ರೋಹಿತ್ ಚಕ್ರತೀರ್ಥ ಬಂಧಿಸಲು, ಪರಿಷ್ಕೃತ ಪಠ್ಯ ಕೈಬಿಡುವಂತೆ ಒತ್ತಾಯಿಸಿ ಜೂ.18ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ

Update: 2022-06-10 16:54 GMT

ಬೆಂಗಳೂರು, ಜೂ.10: ವಿವಾದಿತ ಪಠ್ಯಪುಸ್ತಕ ಪರಿಷ್ಕರಣೆ ಕೈಬಿಡುವ ಜೊತೆಗೆ ಸಮಿತಿಯ ರೋಹಿತ್ ಚಕ್ರತೀರ್ಥ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜೂ.18ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಶುಕ್ರವಾರ ನಗರದ ಕುವೆಂಪು ಸಭಾಂಗಣದಲ್ಲಿ ರಾಜ್ಯ ಒಕ್ಕಲಿಗರ ಸಂಘ, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ, ದಸಂಸ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಂಚಾಲನಾ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಭಟನೆಗೆ ಕರೆ ನೀಡಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಮುಖ ಹೋರಾಟಗಾರರು, ಚಿಂತಕರು, ಜೂ.18ರಂದು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ಬೃಹತ್ ಪ್ರತಿಭಟನೆ ನಡೆಸಿ, ಸರಕಾರಕ್ಕೆ ನಮ್ಮ ಬೇಡಿಕೆ ಸಲ್ಲಿಸಲಾಗುವುದು ಎಂದರು.

ಅಂದು ಪ್ರತಿಭಟನಾ ಮೆರವಣಿಗೆ ಜೊತೆಗೆ, ಬೃಹತ್ ಸಮಾವೇಶ ನಡೆಸಿ, ನಾಡಿನ ಹೋರಾಟಗಾರರು, ಚಿಂತಕರು, ಶಿಕ್ಷಣ ತಜ್ಞರು, ವಿವಿಧ ಮಠದ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಆ ನಂತರ, ನಮ್ಮ ಬೇಡಿಕೆಗಳನ್ನು ರಾಜ್ಯ ಸರಕಾರಕ್ಕೆ ಮುಟ್ಟಿಸಲಾಗುವುದು ಎಂದು ಪ್ರಕಟಿಸಿದರು.

ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ನಾಡಗೀತೆ ಹಾಗೂ ಕುವೆಂಪು ಅವರ ಬಗ್ಗೆ ಅಗೌರವದಿಂದ ಲಘುವಾಗಿ ಮಾತನಾಡಿರುವುದು ದುರದೃಷ್ಟಕರ ಸಂಗತಿ. ಅಧ್ಯಯನ, ಸಂಸ್ಕøತಿಯೇ ಇಲ್ಲದಂತಹ ವ್ಯಕ್ತಿಯೊಬ್ಬರಿಗೆ ಸರಕಾರ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸ್ಥಾನ ಕೊಟ್ಟಿರುವುದರ ಪರಿಣಾಮ ಇದಾಗಿದೆ ಎಂದು ಸಭೆಯಲ್ಲಿ ಹೋರಾಟಗಾರರು ಟೀಕಿಸಿದರು.

ಕುವೆಂಪು ಕೇವಲ ಸಾಹಿತಿಯಷ್ಟೇ ಅಲ್ಲ. ತಮ್ಮ ವೈಚಾರಿಕ ಬರಹಗಳ ಮೂಲಕ ಅವರು ನಾಡಿನ ಸಾಕ್ಷಿ ಪ್ರಜ್ಞೆಯಂತೆ ಇದ್ದಾರೆ. ಅಂತಹ ವ್ಯಕ್ತಿಯನ್ನು ಲೇವಡಿ ಮಾಡುವುದು ವಕ್ರ ಮನಸ್ಸಿನ ವ್ಯಕ್ತಿಗಳಿಗೆ ಮಾತ್ರ ಸಾಧ್ಯ. ಸರಕಾರ ಕೂಡಲೇ ಚಕ್ರತೀರ್ಥ ಅವರಿಗೆ ಕೊಟ್ಟಿರುವ ಜವಾಬ್ದಾರಿಯಿಂದ ಮುಕ್ತಗೊಳಿಸುವುದಷ್ಟೇ ಅಲ್ಲ, ಬಂಧಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಆರೋಗ್ಯತಜ್ಞ ಡಾ.ಆಂಜನಪ್ಪ, ದಸಂಸ ಹೋರಾಟಗಾರರಾದ ಮಾವಳ್ಳಿ ಶಂಕರ್, ಬಿ.ಗೋಪಾಲ್, ಹ.ರಾ. ಮಹೇಶ್, ಲೇಖಕ ಪಾರ್ವತೀಶ್ ಬಿಳಿದಾಳೆ, ನಾಗರಾಜು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News