ಜೂ.8ರಂದು ಹಜ್ ಯಾತ್ರಿಗಳ ವಿಮಾನಯಾನಕ್ಕೆ ಚಾಲನೆ: ರವೂಫುದ್ದೀನ್ ಕಚೇರಿವಾಲೆ

Update: 2022-06-06 14:35 GMT

ಬೆಂಗಳೂರು, ಜೂ.6: 2022ನೆ ಸಾಲಿನ ಹಜ್ ಯಾತ್ರೆಗೆ ರಾಜ್ಯದಿಂದ ತೆರಳಲಿರುವ ಯಾತ್ರಿಗಳ ಮೊದಲ ವಿಮಾನವು ಜೂ.9ರಂದು ಬೆಳಗ್ಗೆ 5.50ಕ್ಕೆ ರವಾನೆಯಾಗಲಿದ್ದು, ಜೂ.8ರಂದು ಸಂಜೆ 7 ಗಂಟೆಗೆ ಹಜ್ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನಯಾನದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ ತಿಳಿಸಿದರು.

ಸೋಮವಾರ ಹೆಗಡೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಮಾನಯಾನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಜ್ಯದ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಭಾಗವಹಿಸಲಿದ್ದು, ಶಾಸಕ ಕೃಷ್ಣಭೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಇದಲ್ಲದೆ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸಿರ್ ಹುಸೇನ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಭಾರತೀಯ ಹಜ್ ಸಮಿತಿ ಅಧ್ಯಕ್ಷ ಎ.ಪಿ.ಅಬ್ದುಲ್ಲಾ ಕುಟ್ಟಿ, ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ ಸೇರಿದಂತೆ ಉಲಮಾಗಳು, ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಇನ್ನಿತರ ಗಣ್ಯರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಆರೈಕೆ ಕೇಂದ್ರವಾಗಿ ಬಳಕೆಯಲ್ಲಿದ್ದ ಹಜ್ ಭವನವನ್ನು ನಾಲ್ಕು ತಿಂಗಳಿನಿಂದ ದುರಸ್ಥಿ ಮಾಡಿದ್ದು, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ರಾಜ್ಯದಿಂದ 3152 ಯಾತ್ರಿಗಳು ತೆರಳಲಿದ್ದಾರೆ ಎಂದು ಅವರು ತಿಳಿಸಿದರು. 
ಈ ಹಿಂದೆ ಬೆಂಗಳೂರು, ಮಂಗಳೂರು, ಹೈದರಾಬಾದ್ ಹಾಗೂ ಗೋವಾದಿಂದ ರಾಜ್ಯದ ಯಾತ್ರಿಗಳು ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದ ಹಾಗೂ ಅನಂತಪುರ, ಚಿತ್ತೂರು ಜಿಲ್ಲೆಯ ಯಾತ್ರಿಗಳು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾತ್ರೆಗೆ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.

ಜೂ.9ರಂದು ಬೆಂಗಳೂರಿನಿಂದ ಮದೀನಾಗೆ 450 ಯಾತ್ರಿಗಳನ್ನು ಒಳಗೊಂಡ ಮೊದಲ ವಿಮಾನ ರವಾನೆಯಾಗಲಿದೆ. ಇದೇ ರೀತಿ, 7 ವಿಮಾನಗಳು ಸಂಚರಿಸಲಿವೆ. ಹಜ್ ಯಾತ್ರೆಗೆ ತೆರಳುವ ಯಾತ್ರಿಗಳು ನಾಲ್ಕು ದಿನ ಮುಂಚಿತವಾಗಿಯೆ ಹಜ್‍ಭವನಕ್ಕೆ ಆಗಮಿಸಬೇಕು. ಅವರಿಗೆ ಇಲ್ಲಿ ಆರ್‍ಟಿಪಿಸಿಆರ್ ಪರೀಕ್ಷೆ ಹಾಗೂ ಲಸಿಕೆಯನ್ನು ಹಾಕಲಾಗುವುದು ಎಂದು ರವೂಫುದ್ದೀನ್ ಕಚೇರಿವಾಲೆ ಹೇಳಿದರು.

ಯಾತ್ರಿಗಳ ಸೂಟ್‍ಕೇಸ್ ವಿಚಾರದಲ್ಲಿ ಕೆಲವೆಡೆ ಗೊಂದಲಗಳು ಉಂಟಾಗಿವೆ. ಭಾರತೀಯ ಹಜ್ ಸಮಿತಿಯು ಒಂದು ಖಾಸಗಿ ಏಜೆನ್ಸಿಗೆ ಸೂಟ್‍ಕೇಸ್‍ಗಳನ್ನು ವಿತರಿಸುವ ಹೊಣೆಗಾರಿಕೆ ನೀಡಿದೆ. ನಮ್ಮ ರಾಜ್ಯದಲ್ಲಿಯೂ ಹಲವಾರು ಜಿಲ್ಲೆಗಳಿಂದ ಸೂಟ್‍ಕೇಸ್ ಲಭ್ಯವಾಗದಿರುವ ಕುರಿತು ದೂರುಗಳು ಬಂದಿವೆ. ಈ ಸಂಬಂಧ ಭಾರತೀಯ ಹಜ್ ಸಮಿತಿಯ ಜೊತೆ ನಿರಂತರವಾಗಿ ಚರ್ಚೆ ನಡೆಸಲಾಗಿದ್ದು, ನಾಳೆಯೊಳಗೆ ಈ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಮಾತನಾಡಿ, ಹಜ್ ಯಾತ್ರಿಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದು, ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉತ್ತಮವಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖವಾಗಿ ಯಾತ್ರೆಗೆ ತೆರಳುತ್ತಿರುವವರ ಜೊತೆ ಹಜ್ ಸಮಿತಿಯ ಸಿಬ್ಬಂದಿಗಳು ಉತ್ತಮವಾಗಿ ವ್ಯವಹರಿಸಬೇಕು. ಈ ಹಿಂದೆ ಅನುಚಿತ ವರ್ತನೆ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ಕೆಳ ಹಂತದಲ್ಲಿರುವ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಬೇಕು ಎಂದು ಅವರು ಸೂಚಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್, ಸದಸ್ಯರಾದ ಡಾ.ಮುಹಮ್ಮದ್ ಕಬೀರ್ ಅಹ್ಮದ್, ಖುಸ್ರೋ ಖುರೇಷಿ, ಚಾಂದ್ ಪಾಷ, ಮುಯಿನುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News