ಗುಂಡಿಕ್ಕಿಕೊಂಡು ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ

Update: 2022-05-26 16:14 GMT

ಕುಂದಾಪುರ :  ಖ್ಯಾತ ಉದ್ಯಮಿ ಹಾಗೂ ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ ರಾವ್ (79) ಮೇ 26ರ ಗುರುವಾರ ಮುಂಜಾನೆ ಕೋಟೇಶ್ವರ ಸಮೀಪದಲ್ಲಿರುವ ಕುದುರೆಬೆಟ್ಟುಕೆರೆ ಎಂಬಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿಯ ಮನೆ ಸಿಟೌಟ್‌ನಲ್ಲಿ ತನ್ನದೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಕಟ್ಟೆ ಭೋಜಣ್ಣ ಎಂದೇ ಜನಪ್ರಿಯರಾಗಿರುವ ಗೋಪಾಲಕೃಷ್ಣ ರಾೞ್ ಅವರು ಬೆಂಗಳೂರು, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿವಿಧ ಉದ್ಯಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲಕರಾಗಿ ಗುರುತಿಸಿಕೊಂಡಿದ್ದರು.

ಗುರುವಾರ ಬೆಳಗಿನ ಜಾವ ೬:೧೫ರ ಹೊತ್ತಿಗೆ ತನ್ನ ಕಾರಿನಲ್ಲಿ ಅಂಕದಕಟ್ಟೆ ನಿವಾಸಿ ಲೆಕ್ಕಪರಿಶೋಧಕರಾದ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಗೆ ಬಂದಿದ್ದು, ಕಾರನ್ನು ಗೇಟ್ ಹೊರಗೆ ಪಾರ್ಕ್ ಮಾಡಿ ಮನೆಯ ಸಿಟೌಟಿನತ್ತ ಬಂದು ಅಲ್ಲಿದ್ದ ಕುರ್ಚಿ ಮೇಲೆ ಕುಳಿತು ತನ್ನ ತಲೆಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. 

ಚಿನ್ಮಯಿ ಆಸ್ಪತ್ರೆಯೊಂದಿಗೆ ಹೊಟೇಲ್, ಟೆಕ್ಸ್‌ಟೈಲ್ ಹಾಗೂ ಜ್ಯುವೆಲ್ಲರಿ ಉದ್ಯಮಗಳನ್ನು  ನಡೆಸುತಿದ್ದ ಕಟ್ಟೆ ಭೋಜಣ್ಣ, ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಪಿಎಸ್‌ಐ ಸದಾಶಿವ ಗವರೋಜಿ ಹಾಗೂ ಎಫ್‌ಎಸ್‌ಎಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪುತ್ರನಿಂದ ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಗೋಪಾಲಕೃಷ್ಣ ರಾವ್ ಅವರ ಪುತ್ರ ಸುಧೀಂದ್ರ ಕಟ್ಟೆ ಕುಂದಾಪುರ ಠಾಣೆಗೆ ದೂರು ನೀಡಿದ್ದು,  ಇಂದು ಬೆಳಗ್ಗೆ ೬:೨೦ರ ಸುಮಾರಿಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟಿನಲ್ಲಿ ತಂದೆಯವರು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಬಗ್ಗೆ ತಿಳಿಸಿದ್ದರಿಂದ ತಾನು ಆ ಸ್ಥಳಕ್ಕೆ ಭೇಟಿ ನೀಡಿದ್ದು, ತಂದೆ ಮೃತದೇಹ ಕುರ್ಚಿಯಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿತ್ತು. ಮೃತದೇಹದ ಕಿವಿಯ ಬಳಿ ಹಾಗೂ ತಲೆಯಿಂದ ರಕ್ತ ಸುರಿಯುತ್ತಿದ್ದು, ಮೃತದೇಹದ ಬಳಿ ರಿವಾಲ್ವರ್ ಕೂಡ ಬಿದ್ದುಕೊಂಡಿತ್ತು. 

ಘಟನೆ ಬಳಿಕ ಮನೆಗೆ ಹಿಂದಿರುಗಿ ತಂದೆಯ ಬೆಡ್‌ರೂಮಿಗೆ ಹೋಗಿ ನೋಡಿದಾಗ, ಅವರದ್ದೇ ಕೈಬರಹದ ಡೆತ್‌ನೋಟ್ ಸಿಕ್ಕಿದೆ. ಆ ಡೆತ್‌ನೋಟಿ ನಲ್ಲಿರುವ ಸಾರಾಂಶ ಉಲ್ಲೇಖಿಸಿದ ಮೃತರ ಪುತ್ರ ಮೊಳಹಳ್ಳಿ ಗಣೇಶ್ ಶೆಟ್ಟಿ ಹಾಗೂ ಬ್ರೋಕರ್ ಆದ ಹೆಚ್ ಇಸ್ಮಾಯಿಲ್ ತನ್ನ ತಂದೆ ಆತ್ಮಹತ್ಯೆಗೆ ದುಷ್ಪ್ರೇರಣೆ ಯಾಗಿದ್ದಾರೆ ಎಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ ೩೦೬, ಜೊತೆಗೆ ಐಪಿಸಿ ೩೪ರಂತೆ ಪ್ರಕರಣ ದಾಖಲಾಗಿದೆ.

ಡೆತ್ ನೋಟ್‌ನಲ್ಲಿ ಏನಿದೆ..?

ಕಟ್ಟೆ ಭೋಜಣ್ಣ ತನ್ನ ಕಚೇರಿಗೆ ಸಂಬಂಧಿಸಿದ (ಜನತಾ) ಲೆಟರ್ ಹೆಡ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ವ್ಯವಹಾರದ ಹಣಕಾಸಿನಲ್ಲಿ ತನಗಾದ ಅನ್ಯಾಯದ ಬಗ್ಗೆ ಅದರಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖ ಮಾಡಿದ್ದಾರೆ. ಡೆತ್ ನೋಟ್‌ನಲ್ಲಿ ಕುಂದಾಪುರದ ಗೋಲ್ಡ್ ಜ್ಯುವೆಲ್ಲರ್‌ನಲ್ಲಿ ಪಾರ್ಟ್‌ನರ್ ಆಗಿರುವ ಸಿಎ ಮೊಳಹಳ್ಳಿ ಗಣೇಶ್ ಶೆಟ್ಟಿ ಹಾಗೂ ಬ್ರೋಕರ್ ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪ ಮಾಡಿದ್ದಾರೆ.

ಇವರಿಬ್ಬರು ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ೨೦೧೩ರಲ್ಲಿ ೩ ಕೋಟಿ ೩೪ ಲಕ್ಷ ರೂ. ನಗದು, ೫ ಕೆ.ಜಿ ೨೪ ಕ್ಯಾರೆಟ್ ಚಿನ್ನವನ್ನು ಪಡೆದುಕೊಂಡಿದ್ದು, ಇದುವರೆಗೆ ಯಾವುದೇ ಅಸಲು ಹಾಗೂ ಬಡ್ಡಿಯನ್ನು ವಾಪಾಸ್ ನೀಡಿಲ್ಲ. ಈ ವಿಚಾರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಉಪಸ್ಥಿತಿ ಸೇರಿದಂತೆ ೬-೭ ಬಾರಿ ಪಂಚಾಯತಿಕೆ ಮಾಡಿದ್ದು, ಹಣ ವಾಪಾಸ್ ನೀಡಲು ನಿಗದಿತ ವಾಯಿದೆ ಪಡೆದಿದ್ದರೂ ಒಂದು ರೂ. ಸಹ ಮರಳಿಸಿಲ್ಲ.

ಚಿನ್ನ, ನಗದು ಹಾಗೂ ಬ್ಯಾಂಕ್ ಬಡ್ಡಿ ಸೇರಿ ಈವರೆಗೆ ೯ ಕೋಟಿ ಮೊತ್ತ ನೀಡಲು ಬಾಕಿ ಇದೆ. ನಾನು ಈವರೆಗೆ ಮರ್ಯಾದೆಯಿಂದ ಬಾಳಿದವ. ನಾನು ಹೊರಗಿನವರಿಗೆ ಹಣ ಕೊಡಬೇಕು. ಬ್ಯಾಂಕ್‌ನಲ್ಲಿ ಸಾಲ ಇದೆ. ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ ತಿರುಗಿ ತಿರುಗಿ ಸಾಕಾಗಿದೆ. ಹೀಗಾಗಿ ಬೇಜಾರಾಗಿ ಅವರ ಮನೆಯಲ್ಲಿಯೇ ನನ್ನ ರಿವಾಲ್ವರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಗಣೇಶ್ ಶೆಟ್ಟಿ ಮೊಳಹಳ್ಳಿ ಹಾಗೂ ಇಸ್ಮಾಯಿಲ್ ಇವರಿಂದ ಹಣ ರಿಕವರಿ ಮಾಡಿ, ಆ ಹಣವನ್ನು ಮನೆಯವರಿಗೆ ಕೊಡಿಸಿ ಎಂದು ಆತ್ಮಹತ್ಯೆಗೆ ಶರಣಾದ ಕಟ್ಟೆ ಗೋಪಾಲಕೃಷ್ಣ ರಾವ್ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಕುಂದಾಪುರ ಠಾಣೆಯ ಎಸ್‌ಎಚ್‌ಓ ಅವರಿಗೆ ಬರೆದ ಡೆತ್ ನೋಟ್‌ನಲ್ಲಿ ಈ ಉಲ್ಲೇಖ ಮಾಡಲಾಗಿದೆ. 

ಇದೀಗ ವೈರಲ್ ಆಗಿರುವ ಈ ಡೆತ್ ನೋಟ್‌ನಲ್ಲಿ ಎರಡು ಮೂರು ಬಾರಿ ದಿನಾಂಕ ತಿದ್ದಿರುವುದು ಕಂಡುಬರುತ್ತಿದೆ. ಸಮಗ್ರ ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

ತನಿಖೆ ನಡೆಸುತ್ತಿದ್ದೇವೆ

ಮೃತರ ಪುತ್ರ ನೀಡಿದ ದೂರಿನಡಿಯಲ್ಲಿ ಆತ್ಮಹತ್ಯೆ ಪ್ರಚೋದನೆ ನೀಡಿದ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ದೂರಿನಲ್ಲಿ ಹೆಸರಿಸಲಾದ  ಹಾಗೂ ಕೃತ್ಯ ನಡೆದ ಮನೆಯವರಾದ ಗಣೇಶ್ ಶೆಟ್ಟಿ ಅವರನ್ನು  ವಿಚಾರಣೆ ಗೊಳಪಡಿಸಲಾಗುತ್ತಿದ್ದು, ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾದ ಇನ್ನೋರ್ವ ವ್ಯಕ್ತಿ ಊರಿನಲ್ಲಿ ಇಲ್ಲ. ಆತನ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ.
-ಎಸ್.ಟಿ. ಸಿದ್ದಲಿಂಗಪ್ಪ, ಹೆಚ್ಚುವರಿ ಎಸ್ಪಿ, ಉಡುಪಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News