧ್ಯಮಗಳ ಜೊತೆ ಮಾತನಾಡಿದರು.

ಬೆಳಗ್ಗೆ 8 ಗಂಟೆಯಿಂದ 12.30 ವರೆಗೂ ದಾಸರಹಳ್ಳಿ ಕ್ಷೇತ್ರದಲ್ಲಿ ಸಂಚಾರ ಮಾಡಿದ ಮಾಜಿ ಮುಖ್ಯಮಂತ್ರಿ, 28 ಕ್ಷೇತ್ರಗಳಿಗೆ ಎಷ್ಟು ಹಣವನ್ನು 15 ವರ್ಷಗಳಲ್ಲಿ ಬಿಡುಗಡೆ ಮಾಡಿದ್ದಾರೆ ಮಾಹಿತಿ ಪಡೆಯುತ್ತೇನೆ. ಜನರ ಬದುಕಿನ ಪ್ರಶ್ನೆ. ಇದರಲ್ಲಿ ರಾಜಕಾರಣ ನಾನು ಮಾಡ್ತಿಲ್ಲ ಎಂದು ಹೇಳಿದರು.

ಮಳೆಯಿಂದ ನಷ್ಟ ಆಗಿರುವವರಿಗೆ ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ನಷ್ಟ ಆಗಿರುವ ಶೇ. 75ದರಷ್ಟು ಪರಿಹಾರ ಕೊಡಬೇಕು. ಅದರಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ನನ್ನ ಕಾಲದಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 750 ಕೋಟಿ ರೂ. ನೀಡಿದ್ದೆ. ಆಮೇಲೆ ರಾಜಕೀಯ ಮಾಡಿ ಹಣ ವಾಪಸ್ಸು ಪಡೆದರು. ನಾನು ಕೂಡ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭೇಟಿ ಮಾಡಿದ್ದೆ. ದಾಸರಹಳ್ಳಿ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿ ಅಂತ ಹತ್ತು ಸಾರಿ‌ ಮನವಿ ಮಾಡಿದೆ. ನಂತರ ಶಾಸಕರು‌ ಕೂಡ ಪ್ರತಿಭಟನೆ ‌ಮಾಡಿದರು. ಆದರೂ ಕೂಡ ಅನುಧಾನ ಬಿಡುಗಡೆ ಆಗಿಲ್ಲ ಎಂದು ಅವರು ದೂರಿದರು.

ಅದೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಹತ್ತು ವರ್ಷಗಳ ಕಾಲ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರ ಅಂತ ಗೊತ್ತು. ಅದರ ದಾಖಲೆ ತೆಗೆಸಿ ಮಾತನಾಡುತ್ತೇನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಾಸರಹಳ್ಳಿಯಲ್ಲಿ ರಾಜಕೀಯ ಕಾರಣಕ್ಕೆ ಹಣ ಬಿಡುಗಡೆ ಮಾಡಿಲ್ಲ. ಇಲ್ಲಿ ಯಾದಗಿರಿ ಮತ್ತು‌ ಬೀದರ್ ಭಾಗದ ಜನರು ವಾಸ ಮಾಡುತ್ತಿದ್ದಾರೆ.  ಪಾಪ ಅವರು ಮುಗ್ಧ ಜನರು. ಅವರಿಗೆ ಸರಿಯಾಗಿ ರಸ್ತೆ, ಚರಂಡಿ ಇಲ್ಲ. ಈಗ ಮೂವತ್ತು ಕೋಟಿ‌ ಬಿಡುಗಡೆ ಮಾಡಿದ್ದಾರೆ. ಇಷ್ಟು ದೊಡ್ಡ ಕ್ಷೇತ್ರಕ್ಕೆ ಮೂವತ್ತು ಕೋಟಿ ಎಲ್ಲಿ ಸಾಲುತ್ತದೆ ಎಂದರು.

ರಾಜಕಾಲುವೆಗೆ 1600 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೀರಾ. ಆದರೆ ಕಾಮಗಾರಿ ನಡೆಯುತ್ತಿಲ್ಲ. ವಿಳಂಬ ಆಗಲು ಕಾರಣ ಏನು ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಸಭೆ ಮಾಡಲು ಕಾಂಗ್ರೆಸ್ ‌ನಾಯಕರು ಬಿಡಲಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷ ಇತ್ತು. ಏನು ಅಭಿವೃದ್ಧಿ ಮಾಡಿದೆ. ಈಗ ಬಿಜೆಪಿ ಸರ್ಕಾರ ಇದೆ. ಮೂರು ವರ್ಷ ಆಗುತ್ತಾ ಬಂತು ಇವರು ಕೂಡ ಯಾವುದೇ ಅಭಿವೃದ್ಧಿ ‌ಮಾಡುತ್ತಿಲ್ಲ. ಅಲ್ಪ ಸ್ವಲ್ಪ ಮಾನ ಮರ್ಯಾದೆ ಇದ್ರೆ ಬೆಂಗಳೂರು ಅಭಿವೃದ್ಧಿ ಮಾಡಿ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಅವರೇ ಮಂತ್ರಿಗಳ ಕ್ಷೇತ್ರಕ್ಕೆ ಹೋಗಬೇಡಿ. ಜನರು ಸಮಸ್ಯೆಯಿಂದ ಪಡುತ್ತಿರುವ  ಕ್ಷೇತ್ರಕ್ಕೆ ಹೋಗಿ. ಏಳು ಮಂದಿ ವಲಸೆ ಸಚಿವರು ಏನು ಮಾಡ್ತಿದ್ದಾರೆ. ಆ ಸಚಿವರ ಕ್ಷೇತ್ರಕ್ಕೆ ಯಾಕೆ ಹೋಗ್ತೀರಾ.1200 ಕೋಟಿ ಬಿಡುಗಡೆ ಮಾಡಿದ್ದೇನೆ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಅ ಹಣ ಏನು ಆಯಿತು ಎಂದು ಪ್ರಶ್ನಿಸಿದರು.

ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ನಗರ ಪ್ರದಕ್ಷಿಣೆ ಹಾಕಿದರೆ ಸಾಲದು. ಯಾವ ಕಡೆ ಸಮಸ್ಯೆ ಆಗಿದೆ ಪರಿಹಾರ ಮಾಡಿ. ಎಲ್ಲಿ ಹಣ ಪೋಲು ಆಗುತ್ತಿದೆ ಅದನ್ನು ಸರಿ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ ಕುಮಾರಸ್ವಾಮಿ, ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಜನರ ಜೊತೆ ಚೆಲ್ಲಾಟ ಆಡಬೇಡಿ. ಹಣ ಮಾಡುವುದಕ್ಕೆ ಬೇರೆ ದಾರಿ ಇದೆ. ಹಣ ಲೂಟಿ ಮಾಡುವುದು ನಿಲ್ಲಿಸಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಆಗ್ರಹಿಸಿದರು.

ಚಂಬಲ್ ಕಣಿವೆಗೆ ದರೋಡೆ ಮಾಡುವವರನ್ನು ನೋಡುವುದಕ್ಕೆ ಹೋಗುವುದು ಬೇಡ. ಇಲ್ಲೇ ಚಂಬಲ್ ಕಣಿಕೆ ದರೋಡೆಕೋರರು ಇದ್ದಾರೆ. ಜನರ ಹಣ ಲೂಟಿ ಮಾಡಬೇಡಿ. ಎರಡು ಹೊತ್ತು ಊಟಕ್ಕೆ ಯಾಕೆ ಇಷ್ಟು ಮಾಡ್ತೀರಾ ಎಂದು ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಮುಖ್ಯಮಂತ್ರಿಗಳು ಹೇಳಿಕೆ ಕೊಡೋದು ಬೇಡ. ಕಾಮನ್ ಮ್ಯಾನ್ ಸಿಎಂ ಅಂತ ಆಗೋದು ಬೇಡ. ಸಮಸ್ಯೆ ಪರಿಹಾರ ಮಾಡಿ ಎಂದು ಒತ್ತಾಯಿಸಿದರು.

ಇಂದಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಸಿಟಿ ರೌಂಡ್ಸ್ ಆರಂಭಿಸಿದ್ದು, ನೆಲಗದರನಹಳ್ಳಿ, ರುಕ್ಮಿಣಿ ನಗರ, ಪೀಣ್ಯ‌ ಕೈಗಾರಿಕಾ ಪ್ರದೇಶ,ಸಿದ್ದಾರ್ಥ ಕಾಲನಿ, ಬಸಪ್ಪನ ಕಟ್ಟೆ, ಚಿಕ್ಕ ಬಾಣಾವರ, ರಾಜಗೋಪಾಲನಗರ, ಹೆಗ್ಗನಹಳ್ಳಿ ಮತ್ತಿತರ ಮಳೆ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಪ್ರದಕ್ಷಿಣೆ ಸಮಯದಲ್ಲಿ ಮಳೆ ಹಾನಿ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆಗೆ ದಾಸರ ಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸಾಥ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News