ಮುಸ್ಲಿಂ ಜನಸಂಖ್ಯೆ ಕುರಿತ ಚರ್ಚಾ ಕಾರ್ಯಕ್ರಮದ ವೀಡಿಯೋ ತೆಗೆದುಹಾಕುವಂತೆ ಝೀ ನ್ಯೂಸ್ ಗೆ ಸೂಚಿಸಿದ ಪ್ರಾಧಿಕಾರ

Update: 2022-06-15 10:29 GMT
YouTube/Zeenews

ಹೊಸದಿಲ್ಲಿ: ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ ಸೋಮವಾರ ಝೀ ನ್ಯೂಸ್ ವಾಹಿನಿಗೆ ಸೂಚನೆ ನೀಡಿ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಅದು ಪ್ರಸಾರ ಮಾಡಿದ 'ಕುದ್ರತ್ ಬಹಾನ ಹೈ, ಮುಸ್ಲಿಂ ಆಬಾದಿ ಬಡಾನಾ ಹೈ'( ಮುಸ್ಲಿಂ ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಕೃತಿ ಕೇವಲ ಒಂದು ನೆಪ) ಎಂಬ ಶೀರ್ಷಿಕೆಯ ಚರ್ಚಾಕಾರ್ಯಕ್ರಮದ ವೀಡಿಯೋವನ್ನು ವೆಬ್ ತಾಣದಿಂದ ತೆಗೆಯುವಂತೆ ಸೂಚನೆ ನೀಡಿದೆ. ನಿಯಂತ್ರಕ ಸಂಸ್ಥೆಯ ನೀತಿ ಸಂಹಿತೆಗಳನ್ನು ಈ ಕಾರ್ಯಕ್ರಮ ಉಲ್ಲಂಘಿಸಿದೆ ಎಂದು ಪ್ರಾಧಿಕಾರ ಹೇಳಿದೆ.

ಉತ್ತರ ಪ್ರದೇಶ ಸರಕಾರ ಪ್ರಸ್ತಾಪಿಸಿದ್ದ ಎರಡು ಮಕ್ಕಳ ನೀತಿಯ ಹಿನ್ನೆಲೆಯಲ್ಲಿ ಈ ಚರ್ಚಾಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಭಲ್ ಕ್ಷೇತ್ರದ ಸಮಾಜವಾದಿ ಸಂಸದ ಶಫೀಖುರ್ ರಹಮಾನ್ ಬರ್ಖ್ ಅವರು ಕಳೆದ ವರ್ಷ ನೀಡಿದ ಹೇಳಿಕೆಯಲ್ಲಿ "ಎಷ್ಟು ಮಕ್ಕಳು ಹುಟ್ಟುತ್ತಾರೆ ಎಂಬುದುಪ್ರಕೃತಿಯ ನಿಯಂತ್ರಣದಲ್ಲಿದೆ. ನಾವೆಲ್ಲಾ ಅಲ್ಲಾಹ್ ನ ಮಕ್ಕಳು, ಇದನ್ನು (ಸಂತಾನೋತ್ಪತ್ತಿಯನ್ನು) ಅಡ್ಡಿಪಡಿಸುವ ನೈಸರ್ಗಿಕ ಹಕ್ಕು ನಮ್ಮಲ್ಲಿ ಯಾರಿಗೂ ಇಲ್ಲ" ಎಂದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು,

ಸೋಮವಾರ ಆದೇಶ ಹೊರಡಿಸಿದ ಪ್ರಾಧಿಕಾರದ ಅಧ್ಯಕ್ಷ ಎ ಕೆ ಸಿಕ್ರಿ, "ಯಾವುದೇ ಸೂಕ್ತ ಪುರಾವೆಯಿಲ್ಲದೆ ಈ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ, ಅದರ ಶೀರ್ಷಿಕೆಗೆ ಸಮರ್ಥನೆ ನೀಡಲು ಝೀ ವಿಫಲವಾಗಿದೆ" ಎಂದು ಹೇಳಿದರು.

ಈ ಶೀರ್ಷಿಕೆ ಆಯ್ದುಕೊಂಡಿರುವುದು ಹಾಗೂ  ಚಾನಲ್ ಪ್ರಯೋಗಿಸಿದ ಪದಗಳನ್ನು ನೋಡಿದಾಗ ಈ ಕಾರ್ಯಕ್ರಮದ ಹಿಂದೆ ಒಂದು ಅಜೆಂಡಾ ಇರುವಂತಿದೆ ಎಂದು ಅವರು ಹೇಳಿದರು.

ಸರಕಾರದ ಎರಡು ಮಕ್ಕಳ ನೀತಿ ಕುರಿತು ನಿಜವಾಗಿಯೂ ಚರ್ಚಿಸಲು ಬಯಸಿದ್ದರೆ ಏಕಪಕ್ಷೀಯ ಶೀರ್ಷಿಕೆ ನೀಡುವ ಬದಲು ತಟಸ್ಥ ಧೋರಣೆಯ ಶೀರ್ಷಿಕೆ ನೀಡಬೇಕಾಗಿತ್ತು ಎಂದು ಹೇಳಿದ ಪ್ರಾಧಿಕಾರ ಮುಂದೆ ಇಂತಹ ಕಾರ್ಯಕ್ರಮ ಪ್ರಸಾರ ಮಾಡುವ ಮುನ್ನ ಎಚ್ಚರ ವಹಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News