ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಡೆತ್ ನೋಟ್'ನಲ್ಲಿತ್ತು ಇಬ್ಬರ ಹೆಸರು

Update: 2022-05-26 11:49 GMT
ಕಟ್ಟೆ ಭೋಜಣ್ಣ

ಕುಂದಾಪುರ: ಗುರುವಾರ ಮುಂಜಾನೆ ಕೋಟೇಶ್ವರ ಸಮೀಪದಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎನ್ನುವರ ಮನೆ ಸಿಟೌಟ್ ನಲ್ಲಿ ರಿವಾಲ್ವರ್'ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಿಕ, ಉದ್ಯಮಿ ಕಟ್ಟೆ ಭೋಜಣ್ಣ (ಕಟ್ಟೆ ಗೋಪಾಲಕೃಷ್ಣ) ಆತ್ಮಹತ್ಯೆಗೆ ಮೊದಲು ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದು ಅದರಲ್ಲಿ ತನಗಾದ ಸಮಸ್ಯೆ ಹಾಗೂ ವ್ಯವಹಾರದಲ್ಲಿ ಕೆಲವರು ತನಗೆ ಮಾಡಿದ ವಂಚನೆಯ ಬಗ್ಗೆ ವಿವರವಾಗಿ ಉಲ್ಲೇಖ ಮಾಡಿದ್ದಾರೆ ಎಂದು ಪೊಲೀಸು ಮೂಲಗಳು ತಿಳಿಸಿವೆ.

ಡೆತ್ ನೋಟ್'ನಲ್ಲಿ ಏನಿದೆ..?

ಕಟ್ಟೆ ಭೋಜಣ್ಣ ತನ್ನ ಕಚೇರಿಗೆ ಸಂಬಂಧಿಸಿದ ಲೆಟರ್ ಹೆಡ್ ನಲ್ಲಿ ಡೆತ್ ನೋಟ್ ಬರೆದಿದ್ದು ಹಣಕಾಸಿನಲ್ಲಿ ತನಗಾದ ಅನ್ಯಾಯದ ಬಗ್ಗೆ ಅದರಲ್ಲಿ ಉಲ್ಲೇಖ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪ ಮಾಡಿರುವ ಭೋಜಣ್ಣ, ಇವರಿಬ್ಬರು ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ 2012 ಪೆಬ್ರವರಿ 3 ರಂದು 3 ಕೋಟಿ 34 ಲಕ್ಷ ರೂ. ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪಂಚಾಯತಿಕೆ ಮಾಡಿದ್ದು ವಾಯಿದೆ ಪಡೆದಿದ್ದರು. ಈವರೆಗೆ 9 ಕೋಟಿ ಮೊತ್ತದ ಹಣ, ಚಿನ್ನ ವಾಪಾಸ್ ನೀಡದೆ ಮೋಸ ಮಾಡಿದ್ದು ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ ತಿರುಗಿ ತಿರುಗಿ ಸಾಕಾಯ್ತು. ಅವರ ಮನೆಯಲ್ಲಿಯೇ ನನ್ನ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಗಣೇಶ್ ಶೆಟ್ಟಿ ಮೊಳಹಳ್ಳಿ, ಇಸ್ಮಾಯಿಲ್ ಅವರಿಂದ ಹಣ ರಿಕವರಿ ಮಾಡಿ, ಆ ಹಣವನ್ನು ಮನೆಯವರಿಗೆ ಕೊಡಿಸಿ ಎಂದು ಆತ್ಮಹತ್ಯೆಗೆ ಶರಣಾದ ಕಟ್ಟೆ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ) ಡೆತ್ ನೋಟ್'ನಲ್ಲಿ ಉಲ್ಲೇಖಿಸಿದ್ದಾರೆ.

ಕುಂದಾಪುರ ಠಾಣೆ ಎಸ್.ಎಚ್.ಓ ಅವರಿಗೆ ಬರೆದ ಡೆತ್ ನೋಟ್'ನಲ್ಲಿ ಈ ಉಲ್ಲೇಖ ಮಾಡಲಾಗಿದೆ. ಇನ್ನು ವೈರಲ್ ಆದ ಈ ಡೆತ್ ನೋಟ್'ನಲ್ಲಿ ಎರಡು ಮೂರು ಬಾರಿ ದಿನಾಂಕ ಬದಲಾಯಿಸಿದ್ದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಸಮಗ್ರ ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News