ಸಾರಿಗೆ ನೌಕರರ ಮುಷ್ಕರ ವಾಪಸ್ಸಾತಿಗೆ 35 ಕೋಟಿ ರೂ. ವಸೂಲಿ ಆರೋಪ: ಸಿಬಿಐಗೆ ವಹಿಸಲು ಸಿಎಂಗೆ ಅನಂತಸುಬ್ಬರಾವ್ ಆಗ್ರಹ

Update: 2022-05-26 16:17 GMT

ಬೆಂಗಳೂರು, ಮೇ 26: ಕೆಎಸ್ಸಾರ್ಟಿಸಿ ಸೇರಿ ನಾಲ್ಕು ನಿಗಮಗಳ ನೌಕರರು 2020ರ ಡಿಸೆಂಬರ್‍ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಹಮ್ಮಿಕೊಂಡಿದ್ದ ಮುಷ್ಕರವನ್ನು ವಾಪಸ್ಸು ಪಡೆಯಲು 35 ಕೋಟಿ ರೂ.ವಸೂಲಿ ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಈ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ. 

ಮುಷ್ಕರವನ್ನು ವಾಪಸ್ಸು ತೆಗೆದುಕೊಳ್ಳಲು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕೂಟದ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು 35 ಕೋಟಿ ರೂ.ತೆಗೆದುಕೊಂಡಿದ್ದಾರೆ, ಈ ವಿಷಯವನ್ನು ಅಂದಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿಯವರೇ ಕೂಟದ ನಾಯಕರಿಗೆ ತಿಳಿಸಿದ್ದಾರೆ ಎಂದು ರಾಜ್ಯದ ಖಾಸಗಿ ವಾಹಿನಿಯೊಂದು ಇತ್ತೀಚೆಗೆ ಸುದ್ದಿಯೊಂದನ್ನು ಪ್ರಸಾರ ಮಾಡಿದೆ. ಹೀಗಾಗಿ, ಈ ಭ್ರಷ್ಟಾಚಾರ ಪ್ರಕರಣವನ್ನು ಈ ಕೂಡಲೇ ತನಿಖೆಗೆ ವಹಿಸಬೇಕೆಂದು ಅನಂತಸುಬ್ಬರಾವ್ ಅವರು ಆಗ್ರಹಿಸಿದ್ದಾರೆ. 

ಕೋಡಿಹಳ್ಳಿ ಚಂದ್ರಶೇಖರ್ ಅವರು, 35 ಕೋಟಿ ರೂ.ಗಳಲ್ಲಿ ಅರ್ಧ ಭಾಗವನ್ನು ಕಪ್ಪು ಹಣವನ್ನಾಗಿಯೂ ಉಳಿದ ಅರ್ಧ ಭಾಗವನ್ನು ಅವರ ಪತ್ನಿ ಮತ್ತು ಮಗನ ಹೆಸರಿನಲ್ಲಿ ದುಬೈನಲ್ಲಿರುವ ಕಂಪೆನಿಯ ಲೆಕ್ಕಕ್ಕೆ ಹಾಕಬೇಕೆಂದೂ ಒಡಂಬಡಿಕೆ ಆಗಿದೆ ಎಂದು ಈ ಖಾಸಗಿ ವಾಹಿನಿಯೂ ಸುದ್ದಿಯನ್ನು ಪ್ರಸಾರ ಮಾಡಿದೆ. ಹೀಗಾಗಿ, ಈ ಕೂಡಲೇ ಕೋಡಿಹಳ್ಳಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಮೊಕದ್ದಮೆ ಹೂಡಬೇಕು. ಅಲ್ಲದೆ, ಮುಷ್ಕರದಲ್ಲಿ ಭಾಗಿಯಾಗಿದ್ದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯವ್ಯ, ಈಶಾನ್ಯ ನಿಗಮದ ನೌಕರರು ಈ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ವ್ಯವಹಾರದ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಎಂದು ತಾವು ಹೊರಡಿಸಿದ ಪ್ರಕಟಣೆಯಲ್ಲಿ ಸುಬ್ಬರಾವ್ ಅವರು ಉಲ್ಲೇಖಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನಿಗಮಗಳ ನೌಕರರ ಮುಷ್ಕರವನ್ನು ವಾಪಸ್ಸು ತೆಗೆದುಕೊಳ್ಳುವಾಗ 35 ಕೋಟಿ ರೂಪಾಯಿಗಳ ಹಣವನ್ನು ವಸೂಲು ಮಾಡುವ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ? ಈ ಪ್ರಕರಣದಲ್ಲಿ ಸರಕಾರ ಅಥವಾ ಸಾರಿಗೆ ನಿಗಮಗಳ ಅಧಿಕಾರಿಗಳು ಭಾಗಿಯಾಗಿದ್ದಾರಾ? ಹಾಗಿದ್ದರೆ ಅವರುಗಳು ಯಾರು? ಈ ಹಣವನ್ನು ಯಾವ ಸಂಪನ್ಮೂಲದಿಂದ ಕೊಟ್ಟಿದ್ದಾರೆ? ಡೀಲ್ ಕುದುರಿಸುವಾಗ ಕಿಕ್ ಬ್ಯಾಕ್ ಹಣವನ್ನು ಅರ್ಧ ಕಪ್ಪು ಹಣವಾಗಿಯೂ ಇನ್ನರ್ಧ ಹಣವನ್ನು ದುಬೈನಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರ ಪತ್ನಿ ಮತ್ತು ಮಗನ ಖಾತೆಗೆ ಹಾಕಿದ್ದರೆ, ಅರ್ಧ ಭಾಗ ಕಪ್ಪು ಹಣವನ್ನು ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದರ ಕುರಿತಂತೆ ತನಿಖೆ ನಡೆಸಬೇಕೆಂದು ಅನಂತಸುಬ್ಬರಾವ್ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News