ಆಯನೂರು ಮಂಜುನಾಥ್ ಆರೋಪ ನಿರಾಧಾರ: ಸಚಿವ ಡಾ.ಕೆ.ಸುಧಾಕರ್

Update: 2022-06-07 13:36 GMT

ಬೆಂಗಳೂರು, ಜೂ.7: ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಲು ಸಾಧ್ಯವೋ ಅವೆಲ್ಲವನ್ನೂ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶ್ರೀನಿವಾಸಚಾರಿ ಸಮಿತಿ ಶಿಫಾರಸ್ಸುಗಳ ಅನುಷ್ಠಾನ ಸಂಬಂಧ ಸಿಬ್ಬಂದಿ ಸಂಘಟನೆ ಪದಾಧಿಕಾರಿಗಳ ಜತೆ ಅನೇಕ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಂಘಟನೆಯ ಗೌರವಾಧ್ಯಕ್ಷರಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಹಿರಿಯ ಅಧಿಕಾರಿಗಳು ಆ ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ ಶ್ರೀನಿವಾಸಚಾರಿ ಸಮಿತಿ ವರದಿಯನ್ನು ನಿರ್ಲಕ್ಷಿಸಲಾಗಿದೆ. ಒಂದು ವರ್ಷವಾದರೂ ಯಾವ ಕ್ರಮಕೈಗೊಂಡಿಲ್ಲ ಎಂದು ಆಯನೂರು ಮಂಜುನಾಥ್ ಏಕೆ ಹೇಳಿಕೆ ನೀಡಿದರೊ ಗೊತ್ತಿಲ್ಲ. ಸಭೆಗಳಲ್ಲಿ ಕೈಗೊಂಡ ನಿರ್ಧಾರ ಮತ್ತು ಅಧಿಕಾರಿಗಳಿಗೆ ನೀಡಲಾದ ಸೂಚನೆಗಳ ಬಗ್ಗೆ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಸುಧಾಕರ್ ಹೇಳಿದ್ದಾರೆ.

ಸಂಘಟನೆ, ಹೋರಾಟಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಆಯನೂರು ಮಂಜುನಾಥ್ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಆದರೆ, ವಾಸ್ತವಕ್ಕೆ ವಿರುದ್ಧವಾಗಿ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ವರದಿಯ ಬಹುತೇಕ ಶಿಫಾರಸ್ಸುಗಳ ಈಡೇರಿಕೆಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಬೇಡಿಕೆ ಆರೋಗ್ಯ ಇಲಾಖೆಗೆ ಸೀಮಿತವಾದ ವಿಷಯವಲ್ಲ. ಎನ್‍ಎಚ್‍ಎಂ ಅಡಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇಕಡ 60:40 ಅನುಪಾತದಲ್ಲಿ ವೆಚ್ಚ ಭರಿಸುತ್ತಿವೆ. ಹೀಗಾಗಿ, ಕೇಂದ್ರ ಸರಕಾರ ಆ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಬಹುತೇಕ ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ. 

ಒಟ್ಟಾರೆ ಅವರೆಲ್ಲರಿಗೂ ಅನ್ವಯ ಆಗುವಂತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಬೇಕಾಗುತ್ತದೆ. ಇಷ್ಟಾದರೂ ಸಿಬ್ಬಂದಿಗಳ ಸೇವೆ ಕಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಯನೂರು ಅವರು ಸಚಿವರಾಗಿದ್ದರೂ ಈ ವಿಷಯದಲ್ಲಿ ಇದಕ್ಕಿಂತ ಇನ್ನೇನೂ ಮಾಡಲು ಸಾಧ್ಯವಿಲ್ಲ. ನನ್ನ ಕಾರ್ಯಕ್ಷಮತೆ ಏನು ಎಂಬುದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ರಾಜ್ಯದ ಜನಕ್ಕೆ ಅರ್ಥವಾಗಿದೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ವಿಷಯದಲ್ಲಿ ನಾನು ಕೈಗೊಂಡಿರುವ ನಿರ್ಧಾರಗಳ ಬಗ್ಗೆ ತೃಪ್ತಿಯಿದೆ. ಈ ಕುರಿತಂತೆ ಸಂಘಟನೆಗಳ ಪದಾಧಿಕಾರಿಗಳು ಅಭಿಮಾನಪಟ್ಟು ಸನ್ಮಾನಿಸಿರುವುದೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಸಿಬ್ಬಂದಿ ಸೌಲಭ್ಯಗಳ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಇಲಾಖೆಯಲ್ಲಿ ಕೇಳಿ ತಿಳಿದುಕೊಳ್ಳಬಹುದು. ಕಾನೂನು ವ್ಯಾಪ್ತಿಗೆ ಸೀಮಿತವಾದ, ಸರಕಾರಗಳ ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಎನ್‍ಎಚ್‍ಎಂ ಅಡಿ ಕೆಲಸ ಮಾಡುವ ಗುತ್ತಿಗೆ ಸಿಬ್ಬಂದಿಗೆ ಸೇವಾ ಭದ್ರತೆ ಮತ್ತು ಕಾಯಂಗೊಳಿಸಲು ಅವಕಾಶ ಇರುವುದಿಲ್ಲ. ಆದರೂ, ಎಲ್ಲ ಸಿಬ್ಬಂದಿಗಳ ಸೇವೆ ಮುಂದುವರಿಸಲಾಗಿದೆ. ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆ, 10 ದಿನಗಳ ವೈದ್ಯಕೀಯ ರಜೆ, ಮಹಿಳಾ ಸಿಬ್ಬಂದಿಗೆ 180 ದಿನ ಪ್ರಸೂತಿ ರಜೆ, ಪುರುಷ ಸಿಬ್ಬಂದಿಗೆ 10 ದಿನ ಪಿತೃತ್ವ ರಜೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ವಿಮಾಯೋಜನೆ: ಗುತ್ತಿಗೆ ನೌಕರರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆರೋಗ್ಯ ವಿಮೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ವರ್ಗಾವಣೆ: ಕಾನೂನು ಇಲಾಖೆ ಅಭಿಪ್ರಾಯದಂತೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಆದಾಗ್ಯೂ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಬಾರಿ ಪರಸ್ಪರ ಒಪ್ಪಿಗೆ ಮೇರೆಗೆ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ವಿಶೇಷ ನೇಮಕ ನಿಯಮಗಳಡಿ ಸೇವಾ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಸೌಲಭ್ಯವನ್ನು ಎನ್‍ಎಚ್‍ಎಂ ಅಡಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳಿಗೂ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ಸೇವಾ ಭತ್ತೆ ನೀಡುತ್ತಿರುವ ಹುದ್ದೆಗಳನ್ನು ಪರಿಗಣಿಸಿ ಸಮಾನಾಂತರವಾಗಿರುವ ಹುದ್ದೆಗಳಿಗೆ ವಿಶೇಷ ಭತ್ತೆಯನ್ನು 2022-23 ನೇ ಸಾಲಿನ ಪಿಐಪಿಯಲ್ಲಿ ಕೇಂದ್ರ ಸರಕಾರಕ್ಕೆ ಕಾರ್ಯಕ್ರಮ ಅನುಷ್ಠಾನ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರಣ ಅಥವಾ ಶಾಶ್ವತ ಅಂಗ ವೈಕಲ್ಯ ಮತ್ತು ಭಾಗಶಃ ಅಂಗವೈಕಲ್ಯ ಸಂದರ್ಭದಲ್ಲಿ ಪರಿಹಾರ ನೀಡಲು ಪ್ರತ್ಯೇಕ ಖಾತೆ ತೆರೆಯಲು ಹಣಕಾಸು ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ಇದಲ್ಲದೆ, ಕುಂದು ಕೊರತೆ ಆಲಿಸಲು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳ 5ರೊಳಗೆ ವೇತನ ಪಾವತಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಗೆ ಎನ್‍ಎಚ್‍ಎಂ ಅಡಿ ಖಾಲಿ ಹುದ್ದೆ ಭರ್ತಿ ಮಾಡುವಾಗ ಆದ್ಯತೆ ನೀಡಲು ಸುತ್ತೋಲೆ ಹೊರಡಿಸಲಾಗಿದೆ ಎಂದು ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News