ಸರಕಾರಿ ಶಾಲೆಗಳ ಪುನರುತ್ಥಾನದ ಕಾಲ

Update: 2022-06-13 03:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ, ಲಾಕ್‌ಡೌನ್ ಮುಗಿದು ಶಾಲೆ ಆರಂಭವಾಗುತ್ತಿದ್ದ ಹಾಗೆಯೇ ರಾಜ್ಯದ ಶಿಕ್ಷಣ ಸಚಿವರು ಒಂದು ಬೆಳವಣಿಗೆಯನ್ನು ಸರಕಾರದ ಸಾಧನೆಯ ರೂಪದಲ್ಲಿ ಘೋಷಿಸಿಕೊಂಡರು ''ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ''. ಏಕಾಏಕಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವೇನು? ಇದು ನಿಜಕ್ಕೂ ಧನಾತ್ಮಕ ಬೆಳವಣಿಗೆಯೋ ಅಥವಾ ಜನರ ಶೈಕ್ಷಣಿಕ ಬದುಕಿನಲ್ಲಾದ ಹಿನ್ನಡೆಯೋ ಎನ್ನುವುದನ್ನು ವಿಶ್ಲೇಷಿಸದೆಯೇ, ಸಚಿವರು ಮಾಧ್ಯಮಗಳ ಜೊತೆಗೆ ಹಂಚಿಕೊಂಡರು. ಏಕಾಏಕಿ ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಖ್ಯ ಕಾರಣ, ಅವರ ಆರ್ಥಿಕ ಸ್ಥಿತಿಗತಿಯಲ್ಲಾದ ಹಿನ್ನಡೆ. ಒಂದೆಡೆ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದ ಬಡ ಮಕ್ಕಳೆಲ್ಲ ಶಾಲೆ ತೊರೆದು ಜಮೀನ್ದಾರರ ತೋಟಗಳ ಜೀತದಾಳುಗಳಾಗಿ ಸೇರಿದ್ದರೆ, ಇತ್ತ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಧ್ಯಮವರ್ಗದ ವಿದ್ಯಾರ್ಥಿಗಳು ಆರ್ಥಿಕ ಕಾರಣಗಳಿಂದ ಖಾಸಗಿ ಶಾಲೆಗಳನ್ನು ತೊರೆದು ಸರಕಾರಿ ಶಾಲೆಗಳನ್ನು ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು. ಸರಿ. ಕನಿಷ್ಠ ಈ ಸಂದರ್ಭವನ್ನಾದರೂ ಸರಕಾರ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದಕ್ಕೆ ಪೂರಕವಾಗಿ ಬಳಸಬಹುದಿತ್ತು. ಆದರೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಪಕ್ಕಕ್ಕಿರಲಿ, ಹಿಜಾಬ್, ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಸರಕಾರ ಇನ್ನಷ್ಟು ಕುಲಗೆಡಿಸಿ ಬಿಟ್ಟಿದೆ. ಅನಿವಾರ್ಯ ಕಾರಣಗಳಿಂದ ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಪೋಷಕರು ಇದೀಗ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ.

ಕೊರೋನ ಮತ್ತು ಲಾಕ್‌ಡೌನ್ ಶಿಕ್ಷಣ ಕ್ಷೇತ್ರದ ಮೇಲೆ ಬೀರಿದ ದುಷ್ಪರಿಣಾಮ ಬಹುದೊಡ್ಡದು. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದ ಬಡವರ್ಗದ ಮಕ್ಕಳು ಶಾಲೆತೊರೆದಿದ್ದಾರೆ ಮಾತ್ರವಲ್ಲ, ಅವರು ಮತ್ತೆ ಶಾಲೆಗಳಿಗೆ ಮರಳುವುದು ಅನುಮಾನ ಎಂದು ವರದಿಗಳು ಹೇಳುತ್ತಿವೆ. ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳ ಗತಿಯೇನಾಗಿದೆ ಎನ್ನುವುದರ ಬಗ್ಗೆ ಅಧ್ಯಯನ ನಡೆದಿರುವುದು ತೀರಾ ಕಡಿಮೆ. ಮೊದಲನೆಯದಾಗಿ, ದೇಶದ ನೂರಾರು ಖಾಸಗಿ ಶಾಲೆಗಳು ಆರ್ಥಿಕ ಒತ್ತಡದ ಕಾರಣಗಳಿಂದ ಮುಚ್ಚಲ್ಪಟ್ಟಿವೆ ಮತ್ತು ದೊಡ್ಡ ಸಂಖ್ಯೆಯ ಖಾಸಗಿ ಶಾಲೆಗಳು ಆನ್‌ಲೈನ್ ಕಲಿಕೆಯ ಹೆಸರಿನಲ್ಲಿ ಅಲ್ಪಸ್ವಲ್ಪ ಜೀವ ಉಳಿಸಿಕೊಂಡಿವೆ. ಶಾಲೆಗಳ ಸ್ಥಿತಿಯೇ ಹೀಗಿರುವಾಗ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸ್ಥಿತಿ ಇನ್ನು ಹೇಗಿರಬೇಕು?
18 ದೊಡ್ಡ ರಾಜ್ಯಗಳ ಉದಾಹರಣೆಯನ್ನು ತೆಗೆದುಕೊಂಡರೆ, ಸರಕಾರಿ ಶಾಲೆಗಳಲ್ಲಿನ ದಾಖಲಾತಿಯಲ್ಲಿ ಗರಿಷ್ಠ ಹೆಚ್ಚಳ ದಾಖಲಾಗಿರುವುದು ಆಂಧ್ರಪ್ರದೇಶದಲ್ಲಿ. ಅಂದರೆ ಆ ರಾಜ್ಯದ ಸರಕಾರಿ ಶಾಲೆಗಳಲ್ಲಿನ ದಾಖಲಾತಿಯಲ್ಲಿ ಶೇ.14 ಹೆಚ್ಚಳವಾಗಿದೆ. ಅದೇ ರಾಜ್ಯದ ಖಾಸಗಿ ಶಾಲೆಗಳಲ್ಲಿನ ದಾಖಲಾತಿಯಲ್ಲಿ ಶೇ.13ರಷ್ಟು ಗರಿಷ್ಠ ಕಡಿತವಾಗಿದೆ. ಖಾಸಗಿ ಶಾಲೆಗಳಲ್ಲಿನ ದಾಖಲಾತಿಯು ತಮಿಳುನಾಡು ಮತ್ತು ಹಿಮಾಚಲಪ್ರದೇಶದಲ್ಲಿ ತಲಾ ಶೇ.8 ಕುಸಿದರೆ, ಗುಜರಾತ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ತಲಾ ಶೇ.7 ತಗ್ಗಿದೆ.

2020ರಲ್ಲಿ ಐದು ರಾಜ್ಯಗಳಲ್ಲಿಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳ ಹೆತ್ತವರ ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧದಷ್ಟು ಹೆತ್ತವರು ಶಾಲಾ ಶುಲ್ಕಕ್ಕಾಗಿ ತಮ್ಮ ಆದಾಯಗಳ ಶೇ.20ದಷ್ಟನ್ನು ಖರ್ಚು ಮಾಡುತ್ತಿದ್ದರು. ಶಾಲಾ ಶುಲ್ಕದಲ್ಲಿ ಏರಿಕೆಯಾಗಿದೆ ಎಂಬುದಾಗಿ ಶೇ.39ದಷ್ಟು ಹೆತ್ತವರು ಹೇಳಿದ್ದರು. ಶಾಲಾ ಶುಲ್ಕಗಳನ್ನು ಪಾವತಿಸುವಂತೆ ಹೆಚ್ಚಿನ ಹೆತ್ತವರ ಮೇಲೆ ಒತ್ತಡ ಹೇರಲಾಗಿತ್ತು ಹಾಗೂ ಸಾಂಕ್ರಾಮಿಕದಿಂದಾಗಿ ಶಾಲೆಗಳು ಮುಚ್ಚಿದ್ದರೂ ಮಕ್ಕಳ ಸಮವಸ್ತ್ರಗಳಿಗಾಗಿ ಹೆತ್ತವರಿಂದ ಶುಲ್ಕ ವಸೂಲು ಮಾಡಲಾಗಿತ್ತು.ಆನ್‌ಲೈನ್ ಮತ್ತು ಡಿಜಿಟಲ್ ಮಾದರಿಗಳಿಗೆ ಶಿಕ್ಷಣವು ಬದಲಾಯಿತಾದರೂ, ಕೆಲವು ವಿದ್ಯಾರ್ಥಿಗಳಿಗೆ ಅಗತ್ಯವಾದ ಹೆಚ್ಚುವರಿ ಡಿಜಿಟಲ್ ಬೆಂಬಲವನ್ನು ನೀಡಲು ಖಾಸಗಿ ಶಾಲೆಗಳಿಗೆ ಸಾಧ್ಯವಾಗಲಿಲ್ಲ . ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಮೂಲಭೂತ ಸೌಕರ್ಯಗಳು, ಅಗತ್ಯ ಸಿಬ್ಬಂದಿಯಲ್ಲೂ ಇಳಿಕೆಯಾಯಿತು. ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಇನ್ನೊಂದು ಕಾರಣವೆಂದರೆ, ಮುಖ್ಯವಾಗಿ ಕಡಿಮೆ ಶುಲ್ಕದ ಖಾಸಗಿ ಶಾಲೆಗಳಲ್ಲಿ ಮಾಡಲಾದ ಶಿಕ್ಷಕರ ಕಡಿತ. ಕೊರೋನ ವೈರಸ್ ಸಾಂಕ್ರಾಮಿಕ ಸೃಷ್ಟಿಸಿರುವ ಆರ್ಥಿಕ ಸಮಸ್ಯೆಯಂಥ ಸಂಕಷ್ಟದ ಕಾಲದಲ್ಲಿ, ಸರಕಾರಿ ಶಾಲೆಗಳಲ್ಲಿ ಸಿಗುವ ಉಚಿತ ಪ್ರಾಥಮಿಕ ಶಿಕ್ಷಣ ಹಾಗೂ ಮಧ್ಯಾಹ್ನದ ಬಿಸಿಯೂಟ ಮತ್ತು ಉಚಿತ ಸಮವಸ್ತ್ರಗಳಂಥ ಹೆಚ್ಚುವರಿ ಸವಲತ್ತುಗಳು ಜನರನ್ನು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಜನರನ್ನು ಆಕರ್ಷಿಸಿದವು. ಹಾಗಾಗಿ, ಮಕ್ಕಳು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ವರ್ಗಾವಣೆಗೊಂಡರು ಎಂದು ಎಎಸ್‌ಇಆರ್ 2021ರ ವರದಿ ಅಭಿಪ್ರಾಯಪಟ್ಟಿದೆ. ಆದರೆ ಇದನ್ನು ಸರಕಾರಿ ಶಾಲೆಗಳ ಯಶಸ್ಸು ಎಂದು ಯಾವಕಾರಣಕ್ಕೂ ಸಂಭ್ರಮಿಸುವಂತಿಲ್ಲ. ಕೊರೋನ ಕಾಲದ ಆರ್ಥಿಕ ಹಿಂಜರಿಕೆಯಿಂದಾಗಿ ಹೇಗೆ ಜನಸಾಮಾನ್ಯರ ಬದುಕು ಹಿಂದಕ್ಕೆ ಚಲಿಸಲ್ಪಟ್ಟಿತು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿ ದಾಖಲಾತಿಯಲ್ಲಿ ಇಳಿಕೆಯಾಗಿರುವುದು ಪ್ರಾಥಮಿಕ ಮತ್ತು ಪೂರ್ವ-ಪ್ರಾಥಮಿಕ ಮಟ್ಟಗಳಲ್ಲಿ ಮಾತ್ರ.

ಖಾಸಗಿ ಶಾಲೆಗಳ ಹಿರಿಯ ಪ್ರಾಥಮಿಕ, ಹೈಸ್ಕೂಲ್ ಮತ್ತು ಪಿಯುಸಿ (ಹೈಯರ್ ಸೆಕೆಂಡರಿ) ಮಟ್ಟಗಳಲ್ಲಿ ಇಳಿಕೆಯಾಗಿಲ್ಲ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ದಾಖಲಾತಿಯಲ್ಲಿನ ಏರಿಕೆಯ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ ಅಧಿಕವಾಗಿದೆ. ಅದು ಗ್ರಾಮೀಣ ಪ್ರದೇಶಗಳಲ್ಲಿ ಶೇ. 3.2 ಇದ್ದರೆ, ನಗರ ಪ್ರದೇಶಗಳಲ್ಲಿ ಶೇ. 2.4 ಆಗಿದೆ. ಅದೇ ವೇಳೆ, ಖಾಸಗಿ ಶಾಲೆಗಳ ವಿದ್ಯಾರ್ಥಿ ದಾಖಲಾತಿಯಲ್ಲಿನ ಇಳಿಕೆಯ ಪ್ರಮಾಣವು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ತಾತ್ಕಾಲಿಕವಾಗಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ಮತ್ತು ಸ್ವ-ಉದ್ಯೋಗ ಮಾಡುತ್ತಿದ್ದವರ ಕುಟುಂಬಗಳು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗಿದ್ದರಿಂದ ಇದು ಸಂಭವಿಸಿರಬಹುದು. ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ನೆಪವೊಡ್ಡಿ ದೇಶಾದ್ಯಂತ ಸಾವಿರಾರು ಶಾಲೆಗಳು ಮುಚ್ಚುತ್ತಿವೆ. ಮುಂದೊಂದು ದಿನ ಖಾಸಗಿ ಶಾಲೆಗಳು ಜನರಿಗೆ ದುಬಾರಿಯಾಗಿ ಪರಿಣಿಸಿ ಅಲ್ಲಿಂದ ವಿದ್ಯಾರ್ಥಿಗಳು ಹೊರ ಬೀಳತೊಡಗಿದರೆ ಅವರನ್ನು ಮಡಿಲಿಗೆ ಹಾಕಿಕೊಳ್ಳಲು ಒಂದೇ ಒಂದು ಸರಕಾರಿ ಶಾಲೆಗಳು ನಮ್ಮ ಬಳಿಯಿರುವುದಿಲ್ಲ.

ಶಿಕ್ಷಣ ಎಲ್ಲರ ಹಕ್ಕು ಎನ್ನುವ ಸಂವಿಧಾನದ ಆಶಯ ಮಣ್ಣುಪಾಲಾಗುವ ದಿನಗಳು ಎದುರಾಗಬಹುದು. ಸದ್ಯದ ಸಂದರ್ಭವನ್ನು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕೆ ಸರಕಾರವು ಪೂರಕವಾಗಿ ಬಳಸಿಕೊಳ್ಳಬೇಕು. ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ಮರಳಿದ ವಿದ್ಯಾರ್ಥಿಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಭಾಗವಾಗಿ, ಸರಕಾರಿ ಶಾಲೆಗಳಿಗೆ ಹೆಚ್ಚು ಅನುದಾನಗಳನ್ನು ಒದಗಿಸಿ ಅದರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಅಲ್ಲಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು. ಈಗಾಗಲೇ ಹಲವು ಸರಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತಿಸಲಾಗಿದೆ. ಅತ್ಯುತ್ತಮ ಶಿಕ್ಷಕರನ್ನು ಒದಗಿಸಿ, ಈ ಶಾಲೆಗಳನ್ನು ಬೆಳೆಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳೆಡೆಗೆ ಹರಿದು ಬರುವ ಸಾಧ್ಯತೆಗಳಿವೆ. ಇಲ್ಲವಾದರೆ, ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗುತ್ತಿದ್ದಂತೆಯೇ ಪೋಷಕರು ಮತ್ತೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳೆಡೆಗೆ ಸೇರಿಸುವ ದಿನಗಳು ಬರಬಹುದು. ಮತ್ತೆ ಸರಕಾರಿ ಶಾಲೆಗಳು ಪಾಳು ಬೀಳುವ ಸ್ಥಿತಿ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News