ಬಿಹಾರ: ಆಡಳಿತಾರೂಢ ಮೈತ್ರಿಕೂಟ ಸಂಯುಕ್ತ ಜನತಾದಳ - ಬಿಜೆಪಿ ನಡುವೆ ಶೀತಲ ಸಮರ

Update: 2022-06-20 02:17 GMT
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳಾದ ಸಂಯುಕ್ತ ಜನತಾದಳ ಮತ್ತು ಬಿಜೆಪಿ ನಡುವಿನ ಶೀತಲ ಸಮರ ರವಿವಾರ ತಾರಕಕ್ಕೇರಿದ್ದು, ಉಭಯ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ.

ಉತ್ತಮ ಆಡಳಿತದ ವಿಚಾರದಲ್ಲಿ ಉಭಯ ಪಕ್ಷಗಳು ಬಹಿರಂಗ ಸಮರಕ್ಕೆ ಇಳಿದಿದ್ದು, ಬಿಜೆಪಿಯ ಸಚಿವ ನೀರಜ್ ಕುಮಾರ್ ಸಿಂಗ್ ಬಬ್ಲೂ, "ಯಾವುದಾದರೂ ಪಕ್ಷಗಳು ಎನ್‍ಡಿಎ ತೊರೆಯಲು ಬಯಸಿದರೆ ಹಾಗೆ ಮಾಡಬಹುದು" ಎಂದು ಹೇಳಿರುವುದು ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದ ಬೆಂಕಿಗೆ ತುಪ್ಪ ಸುರಿದಿದೆ.

ಬಿಜೆಪಿ ಸಚಿವರ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಯು ವಕ್ತಾರ ಮತ್ತು ವಿಧಾನ ಪರಿಷತ್ ಸದಸ್ಯ ನೀರಜ್ ಕುಮಾರ್ ಅವರು, "ಅಲೀಗಢ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಬಳಿಕ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ಧ ಏಕೆ ಬುಲ್ಡೋಝರ್ ಹರಿಸಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

ರೈಲ್ವೆ ಆಸ್ತಿಗಳನ್ನು ಕಾಪಾಡುವುದು ರೈಲ್ವೆ ಸುರಕ್ಷಾ ಪಡೆ (ಆರ್‍ಪಿಎಫ್)ಯ ಕರ್ತವ್ಯ. ಆರ್‍ಪಿಎಫ್ ವೈಫಲ್ಯದ ಬಗ್ಗೆ ಬಿಜೆಪಿ ನಾಯಕರು ಏಕೆ ಚಕಾರ ಎತ್ತುತ್ತಿಲ್ಲ. ಆರ್‍ಪಿಎಫ್‍ನ ಜವಾಬ್ದಾರಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ವೈ ವರ್ಗದ ಭದ್ರತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು, ಕೇಸರಿ ಪಕ್ಷದ ಮುಖಂಡರಿಗೆ ಭದ್ರತೆ ಒದಗಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ಸುಭದ್ರ ಭವಿಷ್ಯ ಒದಗಿಸಲು ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಜೆಡಿಯು ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News