ಜಮ್ಮುಕಾಶ್ಮೀರ: ಕೋಮು ಹಿಂಸಾಚಾರ: ಭದ್ರವಾಹದಲ್ಲಿ ಕರ್ಫ್ಯೂ ಜಾರಿ, ಮೊಬೈಲ್ ಇಂಟರ್‌ನೆಟ್ ಸ್ಥಗಿತ

Update: 2022-06-10 18:25 GMT

ಜಮ್ಮು, ಜೂ. 10: ಎರಡು ಸಮುದಾಯಗಳ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದ ಬಳಿಕ ಜಮ್ಮು ಹಾಗೂ ಕಾಶ್ಮೀರದ ಡೋಡಾ ಜಿಲ್ಲೆಯ ಭದ್ರವಾಹ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ ಹಾಗೂ ಮೊಬೈಲ್ ಅಂತರ್ಜಾಲ ಸೇವೆ ರದ್ದುಗೊಳಿಸಲಾಗಿದೆ. ಈ ವಲಯದಲ್ಲಿ ನಾಲ್ವರಿಗಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ ಪೊಲೀಸರು 144 ಸೆಕ್ಷನ್ ವಿಧಿಸಿದ್ದಾರೆ. ಶ್ರೀನಗರದ ವಿವಿಧ ಭಾಗಗಳಲ್ಲಿ ಶುಕ್ರವಾರ ಭಾಗಶಃ ಬಂದ್ ವರದಿಯಾಗಿದೆ. ಪ್ರವಾದಿ ಮುಹಮ್ಮದ್ ಅವರ ಕುರಿತು ಹೇಳಿಕೆ ನೀಡಿದ ಬಿಜೆಪಿಯ ವಜಾಗೊಂಡ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮಸ್ಲಿಂ ಧಾರ್ಮಿಕ ಸಂಘಟನೆ ಅಂಜುಮಾನೆ ಇಸ್ಲಾಮಿಯಾ ಭದ್ರವಾಹ ಬಂದ್‌ಗೆ ಕರೆ ನೀಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ಟೈಮ್ಸ್ ನೌ’ ಟೆಲಿವಿಷನ್‌ನ ಮೇ 26ರಂದು ನಡೆದ ಚರ್ಚೆಯ ಸಂದರ್ಭ ಶರ್ಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧ ಮುಸ್ಲಿಮರು ಬಹುಸಂಖ್ಯಾತರಿರುವ ಹಲವು ದೇಶಗಳು ಭಾರತದ ವಿರುದ್ಧ ರಾಜತಾಂತ್ರಿಕ ಮಟ್ಟದಲ್ಲಿ ಸಾಮೂಹಿಕ ಆಕ್ರೋಶ ವ್ಯಕ್ತಪಡಿಸಿತ್ತು. ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಶರ್ಮಾ ಅವರಿಗೆ ಬೆಂಬಲ ನೀಡಿದ ಜಮ್ಮು ಮೂಲದ ಪತ್ರಕರ್ತನ ವಿರುದ್ಧ ಕೂಡ ಮುಸ್ಲಿಮರು ಭದ್ರವಾಹದಲ್ಲಿ ಪ್ರತಿಭಟನೆ ನಡೆಸಿದರು.

‘‘ಪ್ರತಿಭಟನೆ ಸಂದರ್ಭ ಓರ್ವ ವ್ಯಕ್ತಿ ಪ್ರಚೋದನಾಕಾರಿ ಭಾಷಣ ಮಾಡಿದರು. ಇದು ಹಿಂದೂಗಳು ಕೂಡ ಪ್ರತಿಭಟನೆ ನಡೆಸಲು ಕಾರಣವಾಯಿತು’’ ಎಂದು ಹೆಸರು ಹೇಳಲಿಚ್ಛಿಸದ ಭದ್ರವಾಹದ ನಿವಾಸಿಯೊಬ್ಬರು ತಿಳಿಸಿದ್ದಾರೆ. ದ್ವೇಷ ಭಾಷಣ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಪ್ರದೇಶದ ಹಿಂದೂಗಳು ಆಗ್ರಹಿಸಿದ್ದಾರೆ. ಪ್ರವಾದಿ ಮುಹಮ್ಮದ್ ಅವರ ವಿರುದ್ಧದ ಸ್ಥಳೀಯ ಬಾಲಕನೋರ್ವ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ವೈರಲ್ ಆದ ಬಳಿಕ ಈ ಪ್ರದೇಶದಲ್ಲಿ ಕೋಮು ಹಿಂಸಾಚಾರ ಹೆಚ್ಚಿತು. ‘‘ಅದು ಮತ್ತಷ್ಟು ಪ್ರತಿಭಟನೆಗೆ ಪ್ರಚೋದನೆ ನೀಡಿತು’’ ಎಂದು ನಿವಾಸಿ ತಿಳಿಸಿದ್ದಾರೆ. ‘‘ಎರಡೂ ಸಮುದಾಯಗಳು ತಮ್ಮ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತಡ ರಾತ್ರಿ ವರೆಗೆ ಮುಂದುವರಿಯಿತು. ಆದರೆ, ಆಡಳಿತ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಯಾವುದೇ ಘರ್ಷಣೆ ನಡೆಯಲಿಲ್ಲ’’ ಎಂದು ಅವರು ತಿಳಿಸಿದ್ದಾರೆ. ದ್ವೇಷ ಭಾಷಣ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭದ್ರವಾಹನಲ್ಲಿ ಕರ್ಫ್ಯೂ ವಿಧಿಸಿದ ಬಳಿಕ ನೆರೆಯ ಜಿಲ್ಲೆಯಾದ ಡೋಡಾ, ಕಿಸ್ತವಾರ ಹಾಗೂ ರಾಂಬಾನ್‌ನಲ್ಲಿ ಬಂದ್ ಆಗಿರುವುದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News