ಲಂಡನ್ ವಿವಿಯಲ್ಲಿ ‘ದಿ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ’ ಗ್ರಂಥ ಬಿಡುಗಡೆ, ಹಂಪನಾಗೆ ಸನ್ಮಾನ

Update: 2022-06-10 17:57 GMT

ಬೆಂಗಳೂರು, ಜೂ.10: ಹಿರಿಯ ಸಾಹಿತಿ ಪ್ರೊ.ಹಂಪನಾಗರಾಜಯ್ಯ ಅವರು ಇಂಗ್ಲೀಷ್  ನಲ್ಲಿ ರಚಿಸಿದ ‘ದಿ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ’ ಎಂಬ ಗ್ರಂಥದ ಲೋಕಾರ್ಪಣೆ ಶುಕ್ರವಾರ ಲಂಡನ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. 

ಆದಿಕವಿ ಪಂಪಪೂರ್ವ ಯುಗದ ಸಾಹಿತ್ಯ "ಎಂಬ ಸಂಪುಟವನ್ನು ಪ್ಯಾರಿಸ್ ವಿವಿಯ ಪ್ರೊ.ನಳಿನಿ ಬಲ್ಬ್ ಬಿಡುಗಡೆ ಮಾಡಿದರು. ಪಂಪೋತ್ತರ ಸಾಹಿತ್ಯದ 1ನೆ ಭಾಗ ಸಂಪುಟವನ್ನು ಅಮೆರಿಕದ ಡೆನಿಸನ್ ವಿವಿಯ ಪ್ರೊ.ಜಾನ್ ಕಾರ್ಟ್ ಬಿಡುಗಡೆಗೊಳಿಸಿದರು.

ಎರಡನೆ ಭಾಗದ ಸಂಪುಟವನ್ನು ಬೆಲ್ಜಿಯಂ ದೇಶದ ಗೆಂಟ್  ವಿವಿಯ ಪ್ರೊ.ಟಿಲ್ಲೋ ಗೆಟಿಗ್ ಬಿಡುಗಡೆ ಮಾಡಿದರು. ಸಂಸ್ಕøತ, ಪ್ರಾಕೃತ, ಮತ್ತು ಅಪಭ್ರಂಶ ಭಾಷೆಯ ಸಾಹಿತ್ಯ ಕುರಿತ 4ನೆ ಸಂಪುಟವನ್ನು ಡಾ.ನಿಕ್ ಬರ್ನಾರ್ಡ್ ಮತ್ತು ಶಾಸನಗಳನ್ನು ಕುರಿತ 5ನೆ ಸಂಪುಟವನ್ನು ಪ್ರೊ.ಪೀಟರ್ ಫ್ಲೂಗೆಲರೂ ಬಿಡುಗಡೆ ಮಾಡಿದರು. ಸುಮಾರು ಒಂದು ಸಾವಿರ ನಾನ್ನೂರು ಪುಟಗಳ ಈ ಗ್ರಂಥ ಕರ್ನಾಟಕದ ಅಭಿಜಾತ ಸಾಹಿತ್ಯದ ಸ್ವರೂಪ ಹಾಗೂ ಮಹತ್ವ ವನ್ನು ಸಮರ್ಥವಾಗಿ ಪರಿಚಯಿಸುತ್ತದೆ, ಕನ್ನಡೇತರ ಸಾಹಿತ್ಯ ಆಸಕ್ತರಿಗೆ ಉಪಯುಕ್ತ ಮಾಹಿತಿ ಒಳಗೊಂಡಿರುವ ಆಕರ ಸಂಪುಟಗಳೆಂದು ಶ್ಲಾಘಿಸಿದರು. ವಿವಿಧ ದೇಶಗಳ ವಿದ್ವಾಂಸರುಗಳ ಉಪಸ್ಥಿತಿಯಲ್ಲಿ ಕನ್ನಡ ನಾಡಿನಲ್ಲಿ ರಚಿಸಿದ ಪ್ರಮುಖ ಸಾಹಿತ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್ ಮೂಲಕ ಜಾಗತಿಕ ವೇದಿಕೆಯಲ್ಲಿ ನಿಲ್ಲಿಸಿರುವ ಹಂಪನಾ ಅವರನ್ನು ಗೌರವಿಸಲಾಯಿತು. 

ಸಾಹಿತ್ಯ ಸಂಶೋಧನೆ ಕಾವ್ಯ ಇತಿಹಾಸ ಮತ್ತು ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಿಂದ ನಿರಂತರವಾಗಿ ಬರವಣಿಗೆ ಮಾಡುತ್ತಾ ಬಂದಿರುವ ಪ್ರೊ.ಹಂಪನಾಗರಾಜಯ್ಯ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ಇದೀಗ ಅವರು ರಚಿಸಿರುವ ಬೃಹತ್ ಸಂಪುಟವನ್ನು ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ. 5 ಸಂಪುಟಗಳ ಈ ಪುಸ್ತಕದಲ್ಲಿ ಕನ್ನಡ ಸಾಹಿತ್ಯದ ಆರಂಭದಿಂದ 13ನೆ ಶತಮಾನದ ವರೆಗಿನ ಪ್ರಮುಖ ಕವಿ-ಕಾವ್ಯ ಪರಿಚಯ ವಿಮರ್ಶೆ ಇದೆ. ಹಲವು ದೇಶಗಳ ಬರಹಗಾರರು ವಿದ್ವಾಂಸರು ಉಪಸ್ಥಿತರಿದ್ದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ಮಿತೆ ಹಾಗೂ ವಿಸ್ತಾರವನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುವ ಇಷ್ಟು ದೊಡ್ಡ ಐತಿಹಾಸಿಕ ಮಹತ್ವದ ಕಾರ್ಯಕ್ರಮ ಇಂಗ್ಲೀಷಿನ ತವರೂರ ರಾಜಧಾನಿಯಲ್ಲಿ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಇಂಗ್ಲೆಂಡ್‍ನ ಆಕ್ಸಫರ್ಡ್ ನವೀನ್ ಸಂಕಿಘಟ್ಟ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News