ಲೋಕಾಯುಕ್ತರಾಗಿ ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಪ್ರಮಾಣ ವಚನ ಸ್ವೀಕಾರ

Update: 2022-06-15 16:53 GMT

ಬೆಂಗಳೂರು, ಜೂ.15: ರಾಜ್ಯದ ನೂತನ ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಲೋಕಾಯುಕ್ತರಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.

ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಕನ್ನಡ ಭಾಷೆಯಲ್ಲಿ, ಭಗವಂತ ಮತ್ತು ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಗಮನಾರ್ಹವಾಗಿತ್ತು. ಲೋಕಾಯುಕ್ತರಾಗಿ ನ್ಯಾ.ಬಿ.ಎಸ್.ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದೊಡನೆಯೇ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಲೋಕಾಯುಕ್ತರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿ, ಶುಭ ಹಾರೈಸಿದರು.

ಲೋಕಾಯುಕ್ತರಾಗಿ ನೇಮಕವಾಗುವ ಮುನ್ನ ನ್ಯಾ.ಬಿ.ಎಸ್.ಪಾಟೀಲ್ ಅವರು ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿಯಾಗಿ ಹಾಗೂ ನಂತರ ಕರ್ನಾಟಕ ಲೋಕಾಯುಕ್ತದಲ್ಲಿ ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ವಸತಿ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಪಿ.ರಾಜೀವ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಲೋಕಾಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ ಸಂತೋಷ್ ಹೆಗಡೆ ಮತ್ತು ಪಿ. ವಿಶ್ವನಾಥ್ ಶೆಟ್ಟಿ ಅವರೂ ಸೇರಿದಂತೆ ಹಲವು ಗಣ್ಯರು, ಕರ್ನಾಟಕ ಉಚ್ಚ ನ್ಯಾಯಾಲಯವೂ ಒಳಗೊಂಡಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು, ವಕೀಲ ವೃಂದದ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಈ ಮುನ್ನ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಕರ್ನಾಟಕ ಲೋಕಾಯುಕ್ತ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಹೊರಡಿಸಿರುವ ಅಧಿಸೂಚನೆಯನ್ನು ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News