ಎಸ್ಸಿ-ಎಸ್ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಆ ಸಮುದಾಯಗಳಿಗೆ ಮಾತ್ರ ಬಳಕೆಯಾಗಬೇಕು: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

Update: 2022-05-20 15:09 GMT

ಬೆಂಗಳೂರು, ಮೇ 20: ‘ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಆಗಸ್ಟ್ ತಿಂಗಳ ಅಂತ್ಯದೊಳಗಾಗಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಆ ಸಮುದಾಯಗಳಿಗೆ ಮಾತ್ರ ಬಳಕೆಯಾಗಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳರಾಜ್ಯ ಅಭಿವೃದ್ಧಿ ಪರಿಷತ್ ಮಾತನಾಡಿದ ಅವರು, ‘ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಗಮ ಮಂಡಳಿಗಳ ಬ್ಯಾಂಕ್ ಖಾತೆಯಲ್ಲಿರುವ 1,600 ಕೋಟಿ ರೂ.ಗಳನ್ನು ಮುಂದಿನ 3 ತಿಂಗಳಲ್ಲಿ (ಗಂಗಾಕಲ್ಯಾಣ ಯೋಜನೆ ಹೊರತುಪಡಿಸಿ) ಎಸ್ಸಿಪಿ-ಟಿಎಸ್ಪಿ ಯೋಜನೆಗಳಿಗೆ ವಿನಿಯೋಗಿಸಬೇಕು. ತಪ್ಪಿದಲ್ಲಿ ಈ ಮೊತ್ತವನ್ನು ಈ ಸಾಲಿನ ಕಾರ್ಯಕ್ರಮಗಳಿಗೆ ಮರುಹಂಚಿಕೆ ಮಾಡಲಾಗುವುದು ಎಂದು ಸೂಚನೆ ನೀಡಿದರು. 

‘ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಮಹಿಳೆಯರ ಕಾರ್ಯಕ್ರಮಗಳು, ವಿದ್ಯಾರ್ಥಿ ನಿಲಯಗಳ ಕ್ಲಸ್ಟರ್ ಯೋಜನೆಗಳಿಗೆ ಆಗಸ್ಟ್ 15 ರೊಳಗೆ ಚಾಲನೆ ನೀಡಲು ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಶಾಸನಬದ್ಧವಾಗಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳಿಗೆ ನಿಗದಿಯಾಗಿರುವ ಅನುದಾನವನ್ನು ಈ ಸಮುದಾಯಗಳ ಅಭಿವೃದ್ಧಿಗೆ ಮಾತ್ರವೇ ವೆಚ್ಚವಾಗಬೇಕು. ಯೋಜನೆಗಳ ಅನುಷ್ಠಾನವಾಗಿಲ್ಲವೆಂದು ಯಾವುದೇ ಸಬೂಬು/ಕಾರಣಗಳನ್ನು ಒಪ್ಪಲಾಗುವುದಿಲ್ಲ' ಎಂದು ಅವರು ಎಚ್ಚರಿಕೆ ನೀಡಿದರು.

‘ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ನೀಡಲು ಹೆಚ್ವಿನ ಆದ್ಯತೆ ನೀಡಬೇಕು. ಉನ್ನತ ಶಿಕ್ಷಣ ಇಲಾಖೆಯಡಿ ಫೆಲೋಶಿಪ್/ಲಾಪ್‍ಟಾಪ್ ವಿತರಣೆಗೆ ಆದ್ಯತೆ ನೀಡಬೇಕು. ಎಸ್ಸಿಪಿ-ಟಿಎಸ್ಪಿ ಯೋಜನೆಗಳಡಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸಲು ಹೆಚ್ಚಿನ ಆಸ್ಥೆ ವಹಿಸಬೇಕು. ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳಿಗೆ ಆದೇಶ ಹೊರಡಿಸುವುದು ಹಾಗೂ ಆಗಸ್ಟ್ 15 ರೊಳಗೆ ಎಲ್ಲ ವೈಯಕ್ತಿಕ ಯೋಜನೆಗಳಿಗೆ ಚಾಲನೆ ನೀಡುವುದು. ಸಮಾಜ ಕಲ್ಯಾಣ ಇಲಾಖೆಯು ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ತಲುಪುತ್ತಿರುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು' ಎಂದು ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಸಚಿವ ಬಿ.ಶ್ರೀ ರಾಮುಲು, ಶಾಸಕರಾದ ಎನ್.ಮಹೇಶ್ ಹಾಗೂ ದುರ್ಯೋಧನ ಐಹೊಳೆ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News