ಜೂ.16ರಿಂದ ಸಿಇಟಿ ಪರೀಕ್ಷೆ; ಅಕ್ರಮ ತಡೆಯಲು ವಿಡಿಯೋ ಚಿತ್ರೀಕರಣ: ಸಚಿವ ಅಶ್ವತ್ಥನಾರಾಯಣ

Update: 2022-06-15 11:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.15: ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಸೇರಿದಂತೆ ಫಾರ್ಮಸಿ ವೃತ್ತಿಪರ ಕೋರ್ಸುಗಳಿಗೆ ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ)ಯು ಜೂ.16, 17 ಮತ್ತು 18ರಂದು ನಡೆಯಲಿದೆ. ಪರೀಕ್ಷಾ ಪ್ರಕ್ರಿಯೆಯನ್ನೂ ಸಮಗ್ರವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬುಧವಾರ ಸಿಇಟಿ ವಿವರಗಳನ್ನು ಪ್ರಕಟಿಸಿದ ಅವರು, ಈ ಬಾರಿ ಸಿಇಟಿ ಪರೀಕ್ಷೆಯ ಪ್ರಶ್ನೆಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಕೊಡಲಾಗುವುದು. ಒಟ್ಟು 2,16,525 ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದು, ಜೂ.18ರಂದು ನಡೆಯುವ ಕನ್ನಡ ಭಾಷೆ ಪರೀಕ್ಷೆಗೆ 1,708 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

`ಜೂ.16ರ ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. ಜೂ.17ರ ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿದೆ. ಜೂ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು. 

‘ಈ ಬಾರಿ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 87 ಕೇಂದ್ರಗಳು ಬೆಂಗಳೂರಿನಲ್ಲಿವೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ಬಾರಿ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನೂ ವಿಡಿಯೋ ಚಿತ್ರೀಕರಣ ಮಾಡಲಾಗುವುದು’ ಎಂದರು.

ಪ್ರತಿಯೊಂದು ಕೇಂದ್ರಕ್ಕೂ ಸಹಾಯಕ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರನ್ನು ಪರೀಕ್ಷಾ ವೀಕ್ಷಕರಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ, 486 ವೀಕ್ಷಕರು, 972 ವಿಶೇಷ ತಪಾಸಣಾ ದಳದ ಸದಸ್ಯರು, 486 ಪ್ರಶ್ನೆಪತ್ರಿಕೆ ಪಾಲಕರು, 9,600 ಕೊಠಡಿ ಮೇಲ್ವಿಚಾರಕರು ಮತ್ತು 20 ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ಸಿಇಟಿ ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಪ್ರವೇಶ ನಿರ್ಬಂಧಗಳು

ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು. ಮೊದಲ ಗಂಟೆ ಬಾರಿಸಲಿರುವ ನಿಗದಿತ ಅವಧಿಗಿಂತಲೂ ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ (ಅಡ್ಮಿಶನ್ ಟಿಕೆಟ್) ಮತ್ತು ಯಾವುದಾದರೂ ಒಂದು ಸೂಕ್ತ ಗುರುತಿನ ಪತ್ರವನ್ನು ತರಬೇಕು. ಯಾವುದೇ ತರಹದ ಕೈಗಡಿಯಾರಗಳನ್ನು ಕಟ್ಟಿಕೊಂಡು ಬರುವಂತಿಲ್ಲ. ಟ್ಯಾಬ್, ಮೊಬೈಲ್, ಕ್ಯಾಲ್ಕುಲೇಟರುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News