ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣ: ಕಸ್ಟಡಿಯಿಂದ ತಪ್ಪಿಸಿಕೊಳ್ಳಲೆತ್ನಿಸಿದ ಪ್ರಮುಖ ಆರೋಪಿ ಅಪಘಾತದಲ್ಲಿ ಸಾವು

Update: 2022-05-30 08:02 GMT

ಗುವಹಾಟಿ: ಅಸ್ಸಾಂನ ನಾಗೋಂವ್ ಎಂಬಲ್ಲಿ ಕಳೆದ ವಾರ ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಗುಂಪೊಂದನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಸೋಮವಾರ ಮುಂಜಾನೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ಆರೋಪಿ ಅಶಿಕುಲ್ ಇಸ್ಲಾಂ ಎಂಬಾತನನ್ನು ರವಿವಾರ ಬಂದಿಸಿ ನಂತರ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ವಿಚಾರಣೆ ವೇಳೆ ಆತ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದನ್ನು ಒಪ್ಪಿಕೊಂಡಿದ್ದ. ನಮ್ಮ ತಂಡ ಅಲ್ಲಿ ಶೋಧಿಸಲು ತೆರಳಿತ್ತು. ನಂತರ ವಾಪಸಾಗುತ್ತಿದ್ದಾಗ ಆತ ಕಾರಿನಿಂದ ತಪ್ಪಿಸಿಕೊಂಡಾಗ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ವಾಹನ ಆತನಿಗೆ ಢಿಕ್ಕಿ ಹೊಡೆದಿತ್ತು" ಎಂದು ನಾಗೋಂವ್ ಎಸ್‍ಪಿ ಲೀನಾ ಡೋಲಿ ಹೇಳಿದ್ದಾರೆ. ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು.

ಸಲೋನಬೋರಿ ಗ್ರಾಮದ 39 ವರ್ಷದ ಮೀನು ಮಾರಾಟಗಾರ ಸಫೀಕುಲ್ ಇಸ್ಲಾಂ ಎಂಬಾತನ ಶಂಕಿತ ಕಸ್ಟಡಿ ಸಾವಿನ ನಂತರ ಕಳೆದ ರವಿವಾರ ಢಿಂಗ್ ಸರ್ಕಲ್ ಪ್ರದೇಶದಲ್ಲಿರುವ ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು.

ಸಫೀಕುಲ್ ಮದ್ಯದ ನಶೆಯಲ್ಲಿದ್ದ ಎಂಬ ಕಾರಣಕ್ಕೆ ಪೊಲೀಸರು ಶುಕ್ರವಾರ ರಾತ್ರಿ ಆತನನ್ನು ಬಂಧಿಸಿದ್ದರು. ಆತ ಅಸೌಖ್ಯದಿಂದ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದರೆ, ಆತನ ಬಿಡುಗಡೆಗೆ ರೂ 10,000 ಮತ್ತು ಒಂದು ಬಾತುಕೋಳಿಯನ್ನು ಲಂಚವಾಗಿ ನೀಡಬೇಕೆಂದು ಪೊಲೀಸರು ಬೇಡಿಕೆಯಿಟ್ಟಿದ್ದರು. ನಂತರ ಆತನಿಗೆ ಕಸ್ಟಡಿಯಲ್ಲಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆಂದು ಕುಟುಂಬ ಆರೋಪಿಸಿತ್ತು.

ಶನಿವಾರ ಅಪರಾಹ್ನ ಉದ್ರಿಕ್ತರ ಗುಂಪೊಂದು ಠಾಣೆಗೆ ಬೆಂಕಿ ಹಚ್ಚಿತ್ತು. ಈ  ಗುಂಪಿನಲ್ಲಿ ಸಫೀಕುಲ್‍ನ ಪತ್ನಿ, ಪುತ್ರಿ ಕೂಡ ಇದ್ದರೆನ್ನಲಾಗಿದೆ. ಸಫೀಕುಲ್ ಕುಟುಂಬ ಸದಸ್ಯರು ಹಾಗೂ ಅಶಿಕುಲ್ ಸಹಿತ 11 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಅಶೀಕುಲ್ ಮನೆಯಿಂದ 7.2 ಎಂ ಎಂ ಪಿಸ್ತೂಲ್ ಹಾಗೂ ಠಾಣೆಗೆ ಬೆಂಕಿ ಹಚ್ಚಿದ ಸಂದರ್ಭ ಆತ ಧರಿಸಿದ್ದ ಕೆಂಪು ಬಣ್ಣದ ಶರ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ರವಿವಾರ ಅಧಿಕಾರಿಗಳು ಸಫೀಕುಲ್ ಸೇರಿದಂತೆ ಪ್ರಕರಣದ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿದ್ದರಲ್ಲದೆ ಅವರು ಸರಕಾರಿ ಜಮೀನಿನಲ್ಲಿ ಫೋರ್ಜರಿ  ದಾಖಲೆಗಳನ್ನು ಬಳಸಿ ವಾಸಿಸುತ್ತಿದ್ದರು ಎಂದೂ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಯುಎಪಿಎ ಅನ್ವಯ ಪ್ರಕರಣವನ್ನೂ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News