ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಕೋವಿಡ್ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

Update: 2022-06-10 15:52 GMT

ಉಡುಪಿ: ಪ್ರಸ್ತುತ ರಾಜ್ಯದಲ್ಲಿ ಕಳೆದ 10 ದಿನಗಳಿಂದ ದೈನಂದಿನ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆಯನ್ನು ಗಮನಿಸಲಾಗಿದ್ದು, ಜೂ.೯ರಂದು ೪೭೧ ಪ್ರಕರಣ ಹಾಗೂ ಶೇ.೨.೧೪ರಷ್ಟು ಪಾಸಿಟಿವ್ ಪ್ರಮಾಣ ವರದಿಯಾಗಿದೆ. ಕೋವಿಡ್-೧೯ರ ಮೂರನೇ ಅಲೆಯ ನಂತರದ ಅವಧಿಯ ಏರಿಕೆ ಇದಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ನಿರ್ಧರಿಸಿದೆ.

ಕೋವಿಡ್-೧೯ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯಮಟ್ಟದ ಕೋವಿಡ್-೧೯ ತಾಂತ್ರಿಕ ಸಲಹಾ ಸಮಿತಿಯು ಜೂ.೬ರ ತನ್ನ ಸಭೆಯಲ್ಲಿ ಹಲವು ಸಲಹೆಗಳನ್ನು ರಾಜ್ಯ ಸರಕಾರಕ್ಕೆ ನೀಡಿದ್ದು, ಅದರಂತೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಇಂದು ಕೋವಿಡ್‌ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಇದರಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಈ ಕ್ರಮವನ್ನು ಜಾರಿಗೊಳಿಸಲು ಮಾರ್ಷಲ್/ ಪೊಲೀಸ್ ಸಿಬ್ಬಂದಿಗಳ ಸಹಾಯ ಪಡೆಯುವಂತೆ ಸೂಚಿಸಲಾಗಿದೆ.

ಮುಚ್ಚಿದ ಸಂರಚನೆಯನ್ನು (ಕ್ಲೋಸ್ಡ್ ಏರಿಯಾ) ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಕೆಫೆಟೇರಿಯಾ, ಹೊಟೇಲ್, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಚೇರಿಗಳು, ಕಾರ್ಖಾನೆ ಇತ್ಯಾದಿ ಪ್ರದೇಶಗಳಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಹಾಗೂ ಮಾಸ್ಕ್ ಧರಿಸಿ ಬರುವವರಿಗೆ ಮಾತ್ರ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಇದು ಆಯಾ ಸಂಸ್ಥೆಯ ಮಾಲಕರ ಅಥವಾ ಆಡಳಿತ ಮಂಡಳಿಗಳ ಜವಾಬಾರಿಯಾಗಿರುತ್ತದೆ.

ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ (ಬಸ್ ಹಾಗೂ ರೈಲು) ಪ್ರಯಾಣಿಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಸಾರಿ (ಎಸ್‌ಎಆರ್‌ಐ) ಹಾಗೂ ಐಎಲ್‌ಐ ಲಕ್ಷಣಗಳನ್ನು ಹೊಂದಿರು ವವರು, ಹೈರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಅವರು ಮನೆಗಳಲ್ಲಿ ಪ್ರತ್ಯೇಕವಾಗಿರಬೇಕು.

ಅರ್ಹ ಜನರೆಲ್ಲರೂ ಮುನ್ನೆಚ್ಚರಿಕೆ ಡೋಸ್ ಸೇರಿದಂತೆ ಕೋವಿಡ್-೧೯ ಲಸಿಕೆಯನ್ನು ಪಡೆಯಬೇಕು. ಮೇಲೆ ಹೇಳಿದ ಕೋವಿಡ್-೧೯ ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿ ಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News