ಸರ್ವೋಚ್ಚ ನ್ಯಾಯಾಲಯದಿಂದ ಡಾ.ಶಿವರಾಮ ಕಾರಂತ ಬಡಾವಣೆಯ 299 ಕಟ್ಟಡಗಳು ಸಕ್ರಮ

Update: 2022-05-20 13:31 GMT

ಬೆಂಗಳೂರು, ಮೇ 20: ನ್ಯಾ.ಎ.ವಿ.ಚಂದ್ರಶೇಖರ್ ಸಮಿತಿ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆಯ 15ನೆ ವರದಿಯನ್ನು ಅಂಗೀಕರಿಸಿ 299 ಕಟ್ಟಡಗಳನ್ನು ಸಕ್ರಮಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಇಲ್ಲಿಯವರೆಗೆ ಒಟ್ಟು 3,124 ಕಟ್ಟಡಗಳು ಸಕ್ರಮಗೊಂಡಿವೆ.

ನ್ಯಾಯಾಲಯದ ಆದೇಶದಂತೆ ಡಾ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲಕರಿಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮ ಪ್ರಮಾಣ ಪತ್ರವನ್ನು ವಿತರಿಸುವಂತೆಯೂ ಹಾಗೂ ಕಾನೂನು ರೀತ್ಯ ಬೆಟರ್ ಮೆಂಟ್ ಶುಲ್ಕ ವಿಧಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮಗೊಂಡ ಕಟ್ಟಡಗಳ ಮಾಲಕರಿಗೆ ಸಕ್ರಮ ಪ್ರಮಾಣ ಪತ್ರವನ್ನು ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮೇ 13 ರಿಂದ ವಿತರಿಸಲು ಆರಂಭಿಸಿದೆ. ಸೋಮವಾರ ದಿಂದ ಶುಕ್ರವಾರದ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಕ್ರಮ ಪ್ರಮಾಣ ಪತ್ರ ವಿತರಣೆ ಕಾರ್ಯ ನಡೆಯುತ್ತಿದ್ದು, ಆಯಾ ದಿನಕ್ಕೆ ಹಾಗೂ ಸಮಯಕ್ಕೆ ಸಾರ್ವಜನಿಕರು ಹಾಜರಾಗುವ ಕುರಿತು ಎಸ್‍ಎಮ್‍ಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರವನ್ನು ಪಡೆಯಲು ತಮ್ಮೊಂದಿಗೆ ಪಾಸ್‍ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್‍ಕಾರ್ಡ್, ಸಮಿತಿಯಿಂದ ಸ್ವೀಕರಿಸಿರುವ ಎಸ್‍ಎಂಎಸ್ ಸಾಫ್ಟ್ ಕಾಪಿ ಹಾಗೂ ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News