ರಾಷ್ಟ್ರಕವಿ ಕುವೆಂಪುಗೆ ಅಪಮಾನ ಆರೋಪ: ರೋಹಿತ್ ಚಕ್ರತೀರ್ಥ, ಲಕ್ಷ್ಮಣ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

Update: 2022-05-26 10:54 GMT
ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ವಕೀಲರ ನಿಯೋಗ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಗೌರವಕ್ಕೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷಣ್ ಆಕಾಶೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ವಕೀಲರ ನಿಯೋಗ ಆಗ್ರಹಿಸಿದೆ.

ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲರಾದ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್​ ರೆಡ್ಡಿ ಅವರಿಗೆ ದೂರು ಸಲ್ಲಿಸಿ ಆರೋಪಿತರವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿರುವ ಆರೋಪಿತರು ನಾಡಗೀತೆಗೂ ಅವಮಾನ ಮಾಡಿದ್ದಾರೆ. ಆದ್ದರಿಂದ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ವಿರುದ್ಧ ತಕ್ಷಣವೇ ಕಾನೂನು ರೀತಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರಿನ ವಿವರ: 2017ರಲ್ಲಿ ರೋಹಿತ್ ಚಕ್ರತೀರ್ಥ ಎನ್ನುವ ವ್ಯಕ್ತಿ ಕನ್ನಡ ನಾಡಿನ ಜನಮಾನಸದ ಹೃದಯಗೀತ ಆಗಿರುವ ನಾಡಗೀತೆಯನ್ನು ಗೇಲಿ ಮಾಡಿ, ವಿಕೃತಗೊಳಿಸಿ, ನಾಡಗೀತೆಗೆ ಅಪಾರ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ತರಾಗಿ ನಾಡಿನ ಖ್ಯಾತ ಸಾಹಿತಿಗಳನ್ನು ಕಡೆಗಣಿಸಿ ಸ್ಥಾಪಿತ ಹಿತಾಸಕ್ತಿಗಳ ಬರಹಗಳನ್ನು ಸೇರಿಸಿದ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿದೆ. 

ನಾಲ್ಕನೇ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಪರಿಚಯವನ್ನು ಅವಮಾನಕಾರಿ ರೀತಿಯಲ್ಲಿ ಪ್ರಕಟಿಸಿರುವುದು ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 2017 ರಲ್ಲಿ ನಾಡಗೀತೆಯನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥರ ಈ ವಿಕೃತ ಬರಹವನ್ನು ಸಾಮಾಜಿಕ ಜಾಲತಾಣವಲ್ಲದೆ ಇತರೆ ಮಾಧ್ಯಮಗಳಲ್ಲೂ ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಇದು ಕುವೆಂವು ಅವರ ಗೌರವಕ್ಕೆ ಧಕ್ಕೆ ತರುವ ಜೊತೆಗೆ ಅವರ ಅಪಾರ ಅಭಿಮಾನಿ ವರ್ಗದ ಭಾವನೆಗಳಿಗೆ ನೋವುಂಟು ಮಾಡಿದೆ.

"ಜಯ ಭಾರತ ಜನನಿಯ ತನುಜಾತ..” ಎಂದು ಆರಂಭವಾಗುವ ನಾಡಗೀತೆಯನ್ನು ಬರೆದವರು ರಾಷ್ಟ್ರಕವಿ ಕುವೆಂಪುರವರು ಈ ನಾಡಗೀತೆಯಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಜನಜೀವನ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅತ್ಯಂತ ಅಭಿಮಾನದಿಂದ ಹಾಡಿನಲಿಯುವ ಗೀತೆಯಿದು, ಇದೇ ಕಾರಣಕ್ಕ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡಗೀತೆಯಾಗಿ ಅಂಗೀಕರಿಸಿದೆ. ಈ ನಾಡಗೀತೆಯನ್ನು ನಾಡಿನ ಸಕಲರೂ ಅತ್ಯಂತ ಅಭಿಮಾನ, ಗೌರವಾಧರಗಳೊಂದಿಗೆ ಹಾಡುತ್ತಾರೆ. ಇಂತಹ ನಾಡಗೀತೆಗೆ ರೋಹಿತ್ ಚಕ್ರತೀರ್ಥ ಎಂಬಾತ ಅವಮಾನ ಮಾಡಿ ಅಸಡ್ಡೆ, ಅಸಹನೆ, ಗೇಲಿಗೆ ಒಳಪಡಿಸಿರುವುದು ಕನ್ನಡಿಗರಿಗೆ ಮತ್ತು ರಾಜ್ಯಕ್ಕೆ ಮಾಡಿದ ಅವಮಾನ.

ಇದೇ ರೀತಿ ಲಕ್ಷ್ಮಣ ಆಕಾಶೆ ಕಾರ್ಕಳ ಎಂಬ ವ್ಯಕ್ತಿ ರಾಷ್ಟ್ರಕವಿ ಕುವೆಂಪು ಅವರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ಈತನ ಬರಹಕ್ಕೆ ಲೋಹಿತ್ ಚಕ್ರತೀರ್ಥರ ಕುಮ್ಮಕ್ಕು ಇದೆ. ರಾಷ್ಟ್ರ ಕವಿ ಕುವೆಂಪು ಅವರು ನಿಧನರಾದ ನಾಲ್ಕು ದಶಕಗಳ ಬಳಿಕ ಅವರನ್ನು ಅತ್ಯಂತ ಅಮಾನುಷ ಭಾಷೆಯಲ್ಲಿ ನಿಂದಿಸಲಾಗಿದೆ. ಕುವೆಂಪು ಅವರ ಸಾಹಿತ್ಯವನ್ನು ಓದಿಕೊಂಡು ಬೆಳೆದ ನಾಡಿನ ಜನತೆಯ ಭಾವನೆಗಳಿಗೆ ಧಕ್ಕೆಯಾಗಿದೆ. ಅಲ್ಲದೇ, ನಾಡಿನ ಘನತೆ, ಗೌರವಕ್ಕೆ ಚ್ಯುತಿಯುಂಟಾಗಿದೆ.

ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಇಬ್ಬರೂ ನಾಡಿನ ಜನತೆಯ ಸಹನೆ, ಸೌಹಾರ್ದತೆಯನ್ನು ಕೆಡಿಸಬೇಕೆಂಬ ದುರುದ್ದೇಶದಿಂದಲೇ ಹಾಗೆ ಬರೆದಿದ್ದಾರೆ. ಶಾಂತಿಯುತ ನಾಡಿನಲ್ಲಿ ಜೀವ ವಿರೋಧಿ ಬರಹಗಳು ಹಿಂಸೆಗೆ ಪ್ರಚೋದಿಸುವಂತಹವು ಮತ್ತು ನಾಡಿನ ನೆಮ್ಮದಿ ಕೆಡಿಸುವಂತಹವು. ರಾಷ್ಟ್ರಕವಿ ಮತ್ತು ನಾಡಗೀತೆಯನ್ನು ಅವಮಾನಿಸುವುದು ಜನದ್ರೋಹಿ ಮತ್ತು ಅಪ್ಪಟ ದೇಶದ್ರೋಹಿ ಕೃತ್ಯವಾಗಿದೆ.

ಆದ್ದರಿಂದ ಈ ಇಬ್ಬರೂ ಸಮಾಜಘಾತುಕರ ಮೇಲೆ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕೆಂದು ಮನವಿ ಮಾಡುತ್ತೇವೆ. ಈ ಮೂಲಕ ನಾಡಿನ ನೆಮ್ಮದಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ದೂರಿನ ಜತೆಗೆ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ಅವರ ಬರಹಗಳು ಹಾಗೂ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿದುಬಂದಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News