ಅಮೆರಿಕದಲ್ಲಿ ಉಷ್ಣಮಾರುತ: ಸಾವಿರಾರು ಜಾನುವಾರುಗಳ ಸಾವು

Update: 2022-06-17 18:41 GMT
Credit: Adobe Stock

ವಾಷಿಂಗ್ಟನ್, ಜೂ.17: ಅಮೆರಿಕದಲ್ಲಿ ದಾಖಲೆ ಮಟ್ಟದ ಉಷ್ಣಮಾರುತ ಬೀಸಿದ್ದು ಕನ್ಸಾಸ್ ರಾಜ್ಯದಲ್ಲಿ 2000ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವುದಾಗಿ ‘ದಿ ಗಾರ್ಡಿಯನ್’ ವರದಿಮಾಡಿದೆ.

ಕನ್ಸಾಸ್‌ನ  ಕೃಷಿ ಕ್ಷೇತ್ರವೊಂದರಲ್ಲಿ ಸಾವಿರಾರು ಜಾನುವಾರುಗಳ ಮೃತದೇಹ ಬಿದ್ದುಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೇಶದೆಲ್ಲೆಡೆ ತಾಪಮಾನ ಅಧಿಕ ಮಟ್ಟಕ್ಕೆ ಏರಿರುವುದರಿಂದ ಜಾನುವಾರುಗಳು ಸಾವನ್ನಪ್ಪಿವೆ. ಜಾನುವಾರುಗಳ ಮೃತದೇಹವನ್ನು ವಿಲೇವಾರಿ ಮಾಡಲು ನೆರವಾಗುವಂತೆ ಕೋರಿ ಹಲವು ಕರೆಗಳು ಬಂದಿವೆ ಎಂದು ಕನ್ಸಾಸ್ ಆರೋಗ್ಯ ಮತ್ತು ಪರಿಸರ ಇಲಾಖೆ ಹೇಳಿದೆ. ಅಮೆರಿಕದ ಅಪ್ಪರ್ ಮಿಡ್ವೆಸ್ಟ್ ಮತ್ತು ಈಶಾನ್ಯ ಪ್ರದೇಶದಲ್ಲಿ ಉಷ್ಣ ಅಲೆ ಗರಿಷ್ಟ ಮಟ್ಟಕ್ಕೇರಲಿದೆ ಎಂದು ಅಧಿಕಾರಿಗಳು ಈ ಪ್ರಾಂತದ ಸುಮಾರು 120 ಮಿಲಿಯನ್ ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಮೆರಿಕದಲ್ಲಿ ಗೋಮಾಂಸ ಉತ್ಪಾದಿಸುವ ಅಗ್ರ 3 ರಾಜ್ಯಗಳಲ್ಲಿ ಕನ್ಸಾಸ್ ಕೂಡಾ ಸೇರಿದೆ. 1960ರ ಬಳಿಕ ದೇಶದಲ್ಲಿ ಉಷ್ಣಹವೆಯ ಆವರ್ತನ, ಅವಧಿ ಮತ್ತು ತೀವ್ರತೆ ನಿರಂತರ ಹೆಚ್ಚುತ್ತಿದೆ ಎಂದು ಅಮೆರಿಕದ ಪರಿಸರ ರಕ್ಷಣಾ ಏಜೆನ್ಸಿ(ಇಪಿಎ) ಹೇಳಿದೆ. ಇಂಡಿಯಾನ, ಕೆಂಟುಕಿ ಮತ್ತು ಓಹಿಯೊ ರಾಜ್ಯಗಳಲ್ಲಿ ತಾಪಮಾನ 43 ಡಿಗ್ರಿ ಸೆಲ್ಶಿಯಸ್ಗೆ ಏರಬಹುದು ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

 ಪದೇ ಪದೇ ತೀವ್ರವಾದ ತಾಪಮಾನದ ಸಮಸ್ಯೆಗೆ ಜಾಗತಿಕ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ. ಇವು ವಿನಾಶಕಾರಿ ಆರ್ಥಿಕ ಪರಿಣಾಮಗಳನ್ನೂ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 1980ರಿಂದ 2000ದ ನಡುವಿನ ಅವಧಿಯಲ್ಲಿ 32 ಯುರೋಪಿಯನ್ ದೇಶಗಳಲ್ಲಿ ಉಷ್ಣಮಾರುತದಿಂದ ಸುಮಾರು 70 ಬಿಲಿಯನ್ ಯುರೋ ಮೊತ್ತದಷ್ಟು ನಷ್ಟ ಸಂಭವಿಸಿದೆ ಎಂದು ಯುರೋಪಿಯನ್ ಎನ್‌ವೈರನ್‌ಮೆಂಟ್ ಏಜೆನ್ಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News