ಬೆಂಗಳೂರು ವಿವಿಯಲ್ಲಿ ಕುಲಪತಿಗಳ ಅವ್ಯವಹಾರದ ಹಿಂದೆ ಸಚಿವರ ಕಮಿಷನ್: ಸಿಂಡಿಕೇಟ್ ಸದಸ್ಯರ ಗಂಭೀರ ಆರೋಪ

Update: 2022-06-02 17:07 GMT

ಬೆಂಗಳೂರು, ಜೂ.2: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ಅವರು ನಿರಂಕುಶ ಅಧಿಕಾರಿಯಂತೆ ಕಾನೂನುಬಾಹಿರವಾಗಿ ವಿವಿಯ ಅನುದಾನವನ್ನು ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸಮರ್ಥನೆ ಮಾಡಿಕೊಂಡಿರುವುದರ ಹಿಂದೆ ಕಮಿಷನ್ ವ್ಯವಹಾರ ಅಡಗಿದೆ ಎಂದು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರು ಆರೋಪಿಸಿದ್ದಾರೆ. 

ಕುಲಪತಿ ಕೆ.ಆರ್. ವೇಣುಗೋಪಾಲ್ ಅವರು ಯುವಿಸಿಇನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ ಹಾಗೂ ರಾಮನಗರ ಸ್ನಾತಕೋತ್ತರ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಬಳಸಿಕೊಳ್ಳಲು 40 ಕೋಟಿ ಹಣವನ್ನು ನಿಶ್ಚಿತ ಠೇವಣಿಯಿಂದ ಮರುಗಡೆ ಮಾಡಿ, ಪಾವತಿಸಲು ವಿವಿಯ ಹಣಕಾಸು ವಿಭಾಗದ ಉಪಕುಲಪತಿಗಳಿಗೆ ಸೂಚಿಸಿರುತ್ತಾರೆ. ಆದರೆ ಉಪಕುಲಪತಿಗಳು ಸರಕಾರದ ಅದೇಶಗಳನ್ನು ಉಲ್ಲೇಖಿಸಿ ಅದನ್ನು ಮೇ 11ರಂದು ತಿರಸ್ಕರಿಸಿದ್ದಾರೆ. ಆದರೆ ಕುಲಪತಿ ವೇಣುಗೋಪಾಲ್ ಅವರು ಉಪಕುಲಪತಿಗಳ ಮೇಲೆ ಒತ್ತಡ ಏರಿ ಹಣವನ್ನು ಬಿಡುಗಡೆ ಮಾಡಿಸಿಕೊಂಡಿರುವುದು ವಿವಿಯಲ್ಲಿ ಗದ್ದಲದ ವಾತಾವರಣವನ್ನು ಸೃಷ್ಟಿಸಿದೆ.

ಕುಲಪತಿಯಾಗಿ ವೇಣುಗೋಪಾಲ್ ಅವರ ಅಧಿಕಾರಾವಧಿ ಕೇವಲ 10 ದಿನಗಳು ಮಾತ್ರ ಉಳಿದಿದೆ. ವಿವಿಗಳ ಕುಲಪತಿಗಳು ತಮ್ಮ ಅಧಿಕಾರಾವಧಿಯ ಕೊನೆಯ ಎರಡು ತಿಂಗಳಿನಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ ಎಂದು ರಾಜ್ಯಪಾಲರು ಆದೇಶವನ್ನು ಹೊರಡಿಸಿದ್ದಾರೆ. ಆದರೆ ಕುಲಪತಿಗಳು 40 ಕೋಟಿ ಹಣವನ್ನು ವರ್ಗಾವಣೆ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಈಗಾಗಲೇ ಹಣ ವರ್ಗಾವಣೆಯಾಗಿದ್ದು, ಸಿಂಡಿಕೇಟ್ ಸದಸ್ಯರ ಗಮನಕ್ಕೂ ತಾರದೇ ಗೌಪ್ಯವಾಗಿ ಇಷ್ಟು ಮೊತ್ತವನ್ನು ವರ್ಗಾಯಿಸಿರುವುದರ ಹಿಂದಿನ ರಹಸ್ಯವೇನು? ಉನ್ನತ ಶಿಕ್ಷಣ ಸಚಿವರು ಇದನ್ನು ಸಮರ್ಥಿಸಿಕೊಳ್ಳುತ್ತಿರುವುದರ ಹಿಂದೆ ಕಮಿಷನ್ ವ್ಯವಹಾರ ನಡೆದಿದೆಯೇ? ಎಂದು ಸಿಂಡಿಕೇಟ್ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದನ್ನು ವಿವಿಯ ಹಣಕಾಸು ವಿಭಾಗದ ಉಪಕುಲಪತಿ ವಿರೋಧಿಸಿ ಪತ್ರ ಬರೆದಿದ್ದರೂ, ಅವರಿಗೆ ಒತ್ತಡ ಹಾಕಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ವಿವಿಯ ವಿದ್ಯಾರ್ಥಿಗಳು ಖಂಡಿಸಿ, ಪ್ರತಿಭಟನೆ ಮಾಡಿದ್ದಾರೆ. ಆದರೆ ಕುಲಪತಿಗಳು ತಮ್ಮ ಅಧಿಕಾರ ಬಳಸಿ, ವಿದ್ಯಾರ್ಥಿಗಳು ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಇದರಿಂದ ವಿಚಲಿತರಾದ ವಿದ್ಯಾರ್ಥಿಗಳು ದೂರು ವಾಪಾಸ್ಸು ಪಡೆಯುವಂತೆ ಪ್ರತಿಭಟಿಸಿದ್ದರಿಂದ ದೂರು ವಾಪಸ್ಸು ಪಡೆಯುವುದಾಗಿ ಕುಲಪತಿಗಳು ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಚಿವರೇ ಭ್ರಷ್ಟ ಕುಲಪತಿಗಳನ್ನು ಸಮರ್ಥನೆ ಮಾಡಿಕೊಂಡಿದ್ದರಿಂದ ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಪ್ರತಿಭಟನೆಯನ್ನು ಕೈ ಬಿಡುವ ಹಂತದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.


ಕೆ.ಆರ್. ವೇಣುಗೋಪಾಲ್ ಅವರು ಅನಧಿಕೃತವಾಗಿ ವಿವಿಯ ಕುಲಪತಿಗಳಾಗಿದ್ದಾರೆ. ಸರಕಾರವು ಅವರನ್ನು ಅಧಿಕೃತವಾಗಿ ನೇಮಕ ಮಾಡಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದು, ಅವರು ಅನಧಿಕೃತವಾಗಿ ನೇಮಕವಾಗಿದ್ದಾರೆ ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಕೆ.ಆರ್. ವೇಣುಗೋಪಾಲ್ ಅವರು, ಸುಪ್ರೀಂ ಕೋರ್ಟ್‍ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಜೂ.12ಕ್ಕೆ ಅವರು ನಿವೃತ್ತಿ ಆಗುತ್ತಿದ್ದು, ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಯನ್ನು ಜೂ.12ರೊಳಗೆ ನಡೆಸಬೇಕು ಎಂದು ಸಿಂಡಿಕೇಟ್ ಸದಸ್ಯರು ಮನವಿ ಮಾಡಿದ್ದಾರೆ.


ಬೆಂಗಳೂರು ವಿವಿಯಲ್ಲಿ ನಾಲ್ಕು ವರ್ಷಗಳಿಂದ ಸಾಲು ಸಾಲು ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಅಂಕಪಟ್ಟಿ ವಿತರಣೆ, ನೌಕರರ ಪದೋನ್ನತಿ, ಕುಲಸಚಿವರ ವರ್ಗಾವಣೆ, 2019ರ ಅಧಿಸೂಚನೆಯ ಪಿಎಚ್‍ಡಿ ನೇಮಕಾತಿ, ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿ, ಸಿಂಡಿಕೇಟ್ ಸದಸ್ಯರನ್ನು ಅನಧಿಕೃತವಾಗಿ ಅಮಾನತ್ತು ಮಾಡಿದ ಪ್ರಕರಣ, ಗುತ್ತಿಗೆ ಹುದ್ದೆಗಳ ನೇಮಕಾತಿ, ವಿವಿಯ ಭೂ ಒತ್ತುವರಿ, ಟೆಂಡರ್‍ನಲ್ಲಿ ಬಾರಿ ಅವ್ಯವಹಾರವನ್ನು ನಡೆಸಿದ್ದಾರೆ. ಕೆಲವು ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಉಚ್ಚನ್ಯಾಯಾಲಯದಲ್ಲಿ ದಾಖಲಿಸಿದ ಬಹುತೇಕ ಪ್ರಕರಣಗಳಲ್ಲಿ ಕುಲಪತಿಗಳ ನಿರಂಕುಶ ಆಡಳಿತ ವೈಖರಿಯ ವಿರುದ್ಧ ತೀರ್ಪು ನೀಡಲಾಗಿದೆ. ಆದರೆ ಆ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್‍ನಲ್ಲಿ ತಡೆಯಾಜ್ಞೆ ತರಲಾಗಿದೆ. ಕೆಲವು ಪ್ರಕರಣಗಳ ಕುರಿತು ಸರಕಾರಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ, ಮತ್ತೆ ಕೆಲವು ಭ್ರಷ್ಟಾಚಾರದ ವಿರುದ್ಧ ಸಮಿತಿಗಳನ್ನು ನೇಮಕ ಮಾಡಿ ತನಿಖೆ ನಡೆಸಿದರೂ, ಕುಲಪತಿಗಳು ಆರ್‍ಎಸ್‍ಎಸ್‍ಗೆ ಸೇರಿದವನಾದ್ದರಿಂದ ವಿವಿಯಲ್ಲಿ ಭ್ರಷ್ಟಾಚಾರ ತೊಲಗಲಿಲ್ಲ. ಉನ್ನತ ಶಿಕ್ಷಣ ಸಚಿವರು ಕುಲಪತಿಗಳ ಅವ್ಯವಹಾರವನ್ನು ಸಮರ್ಥನೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಬೆಂಗಳೂರು ವಿವಿ ಸಿಂಡಿಕೇಟ್ ಬೇಸರ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News