ಕುವೆಂಪುರ ನಿಂದನೆ, ನಾಡಗೀತೆಯ ತಿರುಚಿ ಬರೆದವರ ವಿರುದ್ಧ ತಕ್ಷಣ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹ

Update: 2022-05-30 10:54 GMT

ಬೆಂಗಳೂರು, ಮೇ 30: ರಾಷ್ಟ್ರಕವಿ ಕುವೆಂಪು ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವುದು  ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ. ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಇದನ್ನು ಖಂಡಿಸುತ್ತೇನೆ. ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಸರಕಾರ ತಡಮಾಡದೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಾ.ಮಹೇಶ ಜೋಶಿ, ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರು ಯಾರೂ ಸಹ ಕುವೆಂಪು ಅವರ ಕುರಿತು ಚಕಾರ ಎತ್ತುವ ಧೈರ್ಯವನ್ನು ಮಾಡುವುದಿಲ್ಲ. ಯಾರು ಈ ಮಹಾದಾರ್ಶನಿಕರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದ್ದಾರೆ.

ಶ್ರೀರಾಮಕೃಷ್ಣ ಪರಮಹಂಸರ, ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮಿಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆಯನ್ನು ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಖಂಡಿಸುವುದರ ಜೊತೆಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

ಕುವೆಂಪು ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದುವ ನಾನು, ಅವರ ಪ್ರಕೃತಿ ವರ್ಣನೆಗೆ ಮಾರುಹೋಗುವುದರ ಜೊತೆಗೆ, ಅವರ ಶ್ರೇಷ್ಠ ಚಿಂತನೆಗಳಿಂದ ಪ್ರೇರಿತನಾಗಿ "ಮನುಜ ಮತದಲ್ಲಿ" ನಂಬಿಕೆ ಇಟ್ಟಂಥವನು. ಕುವೆಂಪು ಅವರ ಚಿಂತನೆಯ ಮಾರ್ಗದಲ್ಲಿಯೇ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಾಧಾರಣವಾಗಿ ನನ್ನ ಎಲ್ಲ ಭಾಷಣಗಳಲ್ಲೂ ಕುವೆಂಪು ಅವರ ಚಿಂತನೆಗಳನ್ನು ಉಲ್ಲೇಖಿಸುತ್ತೇನೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ.

ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಕ್ರಮ ಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯ ಒತ್ತಾಯವನ್ನು ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿರುವುದನ್ನು, ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸುತ್ತಾ, ತಡಮಾಡದೇ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ.

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಹಾಗೂ ಪರಿಷತ್ತಿನ ಎಲ್ಲಾ ಜಿಲ್ಲಾ ಘಟಕಗಳ, ಗಡಿನಾಡ ಘಟಕಗಳ, ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರುಗಳು, ಈ ಖಂಡನೆಗೆ ಒಮ್ಮತದಿಂದ ಕೇಂದ್ರ ಪರಿಷತ್ತಿಗೆ ಬೆಂಬಲವನ್ನು ಸೂಚಿಸಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News