ಗುರಿ ಸಾಧನೆಗೆ ಪ್ರಯತ್ನ ನಿರಂತರವಾಗಿರಲಿ: ಉಡುಪಿ ಡಿಸಿ ಕೂರ್ಮಾರಾವ್

Update: 2022-05-20 14:18 GMT

ಉಡುಪಿ, ಮೇ 20: ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ನಡೆಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ. 

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ 625 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು.

ಎಸೆಸೆಲ್ಸಿ ನಂತರ ವಿದ್ಯಾರ್ಥಿಗಳು ತಾವು ಹೊಂದಿರುವ ನಿಗದಿತ ಗುರಿಯನ್ನು ಯಾವುದೇ ಸಂದರ್ಭದಲ್ಲೂ ಕೈಬಿಡದೆ ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರ ವಾಗಿ ಪ್ರಯತ್ನಿಸಬೇಕು. ನಿರಂತರ ಅಧ್ಯಯನ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿ ಸಾಧನೆಗೆ ಅಗತ್ಯವಿರುವ ಪುಸ್ತಕಗಳ  ಅಧ್ಯಯನ ಮಾಡಬೇಕು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತ ಮತ್ತು ಡಿಜಿಟಲ್ ಗ್ರಂಥಾಲಯ ಸೌಲಭ್ಯವಿದ್ದು, ಅದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಡಿಡಿಪಿಐ ಗೋವಿಂದ ಮಡಿವಾಳ, ಶಿಕ್ಷಣಾಧಿಕಾರಿ ಜಾಹ್ನವಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ್ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯದ ಟಾಪರ್‌ಗಳಾದ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪುನೀತ್ ನಾಯ್ಕ್, ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಗಾಯತ್ರಿ, ಕಾಳಾವರ ಸರಕಾರಿ ಪ್ರೌಢಶಾಲೆಯ ನಿಶಾ ಹಾಗೂ ಬೈಂದೂರು ಕಿರಿಮಂಜೇಶ್ವರ ಸಂದೀಪನ ಆಂಗ್ಲಮಾಧ್ಯಮ ಶಾಲೆಯ ಅಕ್ಷತಾ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News