ಕೆಲವು ಬೇಡಿಕೆಗಳನ್ನು ಈಡೇರಿಸಲು ಜೈಲು ಅಧಿಕಾರಿಗಳ ಸಮ್ಮತಿ; ಉಪವಾಸ ಕೈಬಿಟ್ಟ ದಿಲ್ಲಿ ವಿವಿ ಮಾಜಿ ಪ್ರೊ. ಸಾಯಿಬಾಬಾ

Update: 2022-05-26 12:58 GMT
ಜಿ ಎನ್ ಸಾಯಿಬಾಬಾ (Photo: scroll.in)

ಹೊಸದಿಲ್ಲಿ: ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರ ಕೆಲವೊಂದು ಬೇಡಿಕೆಗಳಿಗೆ ನಾಗ್ಪುರ್ ಜೈಲಿನ ಅಧಿಕಾರಿಗಳು ಒಪ್ಪಿದ ನಂತರ ಅವರು ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಸಾಯಿಬಾಬಾ ಅವರ ಆರೋಗ್ಯ ಹದಗೆಟ್ಟ ನಂತರ ಅವರ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಲಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ ಎಂದು Scroll.in ವರದಿ ಮಾಡಿದೆ.

ಮಾವೋವಾದಿಗಳ ಜತೆಗೆ ನಂಟು ಹೊಂದಿರುವ ಆರೋಪದಲ್ಲಿ ಅವರಿಗೆ ಮಾರ್ಚ್ 2017ರಲ್ಲಿ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು. ಅಂದಿನಿಂದ ಅವರನ್ನು ನಾಗ್ಪುರ್ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಅವರು ಅಲ್ಲಿ ಗಾಲಿಕುರ್ಚಿಯಲ್ಲಿಯೇ ಅತ್ತಿತ್ತ ಹೋಗುತ್ತಿದ್ದು ಅವರು ಎದುರಿಸುತ್ತಿರುವ ಹಲವು ಆರೋಗ್ಯ ಸಮಸ್ಯೆಗಳಿಂದ ಅವರು ಶೇ. 90ರಷ್ಟು ಅಂಗವಿಕಲತೆ ಹೊಂದಿದ್ದಾರೆ.

ತಮ್ಮ ಸೆಲ್ ಎದುರು ಸಿಸಿಟಿವಿ ಕ್ಯಾಮರಾ ಅಳವಡಿಸುವ ಜೈಲಿನ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿ ಅವರು ಮೇ 21ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ಸಿಸಿಟಿವಿ ಕ್ಯಾಮರಾ ಅವರ ಎಲ್ಲಾ ಚಲನವಲನಗಳನ್ನು ಹಾಗೂ ಶೌಚಾಲಯ ಬಳಕೆಯನ್ನೂ ರೆಕಾರ್ಡ್ ಮಾಡುತ್ತಿತ್ತು ಎಂದು ಅವರ ಬಿಡುಗಡೆಗಾಗಿ ಹೋರಾಡುತ್ತಿರುವ ಸಮಿತಿಯೊಂದು ಹೇಳಿದೆ.

ಹೊರಗಿನಿಂದ ತಂದ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆಗೂ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದರು  ಎಂದು ಅವರ ವಕೀಲರು ಹೇಳಿದ್ದು ಮಂಗಳವಾರ ಅದಕ್ಕೆ ಅನುಮತಿ ನೀಡಿದ ನಂತರ ಉಪವಾಸ ಸತ್ಯಾಗ್ರಹವನ್ನು ಅವರು ಅಂತ್ಯಗೊಳಿಸಿದರು.

ಸಿಸಿಟಿವಿ ಕ್ಯಾಮರಾದ ದಿಕ್ಕನ್ನು ಬದಲಾಯಿಸಲೂ ಜೈಲಿನ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಸಮಿತಿ ಹೇಳಿದೆ.

ತಮ್ಮ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಪೆರೋಲ್ ಒದಗಿಸಬೇಕು, ತಮ್ಮ ಸೆಲ್ ತುಂಬಾ ಚಿಕ್ಕದಾಗಿರುವುದರಿಂದ ಹಾಗೂ ಗಾಲಿಕುರ್ಚಿಯಲ್ಲಿ ಅತ್ತಿತ್ತ ಹೋಗಲು ಸಾಧ್ಯವಿಲ್ಲದೇ ಇರುವುದರಿಂದ ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದೂ ಅವರು ಆಗ್ರಹಿಸಿದ್ದರು.

ಅವರನ್ನು ನಾಗ್ಪುರ್ ಕಾರಾಗೃಹದಿಂದ ಹೈದರಾಬಾದ್‍ನ ಚೆರ್ಲಪಳ್ಳಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಅವರ ಕುಟುಂಬ ಆಗ್ರಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News