ಸರಕಾರಕ್ಕೆ ಸೇನೆ ಹೊರೆಯಾಯಿತೆ?

Update: 2022-06-18 02:37 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ಶತ್ರುಗಳಿಗೆ ಎದೆಗೊಡಬೇಕಾಗಿದ್ದ ಭವಿಷ್ಯದ ಯೋಧರು ತನ್ನದೇ ಸರಕಾರದ ಗುಂಡಿಗೆ ಎದೆಯೊಡ್ಡಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ದೇಶದ ಶಕ್ತಿಯಾಗಿ ದೇಶವನ್ನು ಕಾಯಬೇಕಾಗಿದ್ದ ಯುವಶಕ್ತಿಯ ವಿರುದ್ಧ ತನ್ನದೇ ಸೇನೆಯ ಮೂಲಕ ಜಲಫಿರಂಗಿಗಳನ್ನು, ಅಶ್ರುವಾಯುಗಳನ್ನು ಸಿಡಿಸುತ್ತಿದೆ. ಇತ್ತೀಚೆಗಷ್ಟೇ ಈ ದೇಶದ ರೈತರ ವಿರುದ್ಧ ಪ್ರಯೋಗಿಸಲಾಗಿದ್ದ ಬಂದೂಕಿನ ಗುರಿ, ಈಗ ಈ ದೇಶದ ಭಾವಿ ಸೈನಿಕರ ಕಡೆಗೆ ತಿರುಗಿದೆ. ಬಹುಶಃ ‘ಜೈ ಜವಾನ್-ಜೈ ಕಿಸಾನ್’ ಘೋಷಣೆಯ ಬಹಿರಂಗ ಅಣಕ ನಡೆಯುತ್ತಿರುವುದು ಇದೇ ಮೊದಲು. ಸೈನಿಕರಾಗುವ ಆಸೆಗೆ ಭಗ್ನ ತಂದ ಸರಕಾರದ ಯೋಜನೆಗಳಿಂದ ಆಕ್ರೋಶಿತರಾಗಿರುವ ಯುವಕರನ್ನು ‘ಉಗ್ರಗಾಮಿಗಳು’ ‘ಭಯೋತ್ಪಾದಕರು’ ಎಂದೆಲ್ಲ ಕರೆದು ಅವರ ಹೋರಾಟವನ್ನು ದಮನಿಸುವ ಪ್ರಯತ್ನವೊಂದು ಬಾಕಿ ಉಳಿದಿದೆ. ಈ ಹಿಂದೆ, ಭಾರತದ ಸೇನೆಯೊಳಗಿರುವ ಯೋಧರು ತಮಗೆ ದೊರಕುತ್ತಿದ್ದ ಆಹಾರಗಳ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿ ಸರಕಾರದ ಪಾಲಿಗೆ ದೇಶದ್ರೋಹಿಗಳಾಗಿದ್ದರು. ಇದೀಗ, ಸೇನೆ ಸೇರುವ ಹಂಬಲಿಕೆಯಲ್ಲಿರುವ ಯುವ ಸಮುದಾಯವೇ ಸರಕಾರದ ಪಾಲಿಗೆ ದೇಶದ್ರೋಹಿಗಳಾಗಿ ಪರಿವರ್ತನೆಯಾಗುತ್ತಿದ್ದಾರೆ. ‘ಅಗ್ನಿಪಥ್-ಅಗ್ನಿವೀರ್’ ಎಂಬ ರಮ್ಯ ಮತ್ತು ರೋಚಕವಾದ ನಾಮಕರಣದೊಂದಿಗೆ ಸೇನೆಯೊಳಗೆ ‘ಗುತ್ತಿಗೆಯಾಧಾರದಲ್ಲಿ ಸೈನಿಕರನ್ನು’ ತುರುಕುವ ಕೇಂದ್ರ ಸರಕಾರದ ನೂತನ ಯೋಜನೆಯು, ಇದೀಗ ಯುವ ಜನರ ‘ಪ್ರತಿಭಟನೆಯ ಅಗ್ನಿ’ಗೆ ಆಹುತಿಯಾಗುತ್ತಿದೆ.

ಉತ್ತರ ಭಾರತದಲ್ಲಿ ಸೇನೆಗೆ ಸೇರುವ ಕನಸು ಕಂಡು ಹಗಲಿರುಳು ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದ್ದ ತರುಣರ ಉತ್ಸಾಹಕ್ಕೆ ಕೇಂದ್ರ ತಣ್ಣೀರು ಎರಚಿದೆ. ಇದೀಗ ನಿರಾಶೆಗೊಂಡ ಯುವಕರ ಆಕ್ರೋಶದ ಬೆಂಕಿಗೆ ಉತ್ತರ ಭಾರತ ನಲುಗುತ್ತಿದೆ. ಅಗ್ನಿಪಥ್ ಯೋಜನೆಯ ಮೂಲಕ ಸರಕಾರ ಬೆಂಕಿಯ ಜೊತೆಗೆ ಸರಸವಾಡಲು ಹೊರಟಿದೆ ಎಂದು ಸ್ವತಃ ಬಿಜೆಪಿಯೊಳಗಿರುವ ನಾಯಕರು, ನಿವೃತ್ತ ಹಿರಿಯ ಸೇನಾಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸೇನೆಯ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಬಹುದಾದ, ಅದರ ರಚನೆಗೆ ತೀವ್ರ ಸ್ವರೂಪದಲ್ಲಿ ಧಕ್ಕೆ ತರಬಹುದಾದ, ವಿಶ್ವದಲ್ಲೇ ಸಮರ್ಥ ಭೂಸೇನೆಯನ್ನು ಹೊಂದಿರುವ ಹೆಗ್ಗಳಿಕೆಗೆ ಕುಂದು ತರಬಹುದಾದ ಈ ಯೋಜನೆಯನ್ನು ತಕ್ಷಣವೇ ಹಿಂದೆಗೆದುಕೊಳ್ಳಿ ಎಂದು ಬಿಜೆಪಿಯೊಳಗಿರುವ ನಾಯಕರೇ ಕೈ ಮುಗಿದು ಕೇಳುತ್ತಿದ್ದಾರೆ. ಸಾಧಾರಣವಾಗಿ ಪೌರ ಕಾರ್ಮಿಕರನ್ನು ಗುತ್ತಿಗೆಯಾಧಾರದಲ್ಲಿ ತೆಗೆದುಕೊಂಡು ಅವರನ್ನು ದುಡಿಸಿ ಮೂಲೆಗೆಸೆಯುವ ಪರಿಪಾಠವೊಂದು ದೇಶದಲ್ಲಿ ಅಸ್ತಿತ್ವದಲ್ಲಿದೆ. ಒಬ್ಬ ನಾಗರಿಕನಿಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳನ್ನು ಕೊಟ್ಟು ಅವರಿಂದ ಅಧಿಕೃತವಾಗಿ ದುಡಿಸಿಕೊಳ್ಳುವ ಬದಲು ಹೆಚ್ಚಿನ ಮಹಾನಗರಪಾಲಿಕೆಗಳು ಪೌರಕಾರ್ಮಿಕರನ್ನು ಗುತ್ತಿಗೆಯಾಧಾರದಲ್ಲಿ ನೇಮಕಗೊಳಿಸಿ ಅಗತ್ಯವಿದ್ದಾಗ ಬಳಸಿ, ಬೇಡವಾದಾಗ ಕಿತ್ತೆಸೆಯುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ ‘ಅತಿಥಿ ಉಪನ್ಯಾಸಕ’ರು ಇದೇ ರೀತಿಯ ಶೋಷಣೆಗೀಡಾಗುತ್ತಾರೆ. ಶಿಕ್ಷಕರು ಅಥವಾ ಕಾರ್ಮಿಕರಿಗೆ ವೇತನ ನೀಡುವುದಕ್ಕೆ ಬೊಕ್ಕಸದಲ್ಲಿ ಅಸಾಧ್ಯವಾದಾಗ ಈ ತಂತ್ರವನ್ನು ಬಳಸಲಾಗುತ್ತದೆ.

ಖಾಸಗಿ ಸಂಸ್ಥೆಗಳಂತೂ ಇಂತಹ ಉಪನ್ಯಾಸಕರನ್ನು ಬಳಸಿಕೊಂಡೇ ತಮ್ಮ ಶಾಲೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿವೆ. ಇದೀಗ ಈ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಸೇನೆಯೊಳಗೂ ತುರುಕಿಸುವುದಕ್ಕೆ ಸರಕಾರ ಹೊರಟಿದೆಯೇ ಎನ್ನುವ ಪ್ರಶ್ನೆಯೊಂದು ತಲೆಯೆತ್ತಿದೆ. ಸೇನೆಗೆ ಅಧಿಕೃತ ನೇಮಕಗೊಳಿಸಿ ಅವರನ್ನು ಇಟ್ಟುಕೊಂಡರೆ ಸೇವಾವಧಿಯಲ್ಲಿ ಮತ್ತು ನಿವೃತ್ತಿಯ ಬಳಿಕ ಸರ್ವ ಸವಲತ್ತುಗಳನ್ನು ನೀಡಬೇಕಾಗುತ್ತದೆ. ಅದರ ಬದಲಿಗೆ ಗುತ್ತಿಗೆ ರೂಪದಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ಸೇವೆಗೆ ಆಯ್ಕೆ ಮಾಡಿ, ಅವರಿಂದ ತಳಸ್ತರದ ಸೇವೆಗಳನ್ನು ಅಂದರೆ ‘ಅಡುಗೆಯಂತಹ ಪರಿಚಾರಿಕೆಯ ಕೆಲಸ, ಮೇಲಧಿಕಾರಿಗಳ ಸೇವೆ... ಇತ್ಯಾದಿ’ಗಳನ್ನು ಮಾಡಿಸಲು ಮುಂದಾಗಿವೆ ಎಂದು ಸರಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ. ‘ಸೈನಿಕರ ಹೆಸರಲ್ಲಿ ರಾಜಕೀಯ ನಡೆಸಿ’ ‘ಹುತಾತ್ಮ ಸೈನಿಕರ ಹೆಸರನ್ನು ಬಳಸಿ ಮತ ಯಾಚಿಸಿ’ ಇದೀಗ ಸೈನಿಕರಿಗೆ ನೀಡ ಬೇಕಾದ ವೇತನ, ಸವಲತ್ತುಗಳನ್ನು ನೀಡಲು ಸರಕಾರದ ಬಳಿ ಹಣವಿಲ್ಲವೆ? ಎಂದು ರಾಜಕೀಯ ವಿರೋಧಿಗಳು ಕೇಳುವಂತಾಗಿದೆ. ಈ ಗುತ್ತಿಗೆ ಸೈನಿಕರ ಮೂಲಕ ದೇಶದ ಸೇನೆಯ ಗುಣಮಟ್ಟ ಅತ್ಯಂತ ಕಳಪೆಯಾಗುವ ಸಾಧ್ಯತೆಯ ಬಗ್ಗೆಯೂ ನಿವೃತ್ತ ಸೈನಿಕರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೇನೆ ಎನ್ನುವುದು ಉಳಿದೆಲ್ಲ ವೃತ್ತಿಯಂತಲ್ಲ. ಬರೇ ಉದ್ಯೋಗಕ್ಕಾಗಿ ಯಾರೂ ಸೇನೆಯನ್ನು ಸೇರುವುದಿಲ್ಲ. ಸೇನೆಗೆ ಸುಲಭದಲ್ಲಿ ಅರ್ಹತೆಯೂ ಸಿಗುವುದಿಲ್ಲ. ಅದಕ್ಕಾಗಿ ಒಬ್ಬ ಯುವಕ ಬದುಕಿನುದ್ದಕ್ಕೂ ಅಪಾರ ಶ್ರಮವನ್ನು ವಹಿಸಿರುತ್ತಾನೆ. ಈ ದೇಶದ ಮೇಲೆ ಪ್ರೀತಿ ಮತ್ತು ಸೇನೆ ಸೇರುವ ಅದಮ್ಯ ಆಸಕ್ತಿಯೇ ಈ ಶ್ರಮಕ್ಕೆ ಕಾರಣ.

ಉತ್ತರ ಭಾರತದಲ್ಲಂತೂ ಸೇನೆ ಸೇರುವುದಕ್ಕಾಗಿ ಯುವಕರು ಎಳವೆಯಲ್ಲೇ ದೈಹಿಕ ಕಸರತ್ತುಗಳನ್ನು ಶುರುಹಚ್ಚಿಕೊಳ್ಳುತ್ತಾರೆ. ಹಲವು ಸಂದರ್ಶನಗಳ ಬಳಿಕ ಸೇನೆ ಸೇರುವ ಯುವಕರು ಹಲವು ವರ್ಷಗಳ ತರಬೇತಿಯ ಮೂಲಕ ಸೇನೆಯ ಅವಿಭಾಜ್ಯ ಭಾಗವಾಗಿ ಬಿಡುತ್ತಾರೆ. ತಳಸ್ತರದಿಂದ ಬಂದ ಇಂತಹ ಯುವಕರೇ ಇಂದು ಭಾರತದ ಭೂ ಸೇನೆಯ ಅಡಿಗಲ್ಲಾಗಿದ್ದಾರೆ. ಇಂತಹ ಅಡಿಗಲ್ಲುಗಳು ಇದೀಗ ಅಲುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಸೇನೆ ಸೇರುವ ಆಕಾಂಕ್ಷಿಗಳಿಗೆ ‘ಅಗ್ನಿಪಥ್’ ಯೋಜನೆ ಭಾರೀ ಆಘಾತವನ್ನು ಕೊಟ್ಟಿದೆ. ಹಗಲು ರಾತ್ರಿ ದೈಹಿಕ ಕಸರತ್ತುಗಳ ಮೂಲಕ ತಮ್ಮನ್ನು ತಾವು ಸೇನೆಗೆ ಸಿದ್ಧಗೊಳಿಸುತ್ತಿರುವುದು ಕೇವಲ ನಾಲ್ಕು ವರ್ಷಗಳ ಗುತ್ತಿಗೆಯಾಧಾರದ ಕೆಲಸಕ್ಕೆ ಎನ್ನುವುದು ಅವರನ್ನು ತೀವ್ರ ನಿರಾಶೆಗೆ ತಳ್ಳಿದೆ. ಅವರೆಲ್ಲರೂ ತಮ್ಮ ಆಕ್ರೋಶವನ್ನು ಪ್ರತಿಭಟನೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಿವೃತ್ತ ಸೈನಿಕರಿಗೆ ಭತ್ತೆ ಇನ್ನಿತರ ಸವಲತ್ತುಕೊಡಬೇಕಾಗುತ್ತದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಇಂತಹದೊಂದು ಯೋಜನೆಯನ್ನು ರೂಪಿಸಿರುವ ಸರಕಾರ, ಭವಿಷ್ಯದಲ್ಲಿ ಸೇನೆಯನ್ನು ಎಂತಹ ಸ್ಥಿತಿಗೆ ತಳ್ಳಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ.

ಈ ಯೋಜನೆ ಸೇನೆಯ ನೈತಿಕ ಸ್ಥೈರ್ಯವನ್ನು ಹಂತ ಹಂತವಾಗಿ ಕೆಡಿಸಲಿದೆ ಎಂದು ಹಿರಿಯ ನಿವೃತ್ತ ಸೇನಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಯೋಧ ಪರಿಪೂರ್ಣ ತರಬೇತಿಯನ್ನು ಪಡೆಯುವುದಕ್ಕೇ ನಾಲ್ಕು ವರ್ಷಗಳು ಬೇಕು. ಆದರೆ ಈ ಗುತ್ತಿಗೆಯಾಧಾರದಲ್ಲಿ ಸೇನೆ ಸೇರಿದಾತನ ಒಟ್ಟು ಸೇವೆಯ ಅವಧಿಯೇ ನಾಲ್ಕು ವರ್ಷ. ಇಲ್ಲಿ ಸರಕಾರಕ್ಕೆ ದೊಡ್ಡ ಮಟ್ಟದಲ್ಲಿ ಹಣ ಉಳಿತಾಯ ವಾಗಬಹುದು. ಆದರೆ ಈತನ ಸೇವೆಯ ಗುಣಮಟ್ಟ ಸೇನೆಯ ಮೇಲೆ ತನ್ನ ದುಷ್ಪರಿಣಾಮವನ್ನು ಬೀರುವುದಿಲ್ಲವೆ? ಸೇನೆ ಎನ್ನುವುದು ಯಾವುದೋ ಒಂದು ಖಾಸಗಿ ಕಂಪೆನಿಯಲ್ಲ. ಅದು ಈ ದೇಶದ ಭದ್ರತೆಗೆ ಸಂಬಂಧಿಸಿದ ವ್ಯವಸ್ಥೆ. ನಾಲ್ಕು ವರ್ಷಕ್ಕಾಗಿ ಸೇನೆ ಸೇರಿದಾತ ತನ್ನ ಅವಧಿ ಮುಗಿದ ಬಳಿಕ ಎಲ್ಲಿ ಹೋಗಬೇಕು? ಸೇನೆಯಲ್ಲಿ ತರಬೇತಿ ಪಡೆದ ಆತನನ್ನು ಉಗ್ರವಾದಿ, ಭಯೋತ್ಪಾದನಾ ಸಂಘಟನೆಗಳು, ಶತ್ರು ದೇಶಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿಲ್ಲವೆ? ಎನ್ನುವ ಪ್ರಶ್ನೆಗಳೂ ಎದ್ದಿವೆ.

  ಇನ್ನೊಂದು ಅಂಶವನ್ನೂ ನಾವಿಲ್ಲಿ ಗಮನಿಸಬೇಕಾಗಿದೆ. ಈಗಾಗಲೇ ಸೇನಾ ತರಬೇತಿಯನ್ನು ಖಾಸಗಿ ಕಂಪೆನಿಗಳು ಅಥವಾ ಸರಕಾರೇತರ ಸಂಸ್ಥೆಗಳಿಗೆ ನೀಡಲು ಸರಕಾರ ಹಸಿರು ನಿಶಾನೆ ತೋರಿಸಿದೆ. ಕೆಲವು ನಿರ್ದಿಷ್ಟ ಸಂಸ್ಥೆಗಳೇ ಈ ಅಗ್ನಿಪಥ್ ಯೋಜನೆಗೆ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಪೂರೈಸಲಿವೆ. ಈ ಸಂಸ್ಥೆಗಳು ಕೇವಲ ವಾಣಿಜ್ಯ ದೃಷ್ಟಿಯನ್ನಷ್ಟೇ ಹೊಂದಿರಬೇಕು ಎಂದಿಲ್ಲ. ದೇಶದ ಪ್ರಜಾಸತ್ತಾತ್ಮಕ ಹಿತಾಸಕ್ತಿಯೊಂದಿಗೆ ಭಿನ್ನಮತವಿರುವ, ತನ್ನದೇ ಆದ ಅಜೆಂಡಾಗಳಿರುವ ಸಂಸ್ಥೆಗಳು ತಮ್ಮ ಅಭ್ಯರ್ಥಿಗಳನ್ನು ಗುತ್ತಿಗೆಯಾಧಾರದಲ್ಲಿ ಸೇನೆಯೊಳಗೆ ತುರುಕಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸೇನೆಯ ಗೌಪ್ಯತೆಗೆ ಇದು ಭಾರೀ ದೊಡ್ಡ ಅಪಾಯವನ್ನು ತಂದೊಡ್ಡಲಿದೆ. ಸರಕಾರದ ಈ ಯೋಜನೆಯ ವಿರುದ್ಧ ಈಗಾಗಲೇ ದೇಶದ ಯುವಕರು ತಿರುಗಿ ಬಿದ್ದಿದ್ದಾರೆ. ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ರೈತರ ವಿರುದ್ಧ ಲಾಠಿ, ಜಲಫಿರಂಗಿ, ಅಶ್ರುವಾಯುಗಳನ್ನು ಬಳಸಿದ ಸರಕಾರ ಇದೀಗ ಈ ದೇಶದ ಭಾವಿ ಯೋಧರ ವಿರುದ್ಧ ಅವುಗಳನ್ನು ಬಳಸಲು ಹೊರಟಿದೆ. ತಮ್ಮ ಪಿಂಚಣಿಗಳಿಗಾಗಿ ಬೀದಿಗಿಳಿದ ನಿವೃತ್ತ ಸೈನಿಕರ ಕಣ್ಣಿಂದ ನೀರು ಒಸರುವಂತೆ ಮಾಡಿರುವ ಸರಕಾರ, ಇದೀಗ ಭವಿಷ್ಯದ ಸೇನಾಶಕ್ತಿಯಾಗಬಹುದಾಗಿದ್ದ ಯುವಕರ ಕಣ್ಣಿಂದಲೂ ನೀರು ಒಸರುವಂತೆ ಮಾಡುತ್ತಿದೆ.

ಬಹುಶಃ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಸರಕಾರ ತನ್ನ ಸೇನೆಯಲ್ಲಿರುವ ಯೋಧರನ್ನು ಒಂದು ಆರ್ಥಿಕ ಹೊರೆಯಾಗಿ ಪರಿಗಣಿಸುತ್ತಿದೆ. ರೈತರು ಮತ್ತು ಯೋಧರನ್ನು ನಿಕೃಷ್ಟವಾಗಿ ಕಂಡ ದೇಶ ಅದಕ್ಕಾಗಿ ಭಾರೀ ಬೆಲೆ ತೆರಬೇಕಾಗುತ್ತದೆ. ರೈತರ ವಿಷಯದಲ್ಲಿ ಈಗಾಗಲೇ ಕಹಿ ಉಂಡಿರುವ ಸರಕಾರ ಅದರಿಂದ ಪಾಠ ಕಲಿಯದೇ ಇದೀಗ ಭವಿಷ್ಯದ ಯೋಧರನ್ನು ಕೆಣಕಲು ಮುಂದಾಗಿರುವುದು ವಿಷಾದನೀಯ. ಲಾಲ್ ಬಹಾದುರ್ ಶಾಸ್ತ್ರಿಯವರ ‘ಜೈ ಜವಾನ್- ಜೈ ಕಿಸಾನ್’ ಘೋಷಣೆಗೆ ಇದು ಅಗ್ನಿಪರೀಕ್ಷೆಯ ಕಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News