ಪೌರಕಾರ್ಮಿಕ ಸಮಾವೇಶ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹ

Update: 2022-06-15 17:41 GMT

ಬೆಂಗಳೂರು, ಜೂ.15: ಬಿಬಿಎಂಪಿ ಪೌರಕಾರ್ಮಿಕರ ಸಂಘದ ವತಿಯಿಂದ ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಗರದ ಸೀಗೇಹಳ್ಳಿಯಲ್ಲಿ ಸಮಾವೇಶವನ್ನು ನಡೆಸಲಾಯಿತು. ಖಾಯಂ ಪೌರಕಾರ್ಮಿಕರಿಗೆ ನೀಡುವ ಎಲ್ಲಾ ಸೇವಾ ಸೌಲಭ್ಯಗಳು ಸೇರಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಸರ್ವಾನುಮತದಿಂದ ಸಮಾವೇಶದಲ್ಲಿ ಮಂಡಿಸಲಾಯಿತು.

ಪೌರಕಾರ್ಮಿಕ ಮುಖ್ಯಸ್ಥೆ ಕಾಮ್ರೇಡ್ ರತ್ನ ಸಮಾವೇಶದಲ್ಲಿ ಭಾಗವಹಿಸಿ, ಮೊದಲಿದ್ದ ಗುತ್ತಿಗೆ ಪದ್ಧತಿಯನ್ನು ತೊಲಗಿಸಲು ಸಂಘಟನೆ ಮಾಡಿದ ಹೋರಾಟದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

“ಸಂಘಟನೆಯ ಮೂಲಕ ಮಾತ್ರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಹೀಗಾಗಿ ಸಂಘಟನೆಯನ್ನು ಇನ್ನೂ ಬೃಹತ್ ಮಟ್ಟದಲ್ಲಿ ಕಟ್ಟಬೇಕಾಗಿದೆ. ಇದಕ್ಕಾಗಿ ಎಲ್ಲಾ ಪೌರಕಾರ್ಮಿಕರು ಒಗ್ಗಟ್ಟಾಗಿ ದುಡಿಯಬೇಕು” ಎಂದು ಕಾರ್ಮಿಕರಿಗೆ ಅವರು ಕರೆ ಕೊಟ್ಟರು. 

ಪೌರಕಾರ್ಮಿಕ ಮುಖಂಡ ಕಾಮ್ರೇಡ್ ಬಾಲರಾಜು ಮಾತನಾಡಿ, “ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಪೌರಕಾರ್ಮಿಕರು ವಾಸಿಸುತ್ತಿದ್ದ ಶೆಡ್‍ಗಳು ಕುಸಿದುಬಿದ್ದು ಭಾರೀ ನಷ್ಟ ಉಂಟಾಗಿ, ವಾಸಿಸಲು ಮನೆಗಳು ಇಲ್ಲದೆ ಇರುವಂತಹ ಸಮಯದಲ್ಲಿ ಸಂಘಟನೆ ಮಾಡಿದ ಹೋರಾಟದ ಫಲದಿಂದ ಮಳೆಯಿಂದ ನಷ್ಟ ಅನುಭವಿಸಿದ ಪ್ರತಿ ಪೌರಕಾರ್ಮಿಕ ಕುಟುಂಬಗಳಿಗೆ ತಲಾ 25 ಸಾವಿರ ರೂ.ಗಳನ್ನು ಬಿಬಿಎಂಪಿ ಪರಿಹಾರವನ್ನಾಗಿ ನೀಡಿದೆ. ಪ್ರತಿ ಪೌರಕಾರ್ಮಿಕ ಕುಟುಂಬಗಳಿಗೂ ಬಿಬಿಎಂಪಿ ವತಿಯಿಂದ ಮನೆಗಳನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ದೊಡ್ಡ ಹೋರಾಟವನ್ನು ಮಾಡಬೇಕು” ಎಂದು ಎಲ್ಲಾ ಕಾರ್ಮಿಕರಿಗೂ ಕರೆ ಕೊಟ್ಟರು. 

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಮ್ರೇಡ್ ಮೈತ್ರೇಯಿ, “ಪೌರಕಾರ್ಮಿಕರು ದಲಿತರೆಂಬ ಕಾರಣಕ್ಕೆ ಮತ್ತು ಅದರಲ್ಲೂ ಬಹುಪಾಲು ಕಾರ್ಮಿಕರು ಮಹಿಳೆಯರೆಂಬ ಕಾರಣಕ್ಕೆ ಬಿಬಿಎಂಪಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಕಾರ್ಮಿಕ ಕಾನೂನುಗಳು ಮತ್ತು ಸಂವಿಧಾನ ಬದ್ಧವಾಗಿ ಪೌರಕಾರ್ಮಿಕರಿಗೆ ದೊರಕಬೇಕಾದ ಹಕ್ಕುಗಳನ್ನು ಸರಕಾರ ಕಸಿದು ಕೊಂಡಿದೆ. ಇದರ ವಿರುದ್ಧ ರಾಜ್ಯವ್ಯಾಪಿ ಪೌರಕಾರ್ಮಿಕರು ಸಂಘಟನೆ ಮೂಲಕ ಬೃಹತ್ ಹೋರಾಟವನ್ನು ಕಟ್ಟೋಣ” ಎಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News