ಅನುದಾನವಿಲ್ಲದ ನಿಗಮ, ಮಂಡಳಿಗಳು

Update: 2022-05-27 04:06 GMT

ರಾಜಕೀಯ ಪುನರ್ವಸತಿ ಕೇಂದ್ರಗಳೆಂದು ಕರೆಯಲ್ಪಡುವ ಸುಮಾರು ಎಂಬತ್ತಕ್ಕೂ ಹೆಚ್ಚು ನಿಗಮ, ಮಂಡಳಿಗಳು ಕರ್ನಾಟಕದಲ್ಲಿವೆ. ಯಾವುದೋ ಉನ್ನತ ಉದ್ದೇಶವಿಟ್ಟುಕೊಂಡು ಸ್ಥಾಪನೆಯಾಗುವ ಈ ನಿಗಮ, ಮಂಡಳಿಗಳು ಕ್ರಮೇಣ ಅತೃಪ್ತ ರಾಜಕಾರಣಿಗಳ ಗಂಜಿ ಕೇಂದ್ರಗಳಾಗುತ್ತಿವೆ. ಇವುಗಳ ಅಧ್ಯಕ್ಷರಿಗೆ ಗೂಟದ ಕಾರು ಮತ್ತು ಸಂಬಳ ಭತ್ತೆಗಳನ್ನು ಬಿಟ್ಟರೆ ಬೇರಾವ ಸಾಧನೆಯೂ ಆಗುವುದಿಲ್ಲ. ಉದಾಹರಣೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂಬುದೊಂದಿದೆ. ಇದರಂತೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಇದೆ. ಅನುದಾನದ ಕೊರತೆಯಿಂದ ಈ ಮಂಡಳಿಗಳು ನಿಷ್ಪ್ರಯೋಜಕವಾಗಿವೆ.

ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲ್ಪಡುತ್ತಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಈಗಾಗಲೇ ಒಂದು ಅಭಿವೃದ್ಧಿ ಮಂಡಳಿ ಇದೆ. ಇದರ ಜೊತೆಗೆ ಈ ಭಾಗದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಇನ್ನೊಂದು ಮಂಡಳಿಯನ್ನು ರಾಜ್ಯ ಬಿಜೆಪಿ ಸರಕಾರ ರಚಿಸಿದೆ. ಸಂಘಪರಿವಾರದ ಕಾರ್ಯಸೂಚಿಯನ್ನು ಜಾರಿಗೆ ತರುವ ಉದ್ದೇಶದಿಂದ ರಚಿಸಲಾಗಿರುವ ಈ ಸಮಿತಿಗೂ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗುತ್ತಿದೆ. ಆದರೆ ನಿರೀಕ್ಷಿಸಿದ ಯಾವ ಗುರಿ ಸಾಧನೆಯೂ ಆಗಿಲ್ಲ. ಕರ್ನಾಟಕ ಸರಕಾರದ 2.65 ಲಕ್ಷ ಕೋಟಿ ರೂಪಾಯಿ ಮುಂಗಡಪತ್ರದಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿದ್ದು ಮೂರು ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಈ ಅನುದಾನ ಬಳಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು ಐವತ್ತು ಸಾವಿರ ಹುದ್ದೆಗಳು ಖಾಲಿ ಇವೆ.ಇವುಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 16,000 ಮತ್ತು ಪ್ರೌಢಶಾಲೆಗಳಲ್ಲಿ 3,000 ಹುದ್ದೆಗಳು ಸೇರಿವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ. ನಂಜುಂಡಪ್ಪ ವರದಿ ಪ್ರಕಾರ ಈ ಭಾಗದ ಅಭಿವೃದ್ಧಿಗೆ ನೀಡಬೇಕಾದ ನೆರವು ನೀಡಿಲ್ಲ. ಆದರೆ ಈ ಭಾಗದ ಕೋಮು ಸೌಹಾರ್ದ ಕದಡುವ ಚಟುವಟಿಕೆಗಳಿಗೆ ಬಿಜೆಪಿ ಸರಕಾರ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ.

ಮೂವತ್ತು ವರ್ಷಗಳ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತುಂಬಾ ಆಸಕ್ತಿ ವಹಿಸಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ರಚಿಸಿದರು. ಇದು ನಿರಂತರವಾಗಿ ಅನುದಾನದ ಕೊರತೆಯಿಂದ ಬಳಲುತ್ತಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ(ಎಂಎಡಿಬಿ) ಸರಕಾರ ಪ್ರತಿವರ್ಷ ಕಾಟಾಚಾರಕ್ಕೆ ಕೊಡುತ್ತಿರುವ ಅನುದಾನ ಯಾತಕ್ಕೂ ಸಾಕಾಗುತ್ತಿಲ್ಲ. ರಾಜ್ಯದ ಪಶ್ಚಿಮ ಘಟ್ಟದ ಸೆರಗಿನಲ್ಲಿ ಬರುವ ಬೆಳಗಾವಿಯಿಂದ ಚಾಮರಾಜನಗರವರೆಗಿನ 13 ಜಿಲ್ಲೆಗಳ 74 ತಾಲೂಕುಗಳು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ. ಇದಕ್ಕೆ ಸರಕಾರ ಕೊಡುವ ಅನುದಾನದಲ್ಲಿ ಒಂದು ಕಿ.ಮೀ. ರಸ್ತೆ ಮತ್ತು ಒಂದು ಸಣ್ಣ ಸೇತುವೆ ನಿರ್ಮಿಸಲೂ ಸಾಕಾಗುವುದಿಲ್ಲ. ಪ್ರತೀ ಕ್ಷೇತ್ರದಲ್ಲಿ 25 ಲಕ್ಷ ರೂಪಾಯಿ ಕಾಮಗಾರಿ ಕೈಗೊಳ್ಳಲು ಕೂಡ ಆಗುವುದಿಲ್ಲ. ಇನ್ನೊಂದು ವಿಪರ್ಯಾಸವೆಂದರೆ ಮಂಡಳಿಯ ಆಡಳಿತಾತ್ಮಕ ಖರ್ಚು ವೆಚ್ಚವೇ 1.50 ಕೋಟಿ ರೂ.ಗೂ ಹೆಚ್ಚಾಗುತ್ತದೆ. ಹೀಗಾಗಿ ಪ್ರತೀ ವರ್ಷ ಇದಕ್ಕೆ ಕನಿಷ್ಠ ನೂರು ಕೋಟಿ ರೂಪಾಯಿಗಳಾದರೂ ಸಿಗಬೇಕು. ಇದಕ್ಕಾಗಿ ಆ ಭಾಗದ ಶಾಸಕರು ಒತ್ತಡ ತರಬೇಕು.ಶಾಸಕರಲ್ಲಿ ಬಿಜೆಪಿಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರಿಗೆ ಅಭಿವೃದ್ಧಿಯ ಬಗ್ಗೆ ಅಷ್ಟು ಆಸಕ್ತಿ ಕಾಣುತ್ತಿಲ್ಲ. ಬಾಬಾಬುಡಾನ್‌ಗಿರಿಯಂತಹ ಕೋಮುವಾದಿ ಅಸ್ತ್ರ ಬಳಸಿ ಜನರನ್ನು ವಿಭಜನೆ ಮಾಡಿ ಗೆಲ್ಲುವ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ಇವರಿಗೆ ಯಾವ ಅಭಿವೃದ್ಧಿಯೂ ಬೇಕಾಗಿಲ್ಲ. ಹೀಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಕೊರತೆಯಿಂದ ಬಳಲುತ್ತಿದೆ. ರಾಜಕೀಯ ಪುನರ್ವಸತಿ ಕೇಂದ್ರವಾಗಿದೆ.

ಇದು ಮಲೆನಾಡು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗಳ ಕತೆ ಮಾತ್ರವಲ್ಲ ರಾಜ್ಯದ ಬಹುತೇಕ ನಿಗಮ, ಮಂಡಳಿಗಳು ಜನತೆಯ ತೆರಿಗೆ ದುಡ್ಡಿನಿಂದ ಸಾಕುತ್ತಿರುವ ಬಿಳಿಯಾನೆಗಳಾಗಿವೆ. ಜನತೆಯ ಬೊಕ್ಕಸದ ಹಣ ಈ ರೀತಿ ಬಿಳಿಯಾನೆಗಳನ್ನು ಸಾಕಲು ದುರ್ವ್ಯಯವಾಗಬಾರದು. ಅನಗತ್ಯವಾದ, ನಿರುಪಯುಕ್ತವಾದ ನಿಗಮ, ಮಂಡಳಿಗಳನ್ನು ವಿಸರ್ಜಿಸಬೇಕು. ಇದರಿಂದ ಅನಗತ್ಯ ಖರ್ಚು ಕಡಿಮೆ ಮಾಡಿದಂತಾಗುತ್ತದೆ. ಆದರೆ ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಂತಹ ಪ್ರಮುಖ ಸಂಸ್ಥೆಗಳಿಗೆ ಸರಕಾರ ಹೆಚ್ಚಿನ ಅನುದಾನ ಒದಗಿಸಿ ಆ ಭಾಗಗಳ ಅಭಿವೃದ್ಧಿಗೆ ನೆರವಾಗಬೇಕು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಾಗಿ ಮೂವತ್ತು ವರ್ಷಗಳಾದರೂ ಅನುದಾನಕ್ಕೆ ಸರಕಾರದ ಬಳಿ ಮೊರೆ ಇಡುತ್ತಿರುವುದು ಸರಿಯಲ್ಲ. ಸರಕಾರ ಈಗಲಾದರೂ ಈ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಹಿಂದೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಂಡಾಗ ಸರಕಾರಕ್ಕೆ ಮಲೆನಾಡಿನ ಅಭಿವೃದ್ಧಿಯ ಬಗ್ಗೆ ನೆನಪಾಗಿ ಒಂದಿಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಆದರೆ ಕಳೆದ ಏಳೆಂಟು ವರ್ಷಗಳಿಂದ ಮಲೆನಾಡಿನ ಅಭಿವೃದ್ಧಿ ಕುಂಠಿತಗೊಂಡಿದೆ. ಅಭಿವೃದ್ಧಿ ಅಂದರೆ ಪರಿಸರವನ್ನು ನಾಶ ಮಾಡುವ ಗಣಿಗಾರಿಕೆಯಂತಹ ಚಟುವಟಿಕೆಗಳಲ್ಲ. ಅದರ ಬದಲಾಗಿ ಅಲ್ಲಿನ ಜನರಿಗೆ ರಸ್ತೆ, ನೀರು, ಶಾಲೆ, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿದೆ. ಇದಕ್ಕಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕು.

ಒಂದು ಪ್ರದೇಶದ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು.ಬಂಡವಾಳ ಹೂಡಿಕೆದಾರರು ಬರಬೇಕು ಎಂಬ ವಾದವೂ ಇದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ರಿನ್ಯೂ ಪವರ್ ಕಂಪೆನಿ ಐವತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ ಹಿಂದೆ ಇದೇ ರೀತಿಯ ಹೂಡಿಕೆಯ ಒಪ್ಪಂದಗಳು ಎಷ್ಟರ ಮಟ್ಟಿಗೆ ಕಾರ್ಯಗತಗೊಂಡಿವೆ? ರಾಜ್ಯದಲ್ಲಿ ನಿರಂತರವಾಗಿ ಕೋಮು ಗಲಭೆಗಳು ನಡೆಯುತ್ತಿರುವುದರ ಬಗ್ಗೆ ಇಲ್ಲಿನ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ ಅಂಥವರು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆದ್ದರಿಂದ ಮುಖ್ಯಮಂತ್ರಿ ಮೊದಲು ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ರಾಜ್ಯದಲ್ಲಿ ನಿರ್ಮಾಣ ಮಾಡಲಿ. ರಾಜ್ಯದಲ್ಲಿ ರಾಜಕೀಯ ಕಾರಣಗಳಿಗಾಗಿ ಅತೃಪ್ತ ರಾಜಕಾರಣಿಗಳನ್ನು ಸಂತೃಪ್ತಗೊಳಿಸಲು ಅಸ್ತಿತ್ವಕ್ಕೆ ತರಲಾದ ನಿಗಮ ಮತ್ತು ಮಂಡಳಿಗಳನ್ನು ರದ್ದುಗೊಳಿಸಬೇಕು. ಇದರಿಂದ ಉಳಿಯುವ ಜನತೆಯ ಬೊಕ್ಕಸದ ಹಣವನ್ನು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮೊದಲ ಆದ್ಯತೆಯನ್ನು ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News