ಸಮಸ್ಯೆಗಳ ಸುಳಿಯಲ್ಲಿ ದೇಶದ ಆರೋಗ್ಯ

Update: 2022-06-20 03:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಕಳೆದೆರಡು ವರ್ಷ’ಗಳಿಂದ ಸರಕಾರ ಆರೋಗ್ಯ ಎಂದರೆ ‘ಕೊರೋನ’ ಎಂದು ಭಾವಿಸಿಕೊಂಡು ಕಾರ್ಯಕ್ರಮ ರೂಪಿಸುತ್ತಿದೆ. ಶ್ರೀಮಂತ ರಾಷ್ಟ್ರಗಳು ಮತ್ತು ಬಡ ರಾಷ್ಟ್ರಗಳು ಕೊರೋನವನ್ನು ಒಂದೇ ಕನ್ನಡಕದಿಂದ ನೋಡಬಾರದು. ಬಡ ರಾಷ್ಟ್ರಗಳು ಕೊರೋನಕ್ಕಿಂತ ಆತಂಕಕಾರಿ ರೋಗಗಳ ಜೊತೆಗೆ ಈಗಾಗಲೇ ಸೆಣಸಾಡುತ್ತಿವೆ. ಕೊರೋನ ವೈಭವೀಕರಣದಲ್ಲಿ ಇತರ ರೋಗಗಳನ್ನು ಮರೆತರೆ ಭಾರತದಂತಹ ದೇಶಗಳು ಆರೋಗ್ಯ ವಿಷಯದಲ್ಲಿ ಹಲವು ಶತಮಾನಗಳಷ್ಟು ಹಿಂದಕ್ಕೆ ಚಲಿಸಬೇಕಾಗಬಹುದು. ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಆರೋಗ್ಯ ಕ್ಷೇತ್ರಕ್ಕೆ ಹಲವು ಕೊಡುಗೆಗಳು ದೊರಕಿವೆಯಾದರೂ, ಕೊರೋನ ವೈಭವೀಕರಣದಲ್ಲಿ ಆ ಕೊಡುಗೆಗಳು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವಲ್ಲಿ ವಿಫಲವಾಗಿವೆ. ಆದುದರಿಂದಲೇ, ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರಕಾರ ಆರೋಗ್ಯವಂತ ದೇಶದ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಯೋಜನೆಗಳ ಮರು ವಿಮರ್ಶೆ ಅತ್ಯಗತ್ಯವಾಗಿದೆ. 2017ರೊಳಗೆ ಮಾರಣಾಂತಿಕ ಕಾಲಾ ಅಝಾರ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದೆಂದು ಕೇಂದ್ರ ಸರಕಾರ ಘೋಷಿಸಿತ್ತು. ಆದರೆ ಅದು ಸದ್ಯಕ್ಕಂತೂ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಪಿಲಾರಿಯಾಸಿಸ್ ಕಾಯಿಲೆಯು 2017ರೊಳಗೆ ಸರಕಾರವು ನಿರ್ಮೂಲನೆ ಮಾಡಲು ಬಯಸಿರುವ ಇನ್ನೊಂದು ರೋಗವಾಗಿದೆ. ಆದರೆ 2016ರವರೆಗೆ 8.7 ಲಕ್ಷ ಪ್ರಕರಣಗಳು ನೋಂದಾಯಿಸಲ್ಪಟ್ಟಿವೆ. ಭಾರತದ 258 ಜಿಲ್ಲೆಗಳಲ್ಲಿ ಈ ಕಾಯಿಲೆಯು ಇನ್ನೂ ಅಸ್ತಿತ್ವದಲ್ಲಿದೆ. ಇದೀಗ ಕೇಂದ್ರ ಸರಕಾರವು ಕಾಲಾಅಝಾರ್ ಹಾಗೂ ಪಿಲಾರಿಯಾಸಿಸ್ ಕಾಯಿಲೆಗಳನ್ನು ಮೂಲೋತ್ಪಾಟನೆಗೊಳಿಸುವ ಗುರಿಯನ್ನು ಕ್ರಮವಾಗಿ 2023 ಹಾಗೂ 2030ಕ್ಕೆ ವಿಸ್ತರಿಸಿದೆ.

2025ರೊಳಗೆ ಕ್ಷಯರೋಗದ ಮೂಲೋತ್ಪಾಟನೆ ಮಾಡುವ ಗುರಿಯನ್ನು ಹಾಕಿಕೊಂಡಿತ್ತಾ ದರೂ ಅದು ಸಾಧ್ಯವಾಗಿಲ್ಲ. ಆದಾಗ್ಯೂ ಈ ವಿಷಯದಲ್ಲಿ ಒಂದಿಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. 2020ರೊಳಗೆ ಪ್ರತಿ 1 ಲಕ್ಷ ಮಂದಿಯಲ್ಲಿ ಕ್ಷಯರೋಗಿಗಳ ಸಂಖ್ಯೆಯನ್ನು 142ಕ್ಕಿಳಿಸುವ ಗುರಿಯನ್ನು ಭಾರತ ಹೊಂದಿತ್ತು. ಆದರೆ 2019-21ರ ಸಾಲಿನಲ್ಲಿ ಭಾರತದಲ್ಲಿ ಪ್ರತಿ 1 ಲಕ್ಷ ಮಂದಿಯಲ್ಲಿ 312 ಮಂದಿ ಕ್ಷಯ ರೋಗಿಗಳಿದ್ದರು. ಹೀಗಾಗಿ 2025ರೊಳಗೆ ಟಿಬಿ ಕಾಯಿಲೆಯ ನಿರ್ಮೂಲನೆಯ ಗುರಿಯನ್ನು ಸಾಧಿಸಲಾಗುವುದೆಂಬ ಮೋದಿ ಸರಕಾರದ ಘೋಷಣೆ ಅಸಾಧ್ಯದ ಮಾತಾಗಿದೆ. ಕೊರೋನ ಗದ್ದಲದಲ್ಲಿ ಕ್ಷಯ ಬದಿಗೆ ಸರಿದಿದೆ. ಈ ರೋಗಕ್ಕೆ ಮೀಸಲಿಟ್ಟ ಅನುದಾನಗಳನ್ನು ಕೊರೋನ ವೈರಸ್ ವಿರುದ್ಧ ಹೋರಾಡಲು ಬಳಸಲಾಗಿದೆ. ಭವಿಷ್ಯದಲ್ಲಿ ಕೊರೋನಕ್ಕಿಂತಲೂ ಭೀಕರವಾಗಿ ಕ್ಷಯ ಕಾಡುವ ಆತಂಕವಿದೆ. ಪೌಷ್ಟಿಕ ಸೂಚಕಗಳ ಸುಧಾರಣೆಗಾಗಿ ಕೇಂದ್ರ ಸರಕಾರವು 2018ರಲ್ಲಿ ಪೋಷಣ್ ಅಭಿಯಾನವನ್ನು ಆರಂಭಿಸಿತ್ತು.ಮಕ್ಕಳು ಹಾಗೂ ಹದಿಹರೆಯದ ಬಾಲಕಿಯರಲ್ಲಿ ರಕ್ತಹೀನತೆಯ ಸಮಸ್ಯೆಯನ್ನು ವಾರ್ಷಿಕವಾಗಿ ಶೇ.3ರಷ್ಟು ಕಡಿಮೆಗೊಳಿಸುವುದು ಅದರ ಗುರಿಗಳಲ್ಲೊಂದಾಗಿದೆ. ಆದರೆ ಬದಲಿಗೆ ದೇಶಾದ್ಯಂತ ಮಕ್ಕಳಲ್ಲಿ ರಕ್ತಹೀನತೆಯ ಪಿಡುಗು ಹಲವಾರು ವರ್ಷಗಳಿಂದ ಹೆಚ್ಚುತ್ತಲೇ ಹೋಗುತ್ತಿದೆ. ಬಿಹಾರ, ರಾಜಸ್ಥಾನ ಹಾಗೂ ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಮಕ್ಕಳಲ್ಲಿನ ರಕ್ತಹೀನತೆಯ ಸಮಸ್ಯೆಯು ಕ್ರಮವಾಗಿ 3.2, 2.2,7.6 ಹಾಗೂ 2.4 ಶೇ.ಅಂಕಗಳಿಗೆ ಹೆಚ್ಚಿದೆಯೆಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)-5 ವರದಿ ಹೇಳಿದೆ.

ಇತರ ಎಲ್ಲಾ ಕ್ಷೇತ್ರಗಳ ಹಾಗೆ ವರ್ಷದಿಂದ ವರ್ಷಕ್ಕೆ ಆರೋಗ್ಯ ವಲಯದ ಮೇಲೆ ಸರಕಾರವು ಮಾಡುವ ವೆಚ್ಚ ಅಧಿಕವಾಗಬೇಕಿರುವುದು ಸಹಜ. ಆದರೆ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವನ್ನು ಗಣನೆಗೆ ತೆಗೆದುಕೊಂಡರೆ ಭಾರತವು 2021-22ರ ಸಾಲಿನಲ್ಲಿ ಕೇವಲ 0.34 ಶೇ. ಹಣವನ್ನು ವೆಚ್ಚ ಮಾಡುವ ಪ್ರಸ್ತಾವನೆಯನ್ನು ಹೊಂದಿತ್ತು. ಆದರೆ 2022-23ನೇ ಸಾಲಿನಲ್ಲಿ ಅದು 0.35 ಶೇ.ದಲ್ಲಿಯೇ ಸ್ಥಿರಗೊಂಡಿತ್ತು. ಆದರೆ 2020-21ನೇ ಸಾಲಿನಲ್ಲಿ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದ ಮೇಲೆ ಮಾಡಿದ ವೆಚ್ಚವು ಒಟ್ಟು ಆಂತರಿಕ ಉತ್ಪನ್ನದ 1.1 ಶೇ. ಆಗಿದೆ.

 ಆರೋಗ್ಯದ ಮೇಲೆ ಜನರು ತಮ್ಮ ಸ್ವಂತ ಹಣವನ್ನು ಅತ್ಯಧಿಕ ಪ್ರಮಾಣದಲ್ಲಿ ಖರ್ಚು ಮಾಡುವ ದೇಶಗಳ ಸಾಲಿನಲ್ಲಿ ಭಾರತ ಕೂಡಾ ಸೇರಿದೆ. ಇದರಿಂದಾಗಿ ಪ್ರತಿ ವರ್ಷ ಲಕ್ಷಾಂತರ ಮಂದಿ ಬಡತನದ ದವಡೆಗೆ ತಳ್ಳಲ್ಪಡುತ್ತಿದ್ದಾರೆ. ಹಲವಾರು ಆರೋಗ್ಯ ಯೋಜನೆಗಳನ್ನು ಘೋಷಿಸಿದ ಹೊರತಾಗಿಯೂ ಸರಕಾರವು ಈ ವಲಯಕ್ಕೆ ಸಮರ್ಪಕವಾದ ಮೊತ್ತವನ್ನು ವ್ಯಯಿಸುವಲ್ಲಿ ಯಾಕೆ ಹಿಂದೇಟು ಹಾಕುತ್ತಿದೆಯೆಂಬುದು ಬಿಡಿಸಲಾಗದ ಒಗಟಾಗಿದೆ.

ಭಾರತವು ಬಯಲು ಶೌಚ ಮುಕ್ತ ದೇಶವಾಗಲಿದೆಯೆಂದು ಪ್ರಧಾನಿ ನರೇಂದ್ರ ಮೋದಿಯವರು 2019ರ ಅಕ್ಟೋಬರ್ 2ರಂದು ಘೋಷಿಸಿದ್ದರು. ಕೇಂದ್ರ ಸರಕಾರ ಆರಂಭಿಸಿದ ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಪ್ರಧಾನಿಯವರು ಈ ಘೋಷಣೆಯನ್ನು ಮಾಡಿದ್ದರು. ಆದರೆ ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ನಿರಾಶದಾಯಕ ಚಿತ್ರಣವನ್ನು ನೀಡಿದೆ. ದೇಶದಲ್ಲಿ ಈಗಲೂ ಬಯಲು ಶೌಚ ಸಾಮಾನ್ಯವಾಗಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಶೇ.19ರಷ್ಟು ಕುಟುಂಬಗಳು ಯಾವುದೇ ಶೌಚಾಲಯ ಸೌಕರ್ಯವನ್ನು ಬಳಸುವುದಿಲ್ಲ . ಅವು ಬಯಲು ಶೌಚವನ್ನೇ ಮುಂದುವರಿಸಿವೆ ಎಂದು ವರದಿ ಹೇಳಿದೆ.

ಇನ್ನು ಆಯುಷ್ಮಾನ್ ಭಾರತ ಯೋಜನೆಯು ಭಾರೀ ಪ್ರಚಾರವನ್ನು ಪಡೆದ ಮೋದಿ ಸರಕಾರದ ಇನ್ನೊಂದು ಆರೋಗ್ಯ ಕಾರ್ಯಕ್ರಮವಾಗಿದೆ. ಗ್ರಾಮೀಣ ಜನರಿಗಾಗಿ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವುದು ಈ ಯೋಜನೆಯ ಒಂದು ಭಾಗವಾಗಿದೆ. ಈಗ ಇರುವ ಉಪ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 2022ರ ಡಿಸೆಂಬರ್ ಅಂತ್ಯದೊಳಗೆ 1.5 ಲಕ್ಷ ಆರೋಗ್ಯ ಹಾಗೂ ಕ್ಷೇಮ ಕೇಂದ್ರ (ಎಚ್‌ಡಬ್ಲುಸಿ)ಗಳಾಗಿ ಪರಿವರ್ತಿಸುವುದೇ ಯೋಜನೆಯ ಗುರಿಯಾಗಿದೆ.

2021ರ ಡಿಸೆಂಬರ್ ಅಂತ್ಯದ ವೇಳೆಗೆ 80,764 ಆರೋಗ್ಯ ಹಾಗೂ ಕ್ಷೇಮ (ಎಚ್‌ಡಬ್ಲುಸಿ)ಕೇಂದ್ರಗಳನ್ನು ಕಾರ್ಯಾರಂಭಿಸಿವೆ. ಆದರೆ, ಮೂರು ವರ್ಷಗಳಲ್ಲಿ ಸಾಧಿಸಲು ಉದ್ದೇಶಿಸಲಾದ ಒಟ್ಟು ಗುರಿಯ ಅರ್ಧದಷ್ಟನ್ನು ಕೂಡಾ ಸಾಧಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಇನ್ನೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2020-21ನೇ ಸಾಲಿನಲ್ಲಿ ದೇಶಾದ್ಯಂತದ ಪಿಎಚ್‌ಸಿಗಳಲ್ಲಿ 1969 ಲ್ಯಾಬ್‌ತಂತ್ರಜ್ಞರ ಕೊರತೆಯಿದೆ. ಕೆಲವು ದೊಡ್ಡ ರಾಜ್ಯಗಳಲ್ಲಿ ಸ್ಟಾಫ್ ನರ್ಸ್ ಗಳ ಅಪಾರ ಕೊರತೆಯಿದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ 1,409 ಹಾಗೂ ಒಡಿಶಾದಲ್ಲಿ 1,008 ನರ್ಸ್‌ಗಳ ಕೊರತೆಯಿದೆ. ಇದರ ಜೊತೆಗೆ ಸಾರ್ವಜನಿಕ ಆರೋಗ್ಯ ಕೇಂದ್ರಗಳು ತಜ್ಞ ವೈದ್ಯರುಗಳ ಕೊರತೆಯಿಂದಲೂ ಅವು ಬಳಲುತ್ತಿವೆ. ಶೇ. 83.2 ಜನರಲ್ ಸರ್ಜನ್‌ಗಳು,74.2ರಷ್ಟು ಪ್ರಸೂತಿ ತಜ್ಞರು ಹಾಗೂ ಸ್ತ್ರೀರೋಗ ತಜ್ಞರು, 82.2 ಶೇ. ಸಾಮಾನ್ಯ ವೈದ್ಯರು ಹಾಗೂ ಶೇ.80.6 ಶಿಶುರೋಗ ತಜ್ಞರ ಕೊರತೆಯನ್ನು ಅವು ಎದುರಿಸುತ್ತಿವೆ. ಔಷಧಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತದ 700 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಆದರೆ ಈ ಸೇವೆಗಳ ಕುರಿತು ಜನರಲ್ಲಿ ಸ್ಪಷ್ಟ ಅರಿವಿನ ಕೊರತೆ ಮತ್ತು ಅಲ್ಲಿ ಮಾರಾಟವಾಗುವ ಔಷಧಿಗಳ ಗುಣಮಟ್ಟದ ತಪಾಸಣೆಯ ಕೊರತೆಯಿಂದಾಗಿ, ಈ ಕಾರ್ಯಕ್ರಮವು ತನ್ನ ನೈಜಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಹಿಂದೆ ಬಿದ್ದಿದೆ.

ಸರಕಾರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಲ್ಲ ಎನ್ನುವಂತಿಲ್ಲ. ಆದರೆ ಯೋಜನೆಗಳು ತನ್ನ ಸ್ಪಷ್ಟ ಗುರಿಯನ್ನು ತಲುಪುವಲ್ಲಿ ಬಹುತೇಕ ವಿಫಲವಾಗಿವೆ. ಇದರ ಕಾರಣಗಳನ್ನು ಹುಡುಕುವುದು ಸದ್ಯದ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಕೊರೋನೋತ್ತರ ಕಾಲದಲ್ಲಿ ದೇಶವನ್ನು ಮುಕ್ಕಿ ತಿನ್ನಲು ಹೊಂಚು ಹಾಕುತ್ತಿರುವ ಕೋರೋನೇತರ ರೋಗಗಳ ವಿರುದ್ಧ ಜಾಗೃತವಾಗುವುದಕ್ಕೆ ಇದು ಸರಿಯಾದ ಸಂದರ್ಭವಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಆರೋಗ್ಯ ಕ್ಷೇತ್ರದ ಸುಧಾರಣೆಯ ಬಗ್ಗೆ ಪುನರಾವಲೋಕನ ನಡೆಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News