ಪರ್ಕಳ ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಬಸವನ ಹುಳಗಳು

Update: 2022-06-12 15:27 GMT

ಉಡುಪಿ : ಕಳೆದ ಅಕ್ಟೋಬರ್ ತಿಂಗಳಲ್ಲಿ ಪರ್ಕಳದ ದೇವಿನಗರ ಪರಿಸರದಲ್ಲಿ ಕಂಡುಬಂದಿದ್ದ ಬಸವನ ಹುಳು/ಶಂಖದ ಹುಳುಗಳ(ಆಫ್ರಿಕನ್ ಜಯಂಟ್ ಸ್ನೈಲ್) ಭಾದೆ ಮತ್ತೆ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಠಿಯಾಗಿದೆ.

ಈ ಬಾರಿ ಪರ್ಕಳ ದೇವಿ ನಗರ ಒಂದು ಹಾಗೂ ಎರಡನೇ ಕ್ರಾಸ್‌ನ ಹೆಚ್ಚಿನ ಮನೆಗಳಲ್ಲಿ  ಮಾತ್ರವಲ್ಲದೆ ಪರ್ಕಳ ಬಿಎಂ ಸ್ಕೂಲ್‌ನ ಕಂಪೌಂಡ್, ಪುಟಾಣಿಗಳ ಅಂಗನವಾಡಿಯ ಗೋಡೆಗಳು ಹಾಗೂ ಪರ್ಕಳ ದೇವಿನಗರದ ಅಬ್ದುಲ್ ಸತ್ತಾರ್ ಅವರ ಮನೆಯ ಕಂಪೌಂಡ್ ಸುತ್ತಲೂ ಈ ಬಸವನ ಹುಳಗಳು ಹರಿ ದಾಡುತ್ತಿದ್ದು, ಇವುಗಳ ಉಪಟಳ ಮತ್ತೆ ತಲೆದೋರಿದೆ.

‘ಕಳೆದ ವರ್ಷ ಈ ಹುಳಗಳು ಕಾಣಿಸಿಕೊಂಡಿದ್ದಾಗ ನಾವು 9 ಗೋಣಿ ಕಲ್ಲು ಉಪ್ಪು ಬಳಸಿದ್ದೇವು. ಆದರೂ ಕೂಡ ಈ ಹುಳ ಉಪಟಳ ಕೊನೆಗೊಂಡಿಲ್ಲ. ಈ ವರ್ಷ ಮಳೆ ಆರಂಭವಾದಾಗ ನಮ್ಮ ಮನೆಯ ಗೋಡೆಯಲ್ಲಿ ಇವುಗಳು ಹರಡುತ್ತಿವೆ. ಮನೆಯ ಗಿಡಗಂಟೆಗಳನ್ನು ತಿನ್ನಲು ಶುರು ಮಾಡಿದೆ ಎಂದು ಸ್ಥಳೀಯರಾದ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ.

ಈ ಪರಿಸರದಲ್ಲಿ ಈ ಬಸವನ ಹುಳುವಿನಿಂದ ಮತ್ತೆ ಮತ್ತೆ ತೊಂದರೆ ಅನುಭವಿಸುವಂತಾಗಿದೆ. ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಈ ಬಾರಿಯೂ ತೊಂದರೆ ಅನುಭವಿಸಬೇಕಾಗಿದೆ. ಈ ಬಾರಿ ಪರ್ಕಳ ಬಿಎಂ ಶಾಲೆಯ ಹಾಗೂ ಅಂಗನವಾಡಿಯ ಗೋಡೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹುಳಗಳಿಂದ ಗಿಡಗಳಿಗೆ ಹೆಚ್ಚಿನ ಹಾನಿ!

ಈ ಹುಳಗಳು ದ್ವಿಲಿಂಗಗಳಾಗಿದ್ದು, ಸರಿಸುಮಾರು ೫೦-೨೦೦ ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ ೩-೫ವರ್ಷಗಳಾಗಿವೆ. ಈ ಹುಳುಗಳು ನಿಶಾಚರಿ(ರಾತ್ರಿ ಸಮಯದಲ್ಲಿ ಸಂಚಾರ)ಗಳಾಗಿವೆ.

ಮಳೆಗಾಲದಲ್ಲಿ ಬೆಳೆಗಳ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವು ಗಳನ್ನು ತಿಂದು ಹೆಚ್ಚಿನ ಹಾನಿ ಉಂಟು ಮಾಡುತ್ತದೆ. ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿಯಾಗಿದೆ. ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು. ಬಿಸಿಲು ಹೆಚ್ಚಾದಂತೆ ಇವುಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.

‘ರಾತ್ರಿ ಹೊತ್ತು ಸಂಚಾರ ಜಾಸ್ತಿಯಾಗಿರುವು ಈ ಹುಳಗಳು ಮನೆಯ ಒಳಗೆ ಬರುತ್ತಿದೆ. ಹಾಗಾಗಿ ಉಡುಪಿಯ ನಗರಸಭೆಯ ಆರೋಗ್ಯ ಅಧಿಕಾರಿಗಳು ಕೀಟನಾಶಕವನ್ನು ಸಿಂಪಡಿಸಿ ಈ ಹುಳಗಳನ್ನು ನಾಶಪಡಿಸಬೇಕು. ಅಲ್ಲದೆ ಪೂರ್ಣ ಪ್ರಮಾಣದ ಶಾಶ್ವತ ಪರಿಹಾರ ಕೈಗೊಳ್ಳಬೇಕು’
-ಗಣೇಶ್‌ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು, ಸಾಮಾಜಿಕ ಕಾರ್ಯಕರ್ತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News